
ವೈದ್ಯ ಡಾ. ಭಾಸ್ಕರ್ ಎಂ.ವಿ. ಅವರು ನೀಡಿರುವ ಈ ಮಹತ್ವದ ಆರೋಗ್ಯ ಸಲಹೆಗಳು ಇಲ್ಲಿವೆ.
HeatWave| ಬಿಸಿಲ ಬೇಗೆಯಿಂದ ಆರೋಗ್ಯ ರಕ್ಷಣೆ: ಡಾ. ಭಾಸ್ಕರ್ ಎಂ.ವಿ. ಸಲಹೆಗಳು
ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಮತ್ತು ಹೀಟ್ ಸ್ಟ್ರೋಕ್ ತಡೆಯಲು ತಜ್ಞ ವೈದ್ಯ ಡಾ. ಭಾಸ್ಕರ್ ಎಂ.ವಿ. ಅವರು ನೀಡಿರುವ ಈ ಮಹತ್ವದ ಆರೋಗ್ಯ ಸಲಹೆಗಳನ್ನು ಈ ಲೇಖನದಲ್ಲಿ ಓದಿ.
ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನವು ದಾಖಲೆ ಮಟ್ಟವನ್ನು ತಲುಪುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಖ್ಯಾತ ಮಕ್ಕಳ ತಜ್ಞರಾದ ಡಾ. ಭಾಸ್ಕರ್ ಎಂ.ವಿ. ಅವರು, ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳನ್ನು ಎದುರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೇಸಿಗೆಯ ತಾಪಮಾನವು ಕೇವಲ ಬಾಯಾರಿಕೆಗೆ ಸೀಮಿತವಾಗದೆ ದೇಹದ ಒಟ್ಟಾರೆ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಡಾ. ಭಾಸ್ಕರ್ ತಿಳಿಸಿದ್ದಾರೆ. ಅತಿಯಾದ ಬಿಸಿಲಿನಿಂದಾಗಿ ಚರ್ಮದ ಮೇಲೆ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುವ ಮಿಲೇರಿಯಾ ಅಥವಾ ಚರ್ಮದ ಅಲರ್ಜಿ ಉಂಟಾಗಬಹುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಸ್ನಾಯುಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ಇನ್ನು ತೀವ್ರತರದ ನಿರ್ಜಲೀಕರಣದಿಂದಾಗಿ ಉಸಿರಾಟದ ತೊಂದರೆ ಉಂಟಾಗಬಹುದು. ಬಿಸಿಲು ಹೆಚ್ಚಿರುವ ಪ್ರದೇಶಗಳಲ್ಲಿ ಹೀಟ್ ಎಕ್ಸಾಪ್ಷನ್ ಮತ್ತು ಹೀಟ್ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ದಟ್ಟವಾಗಿದ್ದು, ಇವುಗಳ ಬಗ್ಗೆ ಜನರು ಹೆಚ್ಚಿನ ಜಾಗೃತಿ ವಹಿಸುವುದು ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.
ಹೀಟ್ ಸ್ಟ್ರೋಕ್ ಲಕ್ಷಣಗಳು ಮತ್ತು ತಕ್ಷಣದ ಚಿಕಿತ್ಸೆ
ಹೀಟ್ ಸ್ಟ್ರೋಕ್ ಅಥವಾ ಬಿಸಿಲು ಹೊಡೆತಕ್ಕೆ ಒಳಗಾದಾಗ ದೇಹದ ಉಷ್ಣಾಂಶವು ವಿಪರೀತವಾಗಿ ಏರುತ್ತದೆ. ಈ ಸಂದರ್ಭದಲ್ಲಿ ತಲೆನೋವು, ವಾಂತಿ, ತಲೆಸುತ್ತು ಹಾಗೂ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬರುತ್ತವೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಯನ್ನು ತಕ್ಷಣವೇ ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಬೇಕು. ದೇಹದ ಉಷ್ಣತೆಯನ್ನು ತಗ್ಗಿಸಲು ಒದ್ದೆ ಬಟ್ಟೆಯಿಂದ ಮೈ ಒರೆಸುವುದು ಅತ್ಯಗತ್ಯ. ನಿರ್ಜಲೀಕರಣವನ್ನು ತಡೆಯಲು ಎಳನೀರು, ಮಜ್ಜಿಗೆ ಅಥವಾ ಓ.ಆರ್.ಎಸ್ ದ್ರಾವಣವನ್ನು ನೀಡಬೇಕು. ಪರಿಸ್ಥಿತಿ ಬಿಗಡಾಯಿಸಿದರೆ ವಿಳಂಬ ಮಾಡದೆ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಜೀವ ರಕ್ಷಣೆಯ ದೃಷ್ಟಿಯಿಂದ ಅತಿ ಮುಖ್ಯವಾಗಿದೆ ಎಂದು ಅವರು ವಿವರಿಸಿದರು.
ಮಕ್ಕಳು ಮತ್ತು ವೃದ್ಧರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ
ಮಕ್ಕಳು ಮತ್ತು ಹಿರಿಯ ನಾಗರಿಕರು ಹವಾಮಾನ ವೈಪರೀತ್ಯಕ್ಕೆ ಬೇಗನೆ ತುತ್ತಾಗುವುದರಿಂದ ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಪ್ರಸ್ತುತ ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳು ಮಧ್ಯಾಹ್ನದ ವೇಳೆಯಲ್ಲಿ ಹೊರಗಡೆ ಆಟವಾಡಲು ಹೋಗದಂತೆ ಪೋಷಕರು ಗಮನಹರಿಸಬೇಕು. ಸಂಜೆ 5 ಗಂಟೆಯ ನಂತರ ಅಥವಾ ಮುಂಜಾನೆ ತಂಪಾಗಿರುವಾಗ ಮಾತ್ರ ಮಕ್ಕಳು ಆಟವಾಡಲು ಸೂಕ್ತ ಸಮಯವಾಗಿದೆ. ಮನೆಯಲ್ಲಿಯೇ ನೈಸರ್ಗಿಕ ಉಪಾಯಗಳ ಮೂಲಕ ಹೀಟ್ ರಾಶ್ ಅಥವಾ ಬೆವರು ಸಾಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಮತ್ತು ನಿಯಮಿತವಾಗಿ ಸ್ನಾನ ಮಾಡುವುದು ಚರ್ಮದ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಅವರು ತಿಳಿಸಿದರು.
ಬೇಸಿಗೆಯಲ್ಲಿ ಯಾವ ಆಹಾರ ಉತ್ತಮ
ಬೇಸಿಗೆಯಲ್ಲಿ ಆಹಾರ ಕ್ರಮವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅತಿಯಾದ ಎಣ್ಣೆ ಪದಾರ್ಥ, ಖಾರ ಹಾಗೂ ಮಸಾಲೆಯುಕ್ತ ಆಹಾರಗಳನ್ನು ತ್ಯಜಿಸಿ, ಹಣ್ಣು-ಹಂಪಲು ಮತ್ತು ದ್ರವಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ತಿಳಿದರು.
ಕಾರ್ಮಿಕರಿಗೆ ಮುನ್ನೆಚ್ಚರಿಕೆ
ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ನಿರಂತರ ಪ್ರಯಾಣ ಮಾಡುವವರು ಕಡ್ಡಾಯವಾಗಿ ತಲೆಗೆ ಟೋಪಿ ಅಥವಾ ಛತ್ರಿಯನ್ನು ಬಳಸಬೇಕು. ಕೆಲಸದ ನಡುವೆ ಸಣ್ಣ ವಿರಾಮ ಪಡೆದು ಸಾಕಷ್ಟು ನೀರು ಕುಡಿಯುವುದು ಹಿತಕರ. ಬಿಸಿಲಿನ ತಾಪವನ್ನು ಕೇವಲ ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸದೆ, ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಈ ಬೇಸಿಗೆಯನ್ನು ಸುರಕ್ಷಿತವಾಗಿ ಕಳೆಯಬೇಕೆಂದು ಡಾ. ಭಾಸ್ಕರ್ ಎಂ.ವಿ. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

