
ವೈದ್ಯರನ್ನು ಅಮಾನತು ಮಾಡಿರುವ ಆದೇಶ ಪ್ರತಿ
ಮದ್ಯಪಾನ, ಅಸಭ್ಯ ವರ್ತನೆ, ಕರ್ತವ್ಯಲೋಪ; ರಾಜ್ಯದ ಮೂವರು ವೈದ್ಯಾಧಿಕಾರಿಗಳ ಅಮಾನತು
ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಮೌಳಿ ಎಸ್. ರಾತ್ರಿ ಪಾಳಿಯಲ್ಲಿದ್ದಾಗ ಆಸ್ಪತ್ರೆಯ ಅಡುಗೆ ಕೋಣೆಯಲ್ಲೇ ಮದ್ಯ ಮತ್ತು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.
ರೋಗಿಗಳ ಪ್ರಾಣ ಉಳಿಸಿ ನೈತಿಕವಾಗಿ ನಡೆದುಕೊಳ್ಳಬೇಕಾದ ಸರ್ಕಾರಿ ವೈದ್ಯರೇ ಮದ್ಯದ ಅಮಲಿನಲ್ಲಿ ತೇಲಾಡುತ್ತಾ, ಕರ್ತವ್ಯ ಮರೆತು ಅಸಭ್ಯವಾಗಿ ವರ್ತಿಸುತ್ತಿರುವ ಆಘಾತಕಾರಿ ಪ್ರಕರಣಗಳು ರಾಜ್ಯದ ವಿವಿಧೆಡೆ ಬಯಲಾಗಿವೆ. ವೈದ್ಯಕೀಯ ವೃತ್ತಿಯ ಪಾವಿತ್ರ್ಯತೆಗೆ ಮಸಿ ಬಳಿದು, ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಮೂವರು ವೈದ್ಯಾಧಿಕಾರಿಗಳನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ವಂದಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜಶೇಖರ್ ಸಜ್ಜನ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ವೈದ್ಯರು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಹಾಜರಾಗುತ್ತಿರಲಿಲ್ಲ ಮಾತ್ರವಲ್ಲದೆ, ಕರ್ತವ್ಯದ ಅವಧಿಯಲ್ಲೇ ಮದ್ಯಪಾನ ಮಾಡಿ ಆಸ್ಪತ್ರೆಯಲ್ಲೇ ಮಲಗುತ್ತಿದ್ದರು ಎನ್ನಲಾಗಿದೆ.
ಸಚಿವರ ಭೇಟಿ ವೇಳೆ ಬಯಲಾದ ಅಕ್ರಮ:
ಇತ್ತೀಚೆಗೆ ಸಚಿವ ಶಿವಾನಂದ ಪಾಟೀಲ ಅವರು ಸದರಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದಾಗ ಆಸ್ಪತ್ರೆಗೆ ಬೀಗ ಹಾಕಿರುವುದು ಕಂಡುಬಂದಿತ್ತು. ಅಲ್ಲದೆ, ಡಾ. ರಾಜಶೇಖರ್ ಅವರು ಕುಡಿದ ಮತ್ತಿನಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇಲಾಖೆಯ ಕ್ರಮ: ವೈದ್ಯರ ಈ ದುರ್ನಡತೆ ಮತ್ತು ಬೇಜವಾಬ್ದಾರಿತನವನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ, ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಿದೆ. ಅಮಾನತಿನ ಅವಧಿಯಲ್ಲಿ ಇವರ ಲೀನ್ (Lien) ಕೇಂದ್ರವನ್ನು ಕೋಲಾರ ಜಿಲ್ಲೆಯ ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಗದಿಪಡಿಸಲಾಗಿದೆ. ರಾಜಶೇಖರ್ ಅವರೊಂದಿಗೆ ಕರ್ತವ್ಯಲೋಪ ಎಸಗಿದ ಇತರ ಇಬ್ಬರು ವೈದ್ಯಾಧಿಕಾರಿಗಳನ್ನೂ ಸಹ ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಮಹಿಳಾ ಸಿಬ್ಬಂದಿಗೆ ವೈದ್ಯನಿಂದ ವಿಡಿಯೋ ಕಾಲ್
ಮತ್ತೊಂದು ಘಟನೆಯಲ್ಲಿ, ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ಅಮಾನತುಗೊಂಡಿರುವ ಮತ್ತೊಬ್ಬ ವೈದ್ಯ. ಇವರು ಪಾನಮತ್ತರಾಗಿ ಸಾರ್ವಜನಿಕರೊಂದಿಗೆ ಜಗಳವಾಡುವುದಷ್ಟೇ ಅಲ್ಲದೆ, ತಮ್ಮ ಕೆಳಹಂತದ ಮಹಿಳಾ ಸಿಬ್ಬಂದಿಗೆ ಮಧ್ಯರಾತ್ರಿಯಲ್ಲಿ ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದರು ಎಂಬ ಗಂಭೀರ ದೂರು ದಾಖಲಾಗಿತ್ತು. ಇವರ ಪತ್ನಿಯೂ ಇವರ ಮದ್ಯಪಾನದ ಚಟದ ಬಗ್ಗೆ ಸಾಕ್ಷಿ ನೀಡಿದ್ದರು. ಇವರನ್ನು ಬೀದರ್ ಜಿಲ್ಲೆಯ ತೋರ್ಣಾ ಆರೋಗ್ಯ ಕೇಂದ್ರಕ್ಕೆ ಲೀನ್ ವರ್ಗಾವಣೆ ಮಾಡಲಾಗಿದೆ.
ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ಅಮಾನತು ಆದೇಶ ಪ್ರತಿ
ಆಸ್ಪತ್ರೆಯೇ ಬಾರ್
ಇನ್ನೊಂದು ಪ್ರಕರಣದಲ್ಲಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಮೌಳಿ ಎಸ್. ಅವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗಿದೆ. ರಾತ್ರಿ ಪಾಳಿಯಲ್ಲಿದ್ದಾಗ ಆಸ್ಪತ್ರೆಯ ಅಡುಗೆ ಕೋಣೆಯಲ್ಲೇ ಮದ್ಯ ಮತ್ತು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಸಹೋದ್ಯೋಗಿ ಜೊತೆ ಗಲಾಟೆ ಮಾಡಿದ್ದರು. ಇವರ ವರ್ತನೆಯಿಂದ ಆಸ್ಪತ್ರೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ಸಿಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ವರದಿ ನೀಡಿದ್ದರು. ಇವರನ್ನು ಕೊಪ್ಪಳ ಜಿಲ್ಲೆಯ ಕುಕನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ವೈದ್ಯಾಧಿಕಾರಿ ಡಾ. ಚಂದ್ರಮೌಳಿ ಎಸ್. ಅಮಾನತು ಆದೇಶ ಪ್ರತಿ
ಇಲಾಖೆಯ ಖಡಕ್ ಎಚ್ಚರಿಕೆ
ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ ವೈದ್ಯರ ವಿರುದ್ಧ ಶಿಸ್ತು ಕ್ರಮದ ಆದೇಶಗಳನ್ನು ಹೊರಡಿಸಿದ್ದು, ಅಮಾನತುಗೊಂಡ ವೈದ್ಯರು ಇಲಾಖೆಯ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚಿಸಿದ್ದಾರೆ. ಈ ಕ್ರಮವು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಇತರ ಸರ್ಕಾರಿ ನೌಕರರಿಗೆ ಎಚ್ಚರಿಕೆಯ ಗಂಟೆಯಾಗಿದೆ.

