ಗುಟ್ಕಾ, ಪಾನ್ ಮಸಾಲ ಬ್ಯಾನ್ ಆದೇಶ ಹಿಂಪಡೆಯಲ್ಲ: ಆರೋಗ್ಯ ಸಚಿವ ಯು.ಟಿ. ಖಾದರ್
x

ಗುಟ್ಕಾ, ಪಾನ್ ಮಸಾಲ ಬ್ಯಾನ್ ಆದೇಶ ಹಿಂಪಡೆಯಲ್ಲ: ಆರೋಗ್ಯ ಸಚಿವ ಯು.ಟಿ. ಖಾದರ್

2024ರಲ್ಲೇ ತಾವು ಗುಟ್ಕಾ ನಿಷೇಧಕ್ಕೆ ಮುಂದಾಗಿದ್ದಾಗಿ ತಿಳಿಸಿದ ಯು.ಟಿ. ಖಾದರ್, ಗುಟ್ಕಾ ಅಥವಾ ಪಾನ್ ಮಸಾಲಾದಲ್ಲಿ ನಿಕೋಟಿನ್ ಮಿಶ್ರಣವಾಗಬಾರದು ಎಂದು ಹೇಳಿದರು.


ಕರ್ನಾಟಕದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧಕ್ಕೆ ಸಂಬಂಧಿಸಿದ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ರಾಜ್ಯ ಸರ್ಕಾರ ಗುಟ್ಕಾ, ಪಾನ್ ಮಸಾಲಾ ಬ್ಯಾನ್ ಆದೇಶ ಹಿಂಪಡೆಯುತ್ತದೆ ಎಂದು ಯಾರು ಹೇಳಿದ್ದಾರೆ? ಶಾಸಕರೊಬ್ಬರು ಬಂದು ಏನೋ ಹೇಳುತ್ತಾರೆ ಎಂಬ ಕಾರಣಕ್ಕೆ ಅದನ್ನು ಕೇಳಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

2024ರಲ್ಲೇ ತಾವು ಗುಟ್ಕಾ ನಿಷೇಧಕ್ಕೆ ಮುಂದಾಗಿದ್ದಾಗಿ ತಿಳಿಸಿದ ಯು.ಟಿ. ಖಾದರ್, ಗುಟ್ಕಾ ಅಥವಾ ಪಾನ್ ಮಸಾಲಾದಲ್ಲಿ ನಿಕೋಟಿನ್ ಮಿಶ್ರಣವಾಗಬಾರದು ಎಂದು ಹೇಳಿದರು. ಈ ವಿಚಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು, ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

“ಅಡಿಕೆ ಬೆಳೆಗಾರರಿಗೆ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಬದಲಾಗಿ ಅಡಿಕೆ ಬೆಳೆಗಾರರಿಗೆ ಇನ್ನೂ ಹೆಚ್ಚಿನ ಉಪಯೋಗವಾಗಲಿದೆ” ಎಂದು ಸಚಿವರು ಹೇಳಿದರು.

‘ಕಿದ್ವಾಯಿ ಆಸ್ಪತ್ರೆಗೆ ಒಮ್ಮೆ ಭೇಟಿ ನೀಡಿ’

ಗುಟ್ಕಾ ಹಾಗೂ ಪಾನ್ ಮಸಾಲಾ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಿದ ಸಚಿವ ಯು.ಟಿ. ಖಾದರ್, “ನೀವೊಂದು ಸಲ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ. ಆಗ ನಿಮ್ಮ ಕಣ್ಣಲ್ಲಿ ನೀರಲ್ಲ, ಕಣ್ಣಲ್ಲಿ ರಕ್ತ ಬರುತ್ತದೆ” ಎಂದು ಹೇಳಿದರು. ಪಾನ್ ಮಸಾಲಾದಲ್ಲಿ ನಿಕೋಟಿನ್ ಸೇರಿದಂತೆ ಹಾನಿಕಾರಕ ವಸ್ತುಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡಬಾರದು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

“ಕನಿಷ್ಠ ಮೂರು-ನಾಲ್ಕು ತಿಂಗಳು ಕಾದು ನೋಡಿ. ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಗುಟ್ಕಾ ಬ್ಯಾನ್ ಆದೇಶವನ್ನು ಹಿಂಪಡೆಯುವುದಿಲ್ಲ. ಅಗತ್ಯವಿದ್ದರೆ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತೇನೆ” ಎಂದು ಯು.ಟಿ. ಖಾದರ್ ಹೇಳಿದ್ದಾರೆ.

ಗುಟ್ಕಾ ಬ್ಯಾನ್ ವಿಚಾರಕ್ಕೆ ತೆರೆ ಎಳೆದ ಖಾದರ್

ಕರ್ನಾಟಕದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧದ ಆದೇಶ ಹೊರಬಿದ್ದ ಬಳಿಕ ಕಳೆದ ಒಂದು ವಾರದಿಂದ ಈ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರ ಗುಟ್ಕಾ ಬ್ಯಾನ್ ಮಾಡಿ ಆದೇಶ ಹೊರಡಿಸಿದ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು.

ಇದೀಗ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಹೇಳಿಕೆ ಈ ಚರ್ಚೆಗೆ ಮತ್ತಷ್ಟು ಸ್ಪಷ್ಟತೆ ನೀಡಿದೆ. ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧದ ಆದೇಶ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ಅಗತ್ಯವಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ, ನಿಷೇಧದ ಅಗತ್ಯತೆ ಹಾಗೂ ಅದರ ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡುವುದಾಗಿಯೂ ಸಚಿವರು ತಿಳಿಸಿದ್ದಾರೆ.

Read More
Next Story