
ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್
ಆಹಾರ ಸುರಕ್ಷತೆ ಪರಿಶೀಲನೆಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ 'ವಾಚ್ ಟೀಂ'
ಕ್ಯೂಆರ್ ಕೋಡ್ ಜಾರಿಗೆ ತಂದ ಕೇವಲ ಎರಡು ದಿನಗಳಲ್ಲೇ 400ಕ್ಕೂ ಅಧಿಕ ದೂರುಗಳು ಬಂದಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಚಿವ ಖಾದರ್ ಹೇಳಿದ್ದಾರೆ.
ರಾಜ್ಯದಲ್ಲಿ ಆಹಾರ ಸುರಕ್ಷತೆ ಹಾಗೂ ನಕಲಿ ಔಷಧಗಳ ಮೇಲೆ ನಿರಂತರ ಕಣ್ಗಾವಲು ಇರಿಸಲು ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿವೃತ್ತ ಅಧಿಕಾರಿಗಳು ಹಾಗೂ ತಜ್ಞರನ್ನು ಒಳಗೊಂಡ 'ವಾಚ್ ಟೀಂ' ರಚಿಸಲು ಸರ್ಕಾರ ಚಿಂತನೆ ನಡೆಸಿದೆ.
ಶನಿವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಸುರಕ್ಷಿತ ಆಹಾರ ಹಾಗೂ ನಕಲಿ ಔಷಧಗಳ ಬಗ್ಗೆ ದೂರು ನೀಡಲು ಕ್ಯೂಆರ್ ಕೋಡ್ ವ್ಯವಸ್ಥೆ ತರಲಾಗಿದೆ. ಇದನ್ನು ಎಲ್ಲಾ ಹೋಟೆಲ್ಗಳು ಮತ್ತು ಔಷಧ ಮಳಿಗೆಗಳ ಮುಂದೆ ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗುವುದು. ಕ್ಯೂಆರ್ ಕೋಡ್ ಜಾರಿಗೆ ತಂದ ಕೇವಲ ಎರಡು ದಿನಗಳಲ್ಲೇ 400ಕ್ಕೂ ಅಧಿಕ ದೂರುಗಳು ಬಂದಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಖಾದರ್ ವಿವರಿಸಿದ್ದಾರೆ.
ಆಹಾರ ಮತ್ತು ಔಷಧ ನಿಯಂತ್ರಣ ಕೇವಲ ಅಧಿಕಾರಿಗಳ ಕೆಲಸವಾಗಬಾರದು. ಸಾಮಾಜಿಕ ಕಾಳಜಿ ಹೊಂದಿರುವ ನಿವೃತ್ತ ಅಧಿಕಾರಿಗಳು, ನಿವೃತ್ತ ಪ್ರಾಧ್ಯಾಪಕರು ಹಾಗೂ ಹಿರಿಯ ತಜ್ಞರೂ ಕೂಡ ಕೈ ಜೋಡಿಸಬೇಕು. ಅಂತಹವರನ್ನು ಒಳಗೊಂಡ ವಾಚ್ ಟೀಂ ರಚಿಸಿ, ನಿರ್ದಿಷ್ಟ ಅಧಿಕಾರ ನೀಡುವ ಕುರಿತು ಕಾನೂನು ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿ ನಡೆಗೆ ಖಾದರ್ ಕಿಡಿ
ವಿಧಾನಸಭೆ ಅಧಿವೇಶನ ನಡೆಯದಂತೆ ಗದ್ದಲ ಎಬ್ಬಿಸುತ್ತಿರುವ ವಿರೋಧ ಪಕ್ಷ ಬಿಜೆಪಿಯ ನಿಲುವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಟೀಕಿಸಿದ್ದಾರೆ. "ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನಗಳು ಜನರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ವೇದಿಕೆಗಳಾಗಬೇಕು ಹೊರತು ರಾಜಕೀಯ ಸಭಾಂಗಣಗಳಾಗಬಾರದು. ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಬಿಜೆಪಿಯವರನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ," ಎಂದು ಕಿಡಿಕಾರಿದ್ದಾರೆ.
"ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಆರೋಪ ಕೇಳಿಬಂದ ತಕ್ಷಣವೇ ನಾಗೇಂದ್ರ ಅವರು ರಾಜೀನಾಮೆ ನೀಡಿ, ತನಿಖೆ ಎದುರಿಸಿದ್ದಾರೆ. ಅಧಿಕಾರಿಗಳ ಅಥವಾ ಇತರರ ತಪ್ಪಿನಿಂದ ಹಣ ವರ್ಗಾವಣೆಯಾಗಿದ್ದು, ಈಗಾಗಲೇ ಶೇ 99.5ರಷ್ಟು ಹಣ ಸರ್ಕಾರಕ್ಕೆ ವಾಪಸ್ ಬಂದಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಲಾಗಿದೆ. ನಿಜವಾದ ಕಾಳಜಿ ಇದ್ದರೆ ಬಿಜೆಪಿ ಶಾಸಕರು ನಿಯಮಾವಳಿ ಪ್ರಕಾರ ನೋಟಿಸ್ ನೀಡಿ ಸದನದಲ್ಲಿ ಪ್ರಶ್ನಿಸಬಹುದಿತ್ತು," ಎಂದು ಹೇಳಿದ್ದಾರೆ.
"ರಾಜ್ಯಪಾಲರು ಪ್ರಮಾಣ ವಚನ ಬೋಧಿಸುವಾಗ ಕಾನೂನುಬದ್ಧತೆ ಪರಿಶೀಲಿಸಿಯೇ ಇರುತ್ತಾರೆ. ಸಿಬಿಐ ತನಿಖೆ ಎದುರಿಸುತ್ತಿರುವ ಅನೇಕ ನಾಯಕರು ಬಿಜೆಪಿಯಲ್ಲಿದ್ದು, ಅವರು ಮುಖ್ಯಮಂತ್ರಿ ಹಾಗೂ ಸಚಿವರಾಗಿ ಅಧಿಕಾರ ಅನುಭವಿಸಿದ್ದಾರೆ. ಅವರಿಗೆ ಅನ್ವಯವಾಗದ ನಿಯಮಗಳು ಬೇರೆಯವರಿಗೆ ಹೇಗೆ ಅನ್ವಯವಾಗುತ್ತವೆ" ಎಂದು ಪ್ರಶ್ನಿಸಿದ್ದಾರೆ.

