
16 ಲಕ್ಷ ಫಲಾನುಭವಿಗಳಿಗೆ ಬೆಸ್ಕಾಂ ಶಾಕ್: ಮಾಹಿತಿ ನೀಡದಿದ್ದರೆ 'ಗೃಹ ಜ್ಯೋತಿ' ಕಟ್
ಬೆಸ್ಕಾಂ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಲು ಯತ್ನಿಸುತ್ತಿದ್ದಾರೆ. ಆದರೆ, ಮೂರು ಬಾರಿ ಭೇಟಿ ನೀಡಿದರೂ ಬಹುತೇಕ ಮನೆಗಳಿಗೆ ಬೀಗ ಹಾಕಿರುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬೆಸ್ಕಾಂ ಆಘಾತಕಾರಿ ಸುದ್ದಿಯನ್ನು ನೀಡಿದೆ. ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರ ದಾಖಲೆಗಳ ಮರು ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದ್ದು, ಮಾಹಿತಿ ಒದಗಿಸಲು ವಿಫಲರಾದ ಸುಮಾರು 16 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಸೌಲಭ್ಯದಿಂದ ಹೊರಗುಳಿಯುವ ಭೀತಿ ಎದುರಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಮಾತ್ರ ತಲುಪಬೇಕು ಎಂಬ ಉದ್ದೇಶದಿಂದ ಇಂಧನ ಇಲಾಖೆಯು ರಾಜ್ಯಾದ್ಯಂತ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಯೋಜನೆಯ ದುರುಪಯೋಗವನ್ನು ತಡೆಯಲು ಮತ್ತು ಅನರ್ಹರನ್ನು ಗುರುತಿಸಲು ಈ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 69 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಇವರಲ್ಲಿ ಸುಮಾರು 16 ಲಕ್ಷ ಮಂದಿಯ ನಿಖರ ದಾಖಲೆಗಳು ಮತ್ತು ನವೀಕೃತ ಮಾಹಿತಿ ಇನ್ನೂ ಇಲಾಖೆಯ ಕೈಸೇರಿಲ್ಲ.
ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದ ಫಲಾನುಭವಿಗಳ ಪತ್ತೆ
ಬೆಸ್ಕಾಂನ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಕಳೆದ ಮೂರು ಬಾರಿ ಭೇಟಿ ನೀಡಿದರೂ ಬಹುತೇಕ ಮನೆಗಳಿಗೆ ಬೀಗ ಹಾಕಿರುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಕೆಲವರು ಉದ್ಯೋಗ ಅರಸಿ ಬೇರೆಡೆ ತೆರಳಿದ್ದರೆ, ಮತ್ತೆ ಕೆಲವರು ಬಾಡಿಗೆ ಮನೆ ಬದಲಾಯಿಸಿರುವುದು ದಾಖಲೆಗಳ ಸಂಗ್ರಹಕ್ಕೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ, ಅರ್ಹತೆಯಿದ್ದರೂ ಕೇವಲ ಮಾಹಿತಿ ಅಲಭ್ಯತೆಯಿಂದಾಗಿ ಹಲವು ಬಡ ಕುಟುಂಬಗಳು ಯೋಜನೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವ ಫಲಾನುಭವಿಗಳ ಹಿಂದೆ ಹಲವು ಕಾರಣಗಳಿವೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಗೃಹ ಜ್ಯೋತಿ ಯೋಜನೆಗೆ ಸರ್ಕಾರ ಕೆಲವು ಮಾನದಂಡಗಳನ್ನು ವಿಧಿಸಿದೆ. ಅದರಲ್ಲಿ ಆದಾಯ ತೆರಿಗೆ ಪಾವತಿದಾರರು ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇಂತಹ ಫಲಾನುಭವಿಗಳು ಭೀತಿಯಿಂದ ದಾಖಲೆಗಳನ್ನು ನೀಡಲು ಮುಂದೆ ಬರುತ್ತಿಲ್ಲ. ಹೊರರಾಜ್ಯದ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಅಥವಾ ವಾಸ ಸ್ಥಳ ಬದಲಿಸಿರುವವರು ಕಾನೂನು ತೊಡಕುಗಳ ಭೀತಿಯಿಂದ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಅಕ್ಟೋಬರ್ 31 ಅಂತಿಮ ಗಡುವು
ಬೆಸ್ಕಾಂ ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಧೋರಣೆ ತಾಳಿದೆ. ದಾಖಲೆಗಳನ್ನು ಸಲ್ಲಿಸದ ಅಥವಾ ಪರಿಶೀಲನೆಗೆ ಸಹಕರಿಸದ ಗ್ರಾಹಕರಿಗೆ ಅಕ್ಟೋಬರ್ 31 ಅನ್ನು ಅಂತಿಮ ಗಡುವಾಗಿ ನೀಡಲಾಗಿದೆ. ಆ ದಿನಾಂಕದೊಳಗೆ ಹತ್ತಿರದ ಬೆಸ್ಕಾಂ ಉಪ ವಿಭಾಗೀಯ ಕಚೇರಿಗೆ ಭೇಟಿ ನೀಡಿ, ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ನವೀಕರಿಸಬೇಕು. ಈ ಗಡುವು ಮುಗಿದ ನಂತರ, ಮಾಹಿತಿ ನೀಡದವರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರವು ಅಂತಹ ಫಲಾನುಭವಿಗಳನ್ನು ಯೋಜನೆಯಿಂದ ಶಾಶ್ವತವಾಗಿ ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಬಾಡಿಗೆದಾರರಾಗಿದ್ದರೆ ಬಾಡಿಗೆ ಕರಾರು ಪತ್ರ ಅಥವಾ ಮಾಲೀಕರ ಒಪ್ಪಿಗೆ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ.
ಯೋಜನೆಯ ಉದ್ದೇಶ ಬಡ ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಹೊರೆ ಕಡಿಮೆ ಮಾಡುವುದಾಗಿದೆ. ಆದರೆ, ಯೋಜನೆಗೆ ಅರ್ಹತೆ ಇಲ್ಲದವರು ಕೂಡ ಪಡೆಯುತ್ತಿರುವುದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಹಾಗಾಗಿ, ಈ ಪರಿಶೀಲನೆ ಕೇವಲ ಅರ್ಹರನ್ನು ಉಳಿಸಿಕೊಳ್ಳಲು ಮತ್ತು ಅನರ್ಹರನ್ನು ಹೊರಹಾಕಲು ಮಾತ್ರವೇ ಹೊರತು, ಜನರಿಗೆ ತೊಂದರೆ ನೀಡಲು ಅಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

