
ಉಚಿತ ಗ್ಯಾರಂಟಿ ಯೋಜನೆಗಳ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ತುಪ್ಪ, ಅಕ್ಕಿ, ಹಾಲು ಮತ್ತು ಬಸ್ ದರ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಉಚಿತ ಗ್ಯಾರಂಟಿ ಒಂದು ಕಡೆ, ಬೆಲೆ ಏರಿಕೆ ಮತ್ತೊಂದು ಕಡೆ; ಹೈಕೋರ್ಟ್ ಅಸಮಾಧಾನ
ದೀಪಾವಳಿ ಸಂದರ್ಭದಲ್ಲಿ ತುಪ್ಪದ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿದ ನ್ಯಾಯಪೀಠ, ಕಳೆದ ತಿಂಗಳು ಒಂದು ಕೆ.ಜಿ. ತುಪ್ಪದ ಬೆಲೆ 650 ರೂ. ಇತ್ತು. ಆದರೆ ಈಗ 850 ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದೆ. ಇಷ್ಟೊಂದು ಬೆಲೆ ಏರಿಕೆಯಾದರೆ ಜನರು ದೀಪಾವಳಿಗೆ ದೀಪವನ್ನಾದರೂ ಹೇಗೆ ಹಚ್ಚಬೇಕು ಎಂದು ಪ್ರಶ್ನಿಸಿದೆ.
ಸರ್ಕಾರ ಒಂದು ಕಡೆ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದ್ದರೆ, ಮತ್ತೊಂದೆಡೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಸಾಮಾನ್ಯ ಜನರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಉಚಿತ ಯೋಜನೆಗಳ ನಡುವೆಯೇ ಬೆಲೆ ಏರಿಕೆಯ ಹೊರೆ ಜನರ ಮೇಲೆ ಬೀಳುತ್ತಿರುವುದಕ್ಕೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
ಅರ್ಜಿಯೊಂದರ ವಿಚಾರಣೆ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ನ್ಯಾಯಪೀಠ ಅಸಮಾಧಾನ ಹೊರಹಾಕಿದೆ. ಸರ್ಕಾರದ ಯೋಜನೆಗಳು ಉಚಿತವಾಗಿದ್ದರೂ ಬೆಲೆ ಏರಿಕೆ ಮಾತ್ರ ಖಚಿತವಾಗಿದೆ ಎಂದು ವ್ಯಂಗ್ಯವಾಡಿದ ನ್ಯಾಯಪೀಠ, ಸರ್ಕಾರದ ಎಲ್ಲ ಯೋಜನೆಗಳೂ ಇದೇ ರೀತಿಯಲ್ಲಿವೆಯೇ ಎಂದು ಪ್ರಶ್ನಿಸಿದೆ.
ತುಪ್ಪದ ಬೆಲೆ 650 ರೂ.ನಿಂದ 850 ರೂ.ಗೆ ಏರಿಕೆ
ದೀಪಾವಳಿ ಸಂದರ್ಭದಲ್ಲಿ ತುಪ್ಪದ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿದ ನ್ಯಾಯಪೀಠ, ಕಳೆದ ತಿಂಗಳು ಒಂದು ಕೆ.ಜಿ. ತುಪ್ಪದ ಬೆಲೆ 650 ರೂ. ಇತ್ತು. ಆದರೆ ಈಗ 850 ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದೆ. ಇಷ್ಟೊಂದು ಬೆಲೆ ಏರಿಕೆಯಾದರೆ ಜನರು ದೀಪಾವಳಿಗೆ ಯಮದೀಪವನ್ನಾದರೂ ಹೇಗೆ ಹಚ್ಚಬೇಕು ಎಂದು ಪ್ರಶ್ನಿಸಿದೆ.
ಅಗತ್ಯ ವಸ್ತುಗಳ ಬೆಲೆ ಹೀಗೆಯೇ ಹೆಚ್ಚುತ್ತಾ ಹೋದರೆ ಸಾಮಾನ್ಯ ಜನರು ಜೀವನ ನಡೆಸುವುದಾದರೂ ಹೇಗೆ? ಜನರು ಎಲ್ಲಿಗೆ ಹೋಗಬೇಕು ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
ಅಕ್ಕಿ, ಹಾಲು, ಬಸ್ ಟಿಕೆಟ್ ದರ ಏರಿಕೆಗೂ ಕಳವಳ
ಒಂದು ಕೆ.ಜಿ. ಅಕ್ಕಿಯ ಬೆಲೆ 103 ರೂ. ಆಗಿರುವ ವಿಚಾರವೂ ನ್ಯಾಯಪೀಠದ ಗಮನಕ್ಕೆ ಬಂದಿದೆ. ಹಾಲಿನ ಬೆಲೆ ಹಾಗೂ ಬಸ್ ಟಿಕೆಟ್ ದರವೂ ಹೆಚ್ಚಳವಾಗಿದೆ. ಒಂದು ಕಡೆ ಸರ್ಕಾರ ಉಚಿತ ಯೋಜನೆಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ ದಿನಸಿ ಖರೀದಿ ಸೇರಿದಂತೆ ಸಾರಿಗೆ ವೆಚ್ಚವೂ ಜನರಿಗೆ ಹೊರೆಯಾಗುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಕ್ಕರೆ ಬೆಲೆ 90 ರೂ.ಗೆ ಏರಿಕೆಯಾಗುವ ಆತಂಕ
ಸರ್ಕಾರ ಟನ್ ಕಬ್ಬಿಗೆ 3,600 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ದೀಪಾವಳಿ ಮುಗಿದ ಬಳಿಕ ಒಂದು ಕೆ.ಜಿ. ಸಕ್ಕರೆಯ ಬೆಲೆ 90 ರೂ.ಗೆ ಏರಿಕೆಯಾಗುವ ಆತಂಕವನ್ನೂ ನ್ಯಾಯಪೀಠ ಪ್ರಸ್ತಾಪಿಸಿದೆ. ಹಳೆಯ ದಾಸ್ತಾನಿನ ವಸ್ತುಗಳಿಗೂ ಹೊಸ ಬೆಲೆ ವಿಧಿಸಲಾಗುತ್ತಿರುವ ವಿಚಾರವನ್ನು ಉಲ್ಲೇಖಿಸಿದೆ. ಇದೇ ವೇಳೆ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ದಾಸ್ತಾನು ಮಾಡಲಾಗಿದ್ದ ಅಕ್ಕಿ ಮತ್ತು ಗೋಧಿಯಲ್ಲಿ 320 ಕ್ವಿಂಟಲ್ ಅಕ್ಕಿ ಹಾಗೂ 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದಿರುವ ವಿಚಾರವೂ ವಿಚಾರಣೆ ವೇಳೆ ಪ್ರಸ್ತಾಪವಾಗಿದೆ.
ನವೆಂಬರ್ 11ಕ್ಕೆ ಮುಂದಿನ ವಿಚಾರಣೆ
ಮೈಸೂರು ಉಗ್ರಾಣದ ಹಿರಿಯ ವ್ಯವಸ್ಥಾಪಕರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಸರ್ಕಾರದ ಯೋಜನೆಗಳ ಕುರಿತು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ.

