ರಾಜ್ಯದಲ್ಲಿ 3,89,784 ʼಗೃಹಲಕ್ಷ್ಮಿʼಯರು ಅನರ್ಹ; ತೆರಿಗೆ ಪಾವತಿದಾರರು, ಮೃತಪಟ್ಟವರ ಖಾತೆಗಳಿಗೆ ಕೊಕ್‌
x

ರಾಜ್ಯದಲ್ಲಿ 3,89,784 ʼಗೃಹಲಕ್ಷ್ಮಿʼಯರು ಅನರ್ಹ; ತೆರಿಗೆ ಪಾವತಿದಾರರು, ಮೃತಪಟ್ಟವರ ಖಾತೆಗಳಿಗೆ ಕೊಕ್‌

ಕುಟುಂಬದ ಯಜಮಾನಿಯರ ಕುರಿತು ಸರ್ಕಾರದ ವಿವಿಧ ಇಲಾಖೆಗಳ ಅಧಿಕೃತ ದತ್ತಾಂಶಗಳನ್ನು ಪರಸ್ಪರ ಹೊಂದಾಣಿಕೆ ಮಾಡಿ ಪರಿಶೀಲಿಸಿದಾಗ 3.89 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅನರ್ಹರು ಎಂಬುದು ಪತ್ತೆಯಾಗಿದೆ.


ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಕೊನೆಗೂ ಮೇಜರ್ ಸರ್ಜರಿ ಮಾಡಿದೆ. ಯೋಜನೆಯಲ್ಲಿ ವ್ಯಾಪಕ ದುರುಪಯೋಗ ಕಂಡುಬಂದಿರುವ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಕಿ ಅಂಶಗಳನ್ನು ಪರಿಷ್ಕರಣೆ ನಡೆಸಿದ್ದು, ಬರೋಬ್ಬರಿ 3.89 ಲಕ್ಷ ಅನರ್ಹರನ್ನು ಪತ್ತೆಹಚ್ಚಿದೆ. ಈ ಎಲ್ಲಾ ಖಾತೆಗಳಿಗೆ ಮಾಸಿಕ 2 ಸಾವಿರ ರೂ. ಹಣ ವರ್ಗಾವಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.

ಯೋಜನೆ ಲೋಪದೋಷ ಸರಿಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವ ಸರ್ಕಾರ, ಅರ್ಹರು ಮಾತ್ರ ಸೌಲಭ್ಯ ಒದಗಿಸಲು ಫಲಾನುಭವಿಗಳಿಂದ ಮರು ಅರ್ಜಿ ಸ್ವೀಕರಿಸಲು ತೀರ್ಮಾನಿಸಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1.30 ಕೋಟಿ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ. ನೀಡುತ್ತಿತ್ತು.

ಮೃತರ ಖಾತೆಗಳಿಗೂ ಹಣ

ಕುಟುಂಬದ ಯಜಮಾನಿಯರ ಕುರಿತು ಸರ್ಕಾರದ ವಿವಿಧ ಇಲಾಖೆಗಳ ಅಧಿಕೃತ ದತ್ತಾಂಶಗಳನ್ನು ಪರಸ್ಪರ ಹೊಂದಾಣಿಕೆ ಮಾಡಿ ಪರಿಶೀಲಿಸಿದಾಗ 3.89 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅನರ್ಹರು ಎಂಬುದು ಪತ್ತೆಯಾಗಿದೆ. ಇಲ್ಲಿ ಅನರ್ಹರನ್ನು ಎರಡು ವಿಭಾಗಗಳಲ್ಲಿ ಗುರುತಿಸಲಾಗಿದೆ.

ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಮಾಸಿಕ ಆದಾಯ ತೆರಿಗೆ ಹಾಗೂ ಸರಕು ಮತ್ತು ಸೇವಾ ತೆರಿಗೆ ಪಾವತಿಸುತ್ತಿದ್ದ 1,94,560 ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ. ಇನ್ನು ನಾನಾ ಕಾರಣಗಳಿಂದ ಮೃತಪಟ್ಟಿದ್ದರೂ ಇಲಾಖೆಯ ಗಮನಕ್ಕೆ ಬಾರದೆ ಸೌಲಭ್ಯ ಪಡೆಯುತ್ತಿದ್ದ 1,95,224 ಮೃತರ ಖಾತೆಗಳನ್ನು ಗುರುತಿಸಲಾಗಿದ್ದು, ಇವುಗಳಿಗೂ ಹಣ ಜಮೆಯಾಗುವುದನ್ನು ತಡೆಹಿಡಿಯಲಾಗಿದೆ. ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಅನರ್ಹ ಫಲಾನುಭವಿಗಳನ್ನು ಕೈಬಿಡುವ ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ. ಉಳಿದಂತೆ ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳು ಅಗ್ರ 5 ಸ್ಥಾನಗಳನ್ನು ಪಡೆದಿವೆ.

ಸರ್ಕಾರಿ ಹಣ ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈಗೊಂಡ ಈ ಕಠಿಣ ಕ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

ಶೀಘ್ರದಲ್ಲೇ ಬಯೋಮೆಟ್ರಿಕ್ ಕಡ್ಡಾಯ

ತಾಂತ್ರಿಕ ಲೋಪದೋಷಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲು ಹಾಗೂ ನಕಲಿ ಫಲಾನುಭವಿಗಳ ಹಾವಳಿಗೆ ಮುಕ್ತಿ ಹಾಡಲು ಇಲಾಖೆಯು ಶೀಘ್ರದಲ್ಲೇ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ನೈಜ ಹಾಗೂ ಅರ್ಹ ಬಡ ಮಹಿಳೆಯರಿಗೆ ಮಾತ್ರ ಗ್ಯಾರಂಟಿ ಯೋಜನೆಯ ಸವಲತ್ತು ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಜಿಲ್ಲಾವಾರು ಫಲಾನುಭವಿಗಳನ್ನು ಪಟ್ಟಿಯಿಂದ ಹೊರಬಿಟ್ಟಿರುವ ಅಂಶ ಅಂಶಗಳನ್ನು ನೋಡುವುದಾದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 47,871 ಅನರ್ಹರಿದ್ದಾರೆ. ತೆರಿಗೆ ಪಾವತಿದಾರರು 33,833, ಮರಣ ಹೊಂದಿದವರು 14,038 ಮಹಿಳೆಯರು ಇದ್ದಾರೆ. ಬೆಳಗಾವಿಯಲ್ಲಿ 32,282 ಫಲಾನುಭವಿಗಳು ಅನರ್ಹರಾಗಿದ್ದಾರೆ. ಇಲ್ಲಿ ತೆರಿಗೆ ಪಾವತಿದಾರರು 16,432, ಮೃತಪಟ್ಟವರು 15,850 ಇದ್ದಾರೆ. ಮೈಸೂರಿನಲ್ಲಿ ಒಟ್ಟು 20,680 ಅನರ್ಹರಿದ್ದಾರೆ. ತೆರಿಗೆ ಪಾವತಿದಾರರು 9,139, ಮೃತಪಟ್ಟವರು 11,541 ಇದ್ದಾರೆ.

ತುಮಕೂರು ಜಿಲ್ಲೆಯಲ್ಲಿ 20,037 ಅನರ್ಹ ಫಲಾನುಭವಿಗಳಿದ್ದಾರೆ. ಇವರಲ್ಲಿ ತೆರಿಗೆ ಪಾವತಿದಾರರು 7,898, ಮೃತಪಟ್ಟವರು 12,139. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 16,654 ಅನರ್ಹ ಮಹಿಳೆಯರಿದ್ದಾರೆ. ತೆರಿಗೆ ಪಾವತಿದಾರರು 10,495, ಮೃತಪಟ್ಟವರು 6,159 ಇದ್ದಾರೆ. ಒಟ್ಟಾರೆ 31 ಜಿಲ್ಲೆಗಳಿಂದ ತೆರಿಗೆ ಪಾವತಿದಾರರು 1,94,560, ಮೃತಪಟ್ಟವರು 1,95,224 ಸೇರಿ 3,89,784 ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

Read More
Next Story