
ಬಿಡದಿ ಟೌನ್‌ಶಿಪ್ ಭೂಸ್ವಾಧೀನ ; ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಸರ್ಕಾರದ ಭೂಸ್ವಾಧೀನ ಕ್ರಮದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಅಂಶಗಳಿಲ್ಲ ಎಂದು ಹೇಳಿತು.
ರಾಜ್ಯದಲ್ಲಿ ತೀವ್ರ ರಾಜಕೀಯ ಜಟಾಪಟಿ ಹಾಗೂ ರೈತರ ವಿರೋಧಕ್ಕೆ ಕಾರಣವಾಗಿದ್ದ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆಗೆ ತಡೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಹೈಕೋರ್ಟ್ ವಜಾಗೊಳಿಸಿದೆ. ಮೊದಲ ಹಂತದಲ್ಲಿ 516 ಎಕರೆ ಕೃಷಿ ಭೂಮಿ ಸ್ವಾಧೀನ ಅಂತಿಮ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಈ ಆದೇಶ ನೀಡಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಸರ್ಕಾರದ ಭೂಸ್ವಾಧೀನ ಕ್ರಮದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಅಂಶಗಳಿಲ್ಲ. ಅಭಿವೃದ್ಧಿ ಯೋಜನೆಗಳ ಬಗ್ಗೆ ಆಡಳಿತಾತ್ಮಕ ಅರ್ಹತೆಗಳ ಕುರಿತು ನ್ಯಾಯಾಲಯ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಕಾನೂನು ಉಲ್ಲಂಘನೆ ತೋರಿಸಿ ಎಂದ ನ್ಯಾಯಪೀಠ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, "ಸರ್ಕಾರವು ಭೂಸ್ವಾಧೀನಕ್ಕೂ ಮುನ್ನ ಯಾವುದೇ ಸಾಮಾಜಿಕ ಪರಿಣಾಮಗಳ ಅಧ್ಯಯನ ನಡೆಸಿಲ್ಲ. ಸಂತ್ರಸ್ತರ ಪುನರ್ವಸತಿಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ರೈತರು ಭೂಮಿ ನೀಡಲು ನಿರಾಕರಿಸಿದರೂ ಸುಮಾರು 9,400ಕ್ಕೂ ಅಧಿಕ ಎಕರೆ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಯೋಜನೆಯನ್ನು ವಿರೋಧಿಸಿ ರೈತರು 500 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ" ಎಂದು ವಾದ ಮಂಡಿಸಿದ್ದರು.
ಈ ವಾದ ಆಲಿಸಿದ ವಿಭಾಗೀಯ ಪೀಠವು, "ಈ ಇಡೀ ಪ್ರಕ್ರಿಯೆಯಲ್ಲಿ ನಿರ್ದಿಷ್ಟವಾಗಿ ಯಾವ ಕಾಯ್ದೆ ಹಾಗೂ ಕಾನೂನಿನ ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸಿ" ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ವಕೀಲರು, "ಸರ್ಕಾರವು ಹೊಸ ಭೂಸ್ವಾಧೀನ ಕಾಯ್ದೆಯಡಿ ಪ್ರಕ್ರಿಯೆ ನಡೆಸುತ್ತಿಲ್ಲ, ಬದಲಿಗೆ 2012ರ ಹಳೆ ಕಾಯ್ದೆ ಅನ್ವಯ ಪರಿಹಾರ ನೀಡುತ್ತಿದೆ" ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, "ಹೆಚ್ಚುವರಿ ಪರಿಹಾರ ನೀಡಲು ಸರ್ಕಾರ ನಿರ್ದಿಷ್ಟ ಕಾನೂನು ಚೌಕಟ್ಟು ಪಾಲಿಸುತ್ತಿರಬಹುದು. ಪ್ರಕ್ರಿಯೆಗಳು ಭಿನ್ನವಾಗಿರಬಹುದು. ಆದರೆ, ಮೂಲಭೂತವಾಗಿ ಯಾವ ನಿಯಮದ ಉಲ್ಲಂಘನೆಯಾಗಿದೆ ಎಂದು ತಿಳಿಸಿ. ನೀವು ವಕೀಲರಾಗಿದ್ದು, ಕಾನೂನು ಉಲ್ಲಂಘನೆಯನ್ನು ಮಾತ್ರ ನ್ಯಾಯಾಲಯದ ಗಮನಕ್ಕೆ ತರಬೇಕು. ಸರ್ಕಾರದ ಯೋಜನೆಯ ಆಡಳಿತಾತ್ಮಕ ನೀತಿ ಅಥವಾ ಅದರ ಮೆರಿಟ್ ಮೇಲೆ ನಾವು ಪ್ರಕರಣವನ್ನು ನಿರ್ಧರಿಸಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಅರ್ಜಿ ವಜಾಗೊಳಿಸಿತು.
ಪಿಐಎಲ್‌ನಲ್ಲಿ ಏನಿದೆ?
ವಕೀಲ ರಾಜೇಶ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಬಿಡದಿ ಬಳಿ 516 ಎಕರೆ ಜಮೀನು ಭೂಸ್ವಾಧೀನದ ಕುರಿತು ಜೂನ್ 13ರಂದು ಹೊರಡಿಸಲಾದ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕೋರಲಾಗಿತ್ತು. "ಬೆಂಗಳೂರಿನ ಸುತ್ತಮುತ್ತಲಿನ ಕೃಷಿ ಭೂಮಿ ನಾಶಪಡಿಸುವ ಬದಲು ಉತ್ತರ ಕರ್ನಾಟಕದ ಬರಪೀಡಿತ ಅಥವಾ ಕೈಗಾರಿಕಾ ಭೂಬ್ಯಾಂಕ್‌ಗಳಿರುವ ಹಿಂದುಳಿದ ಪ್ರದೇಶಗಳಿಗೆ ಈ ಯೋಜನೆಯನ್ನು ಸ್ಥಳಾಂತರಿಸಬೇಕು. ಈ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚಿಸಬೇಕು. ಅಲ್ಲಿಯವರೆಗೆ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಭೂಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆಗಳಿಗೆ ತಡೆ ನೀಡಬೇಕು" ಎಂದು ವಿನಂತಿಸಲಾಗಿತ್ತು.
ಸರ್ಕಾರಕ್ಕೆ ಸಿಕ್ಕ ದೊಡ್ಡ ಜಯ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆಯೆಂದೇ ಬಿಂಬಿತವಾಗಿರುವ ಗ್ರೇಟರ್ ಬೆಂಗಳೂರು ಸಮಗ್ರ ಟೌನ್‌ಶಿಪ್ ಯೋಜನೆಗೆ ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಆದರೆ, ಈಗ ಹೈಕೋರ್ಟ್ ಪಿಐಎಲ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿದ್ದ ಅತಿ ದೊಡ್ಡ ಕಾನೂನು ಸಂಕಷ್ಟ ನಿವಾರಣೆಯಾಗಿದೆ. ಸರ್ಕಾರದ ಪ್ರಕಾರ ಈಗಾಗಲೇ ಬಹುತೇಕ ರೈತರು ಸ್ವಯಂಪ್ರೇರಿತರಾಗಿ ಪರಿಹಾರ ಧನ ಪಡೆದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

