ಹೆಚ್‌ಎಂಟಿ ಜಮೀನು ಸ್ವಾಧೀನ: ಅರಣ್ಯ ಇಲಾಖೆ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
x

ಹೆಚ್‌ಎಂಟಿ ಜಮೀನು ಸ್ವಾಧೀನ: ಅರಣ್ಯ ಇಲಾಖೆ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು ನಗರದ ಜಾಲಹಳ್ಳಿಯಲ್ಲಿ ಹೆಚ್‌ಎಂಟಿ ಒಡೆತನದಲ್ಲಿರುವ 430 ಎಕರೆ 21.853 ಗುಂಟೆ ಜಮೀನನ್ನು ತಕ್ಷಣವೇ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಕಳೆದ ಜೂನ್ 16 ರಂದು ಆದೇಶ ನೀಡಿದ್ದರು.


ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಕಂಪನಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಸ್ವಾಧೀನಕ್ಕೆ ಪಡೆಯದಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಅಲ್ಲದೇ ಜಮೀನಿನ ಸ್ವರೂಪ ಬದಲಾಯಿಸದಂತೆ ಹಾಗೂ ಅಲ್ಲಿರುವ ಮರಗಳನ್ನು ಕತ್ತರಿಸದಂತೆ ಹೆಚ್‌ಎಂಟಿ ಸಂಸ್ಥೆಗೂ ನ್ಯಾಯಾಲಯ ನಿರ್ದೇಶನ ನೀಡಿದೆ.

ಬೆಂಗಳೂರು ನಗರದ ಅರಣ್ಯ ಉಪ ಸಂರಕ್ಷಣಾಧಿಕಾರಿ ಅವರು ಜೂ‌. 16 ರಂದು ಹೊರಡಿಸಿದ್ದ ಜಮೀನು ಹಸ್ತಾಂತರ ಆದೇಶ ಪ್ರಶ್ನಿಸಿ ಹೆಚ್‌ಎಂಟಿ ಲಿಮಿಟೆಡ್ ಮತ್ತು ಹೆಚ್‌ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರಾಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಮಧ್ಯಂತರ ಆದೇಶ ಹೊರಡಿಸಿದೆ.

ಬೆಂಗಳೂರು ನಗರದ ಜಾಲಹಳ್ಳಿಯಲ್ಲಿ ಹೆಚ್‌ಎಂಟಿ ಒಡೆತನದಲ್ಲಿರುವ 430 ಎಕರೆ 21.853 ಗುಂಟೆ ಜಮೀನನ್ನು ತಕ್ಷಣವೇ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಕಳೆದ ಜೂನ್ 16 ರಂದು ಆದೇಶ ನೀಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೆಚ್‌ಎಂಟಿ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, "ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 64(ಎ) ಅಡಿಯಲ್ಲಿ ಅರಣ್ಯ ಇಲಾಖೆಯು ಆದೇಶ ಹೊರಡಿಸಿದೆ. ಈ ಕುರಿತು ಜುಲೈ 2 ರಂದು ನಮಗೆ ಮಾಹಿತಿ ತಲುಪಿಸಲಾಗಿದೆ. ಆದರೆ, ಈ ಆದೇಶವನ್ನು ಇದೇ ವರ್ಷದ ಜನವರಿ 6 ರಂದೇ ಕಾಯ್ದಿರಿಸಲಾಗಿತ್ತು. ಯಾವುದೇ ಸೂಕ್ತ ಕಾರಣವಿಲ್ಲದೆ ಇಷ್ಟೊಂದು ಸುದೀರ್ಘ ವಿಳಂಬದ ನಂತರ ಆದೇಶ ಹೊರಡಿಸಿರುವುದು ದುರುದ್ದೇಶಪೂರಿತವಾಗಿದೆ" ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದ ಆಲಿಸಿದ ನ್ಯಾಯಾಲಯವು, ಮುಂದಿನ ಆದೇಶ ಬರುವವರೆಗೆ ಹೆಚ್‌ಎಂಟಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಸ್ಪಷ್ಟಪಡಿಸಿದೆ.

ಈಗಾಗಲೇ ಮೂರನೇ ವ್ಯಕ್ತಿಗಳಿಗೆ ಮಾರಾಟವಾದ ಜಾಗವನ್ನು ಹೊರತುಪಡಿಸಿ, ಉಳಿದ ಹೆಚ್‌ಎಂಟಿ ಜಾಗದಲ್ಲಿ ಯಾವುದೇ ಮರಗಳನ್ನು ಕತ್ತರಿಸಬಾರದು ಎಂದು ಎಚ್ಎಂಟಿ ಸಂಸ್ಥೆಗೂ ಸೂಚಿಸಿದೆ. ಹೆಚ್‌ಎಂಟಿ ಸಂಸ್ಥೆಯ ಅಧ್ಯಕ್ಷರ ಸೂಚನೆಯಂತೆ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿರುವ ಸಂಸ್ಥೆಯ ವಕೀಲರು, "ತಮ್ಮ ವಶದಲ್ಲಿರುವ ಬಾಕಿ ಜಮೀನನ್ನು ಇನ್ಮುಂದೆ ಮಾರಾಟ, ಗುತ್ತಿಗೆ, ಪರವಾನಗಿ ಸೇರಿದಂತೆ ಯಾವುದೇ ರೀತಿಯಲ್ಲೂ ಬೇರೆಯವರಿಗೆ ಹಸ್ತಾಂತರಿಸುವುದಿಲ್ಲ. ಆಸ್ತಿಯ ಸ್ವರೂಪವನ್ನು ಬದಲಾಯಿಸುವುದಿಲ್ಲ" ಎಂದು ಭರವಸೆ ನೀಡಿದ್ದಾರೆ. ಈ ಮಧ್ಯಂತರ ತಡೆಯಾಜ್ಞೆಯು ನ್ಯಾಯಾಲಯದ ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರಲಿದೆ.

Read More
Next Story