
ಕರ್ನಾಟಕ ಹೈಕೋರ್ಟ್
ಮೀಸಲಾತಿ ಹೆಚ್ಚಳ ಅರ್ಜಿ: ಜು.15ಕ್ಕೆ ಅಂತಿಮ ವಿಚಾರಣೆ ನಿಗದಿ
ಇದೇ ವೇಳೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಹಂಚಿಕೆ ಕುರಿತು ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ. 50 ರಿಂದ 56ಕ್ಕೆ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್ ಜುಲೈ 15ಕ್ಕೆ ನಿಗದಿಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ನ್ಯಾಯಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಮೇಲ್ಮನವಿಗಳ ವಿಚಾರಣೆ ನಡೆಸಿತು. ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಮಿತ್ರ ಅವರು ಮೀಸಲಾತಿ ಅಧಿಸೂಚನೆ ರದ್ದು ಕೋರಿ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರೊಂದಿಗೆ, 2023ರಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕಾಯ್ದೆ ರದ್ದುಗೊಳಿಸಿದ್ದ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಗಳೂ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.
ಕಲಾಪದಲ್ಲಿ ನಡೆದಿದ್ದೇನು?
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು, "ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಹೀಗಾಗಿ ಮುಂದಿನ ವಾರದ ಯಾವುದೇ ದಿನದಂದು ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸಬಹುದು" ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದೇ ವೇಳೆ ಕರ್ನಾಟಕ ಲೋಕಸೇವಾ ಆಯೋಗದ ಪರ ಹಾಜರಿದ್ದ ವಕೀಲ ರೂಬೆನ್ ಜಾಕೊಬ್ ಅವರು ನ್ಯಾಯಾಲಯದ ಗಮನಕ್ಕೆ ಮಹತ್ವದ ವಿಷಯ ತಂದರು.
"2023-2024ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂದರ್ಶನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೆ, ಈ ಹಿಂದೆ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶದ ಪ್ರಕಾರ ಫಲಿತಾಂಶ ಪ್ರಕಟಿಸುವಂತಿಲ್ಲ. ಇದರಿಂದಾಗಿ ನೇಮಕಾತಿ ಪ್ರಕ್ರಿಯೆಗೆ ತೊಂದರೆಯಾಗುತ್ತಿದ್ದು, ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ಅನುಮತಿ ನೀಡಬೇಕು" ಎಂದು ಕೋರಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠವು, "ಬಾಕಿ ಇರುವ ಇಂತಹ ಮಹತ್ವದ ಅರ್ಜಿಗಳನ್ನು ಆದಷ್ಟು ಬೇಗ ಪರಿಗಣಿಸಿ ವಿಲೇವಾರಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಎಲ್ಲಾ ಅರ್ಜಿಗಳ ಸಮಗ್ರ ವಿಚಾರಣೆ ನಡೆಸಲು ಸಂಪೂರ್ಣ ಸಿದ್ಧವಿದ್ದೇವೆ. ಸರ್ಕಾರ ಸಿದ್ಧವಿದೆ ಎನ್ನುವುದಾದರೆ ನ್ಯಾಯಪೀಠವು ಇಂದಿನಿಂದಲೇ ವಿಚಾರಣೆ ಕೈಗೆತ್ತಿಕೊಳ್ಳಲು ಮುಕ್ತವಾಗಿದೆ" ಎಂದು ಸ್ಪಷ್ಟಪಡಿಸಿತು.
ಆದರೆ, ಅಡ್ವೋಕೇಟ್ ಜನರಲ್ ಅವರ ಕೋರಿಕೆ ಮನ್ನಿಸಿದ ನ್ಯಾಯಾಲಯವು ಅಂತಿಮವಾಗಿ "ಅಂತಿಮ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಲಾಗುವುದು. ಉಭಯ ಪಕ್ಷಗಾರರು ಅಂದು ಯಾವುದೇ ವಿನಾಯಿತಿ ಕೋರದೆ ವಾದ-ಪ್ರತಿವಾದಕ್ಕೆ ಪೂರ್ಣ ಸಿದ್ಧರಾಗಿ ಬರಬೇಕು" ಎಂದು ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ್ ಹಾಗೂ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು.
ಒಳ ಮೀಸಲಾತಿ; ಸರ್ಕಾರಕ್ಕೆ ನೋಟಿಸ್
ಇದೇ ವೇಳೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಹಂಚಿಕೆ ಕುರಿತು ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅಂದೊಳ್ಳು ಸೇರಿ ಒಟ್ಟು 8 ಜನರು ಸರ್ಕಾರದ ಒಳಮೀಸಲಾತಿ ಆದೇಶ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಎಚ್.ವಿ. ಮಂಜುನಾಥ್ ಅವರ ವಾದ ಆಲಿಸಿದ ನ್ಯಾಯಪೀಠವು, ಈ ವಿಷಯದಲ್ಲಿ ಪ್ರತಿವಾದಿಗಳಾಗಿರುವ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಅಧಿಕೃತ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.

