
ಬಿಸಿಲ ಬೇಗೆ| ಕಟ್ಟಡ ಕಾರ್ಮಿಕರಿಗೆ ಮಧ್ಯಾಹ್ನ 2 ತಾಸು ಕಡ್ಡಾಯ ವಿಶ್ರಾಂತಿ; ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ
ಬಿಸಿಲಿನ ತಾಪಮಾನ ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಮಧ್ಯಾಹ್ನದ ಅವಧಿಯಲ್ಲಿ ಎರಡು ತಾಸು ವಿಶ್ರಾಂತಿ ನೀಡಬೇಕು ಎಂದು ಕಟ್ಟಡ ಮಾಲೀಕರು ಹಾಗೂ ಗುತ್ತಿಗೆದಾರರಿಗೆ ಕಾರ್ಮಿಕ ಇಲಾಖೆ ಸೂಚನೆ ನೀಡಿದೆ.
ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲಾಘಾತಕ್ಕೆ ಈಗಾಗಲೇ ಇಬ್ಬರು ಮೃತಪಟ್ಟಿರುವ ಬೆನ್ನಲ್ಲೇ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ.
ಬಿಸಿಲಿನ ತಾಪಮಾನ ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಮಧ್ಯಾಹ್ನದ ಅವಧಿಯಲ್ಲಿ ಎರಡು ತಾಸು ವಿಶ್ರಾಂತಿ ನೀಡಬೇಕು ಎಂದು ಕಟ್ಟಡ ಮಾಲೀಕರು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದೆ. ಒಂದು ವೇಳೆ ಕಾರ್ಮಿಕರಿಗೆ ವಿಶ್ರಾಂತಿ ನೀಡದೇ ಬಿಸಿಲಲ್ಲೇ ದುಡಿಸಿದರೆ ಅಂತಹ ಮಾಲೀಕರು ಅಥವಾ ಗುತ್ತಿಗೆದಾರರಿಗೆ ಜೈಲು ಶಿಕ್ಷೆ ಗ್ಯಾರಂಟಿ.
ಮಂಡ್ಯದಲ್ಲಿ ನಿಯಮ ಜಾರಿಗೆ ಸೂಚನೆ
ಉತ್ತರ ಕರ್ನಾಟಕದಲ್ಲಿ ಈಗಾಗಲೇ ಕಾರ್ಮಿಕರು ಹಾಗೂ ಜನಸಾಮಾನ್ಯರ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಇದೀಗ ಸಕ್ಕರೆ ನಾಡು ಮಂಡ್ಯದಲ್ಲೂ ಸೂರ್ಯನ ಬಿಸಿಲಿನ ಪ್ರಖರತೆ ವಿಪರೀತವಾಗಿರುವ ಜಿಲ್ಲಾ ಕಾರ್ಮಿಕ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಕಟ್ಟಡ ಕಾರ್ಮಿಕರಿಗೆ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಕಡ್ಡಾಯವಾಗಿ ವಿಶ್ರಾಂತಿ ನೀಡಬೇಕು ಎಂದು ಸೂಚಿಸಿದೆ.
ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ
ಸುಡು ಬಿಸಿಲಿನಲ್ಲಿ ಸತತ ಕೆಲಸ ಮಾಡುವುದರಿಂದ ಕಾರ್ಮಿಕರು ಬಿಸಿಲಾಘಾತಕ್ಕೆ ಒಳಗಾಗಿ ನಿರ್ಜಲೀಕರಣ ಹಾಗೂ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುವ ಆತಂಕವಿದೆ. ಈ ಹಿನ್ನೆಲೆ ಕಾರ್ಮಿಕರ ಜೀವಕ್ಕೆ ಸಂಚಕಾರ ಬರದಂತೆ ತಡೆಯಲು ಮಧ್ಯಾಹ್ನದ ವೇಳೆ ವಿಶ್ರಾಂತಿ ಕಡ್ಡಾಯ ಮಾಡಲಾಗಿದೆ.
ಇಲಾಖೆಯಿಂದ ಕಟ್ಟುನಿಟ್ಟಿನ ಸೂಚನೆ
ಕೇವಲ ವಿಶ್ರಾಂತಿ ಮಾತ್ರವಲ್ಲದೆ, ಕೆಲಸದ ಸ್ಥಳದಲ್ಲಿ ಕಟ್ಟಡ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯದ ವ್ಯವಸ್ಥೆ ಇರಲೇಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ ಈ ನಿರ್ದೇಶನಗಳನ್ನು ಉಲ್ಲಂಘಿಸಿದಲ್ಲಿ ಗುತ್ತಿಗೆದಾರರು ಮತ್ತು ಮಾಲೀಕರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಾವು ನೋವು ಸಂಭವಿಸಿದರೆ ಮಾಲೀಕರೇ ಹೊಣೆ
ಬಿಸಿಲಿನ ತಾಪದಿಂದ ಕೆಲಸದ ಅವಧಿಯಲ್ಲಿ ಕಾರ್ಮಿಕನಿಗೆ ಏನಾದರೂ ಅನಾಹುತ ಸಂಭವಿಸಿದರೆ ಅಥವಾ ಮರಣ ಹೊಂದಿದರೆ ಕಾರ್ಮಿಕ ಕಾಯ್ದೆಯಡಿ ಮಾತ್ರವಲ್ಲದೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲೂ ಮಾಲೀಕರ ವಿರುದ್ಧ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಸಂಸ್ಥೆಗಳಾಗಿದ್ದಲ್ಲಿ ಅದರ ನಿರ್ದೇಶಕರು ಮತ್ತು ಉಸ್ತುವಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಮಂಡ್ಯ ಜಿಲ್ಲಾ ಉಪವಿಭಾಗದ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತ ಎಚ್ಚರಿಸಿದ್ದಾರೆ.
"ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ನಮ್ಮ ಆದ್ಯತೆ. ಬಿಸಿಲಿನ ತೀವ್ರತೆ ಹೆಚ್ಚಿರುವಾಗ ಕೆಲಸ ಮಾಡಿಸುವುದು ಕಾನೂನುಬಾಹಿರ. ನಿಯಮ ಪಾಲಿಸದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಜೈಲು ಶಿಕ್ಷೆ, ದಂಡ
ಕಾರ್ಮಿಕ ಇಲಾಖೆ ನೀಡಿರುವ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ನೀರು, ಶೌಚಾಲಯ ಒದಗಿಸದೇ ಹೋದರೆ 3 ತಿಂಗಳು ಜೈಲು ಅಥವಾ 1000 ರೂ. ದಂಡ ವಿಧಿಸಲಾಗುವುದು. ಅದೇ ರೀತಿ ವಿಶ್ರಾಂತಿ ಸಮಯ ನೀಡದಿದ್ದರೆ 2 ಸಾವಿರದವರೆಗೆ ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ, ಪುನರಾವರ್ತಿತ ತಪ್ಪುಗಳಾದರೆ 6 ತಿಂಗಳು ಜೈಲು, 500 ರಿಂದ 2 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುವುದು, ಅಧಿಕಾರಿಗಳ ತಪಾಸಣೆಗೆ ಅಡ್ಡಿಪಡಿಸಿದರೆ 3 ತಿಂಗಳು ಜೈಲು, 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.

