ನೇಪಾಳ ಪ್ರವಾಹ: ಕರ್ನಾಟಕದ 11 ಮಂದಿಯ ವಿವರ ಲಭ್ಯ, ಎಲ್ಲರೂ ಸುರಕ್ಷಿತ
x

ನೇಪಾಳ ಪ್ರವಾಹ: ಕರ್ನಾಟಕದ 11 ಮಂದಿಯ ವಿವರ ಲಭ್ಯ, ಎಲ್ಲರೂ ಸುರಕ್ಷಿತ

ಕರ್ನಾಟಕದ 13 ಮಂದಿಯ ವಿವರಗಳನ್ನು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಸಂಗ್ರಹಿಸಿದೆ. ಇವರಲ್ಲಿ 11 ವ್ಯಕ್ತಿಗಳು ಬೆಂಗಳೂರು ನಗರವರಾಗಿದ್ದು, ಒಬ್ಬರು ಮೈಸೂರು ಜಿಲ್ಲೆ ಮತ್ತು ಇನ್ನೊಬ್ಬರು ಧಾರವಾಡ ಜಿಲ್ಲೆಯವರಾಗಿದ್ದಾರೆ.


ನೇಪಾಳ-ಟಿಬೆಟ್ ಹಾಗೂ ಕ್ಸಿಜಿಯಾಂಗ್ ಸ್ವಾಯತ್ತ ಪ್ರದೇಶಗಳಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಕನ್ನಡಿಗರ ಸುರಕ್ಷತೆ ಕುರಿತು ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನವದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರವಾಹ, ಭೂಕುಸಿತ, ರಸ್ತೆ ತಡೆ ಅಥವಾ ಇತರ ಪ್ರಾಕೃತಿಕ ವಿಕೋಪಗಳಿಂದಾಗಿ ಪ್ರಸ್ತುತ ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರ ವಿವರಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಲಾಗಿದೆ. ಮಾನಸ ಸರೋವರ ಹಾಗೂ ನೇಪಾಳ ಪ್ರವಾಸ ಕೈಗೊಂಡವರ ಬಗ್ಗೆ ಮಾಹಿತಿ ಇರುವವರು ವಿವರ ತಿಳಿಸಲು ಗೂಗಲ್ ಫಾರ್ಮ್ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ವ್ಯಕ್ತಿಗಳ ಪ್ರಸ್ತುತ ಸ್ಥಳ, ಸ್ಥಿತಿ, ಸಂಪರ್ಕ ವಿವರಗಳು, ಅಗತ್ಯವಿರುವ ನೆರವು, ಪ್ರಯಾಣಿಕರ ಗುಂಪಿನ ವಿವರಗಳು ಮತ್ತು ಪ್ರವಾಸ ಆಯೋಜಕರ ವಿವರಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಕೋರಲಾಗಿದೆ.

ಕನ್ನಡಿಗರು ಇದ್ದರೆ ಕೂಡಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಇತರ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪ್ರವಾಸ ಸಂಘಟಕರ ಸಮನ್ವಯದೊಂದಿಗೆ ರಕ್ಷಣೆ, ಸ್ಥಳಾಂತರ ಹಾಗೂ ಇತರ ಅಗತ್ಯ ನೆರವು ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

24 X 7 ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ

ನೇಪಾಳ ಪ್ರವಾಹ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಮತ್ತು ನೆರವು ನೀಡಲು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ನವದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಅವರು ಕೂಡ ಪರಿಸ್ಥಿತಿಯನ್ನು ವೀಕ್ಷಿಸಲು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ವಿಶೇಷ ತಂಡಗಳನ್ನು ರಚಿಸಿದ್ದಾರೆ. ನೆರವಿಗಾಗಿ ಕಠ್ಮಂಡು ಮತ್ತು ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನು ಸಹ ಹಂಚಿಕೊಳ್ಳಲಾಗಿದೆ.

ಇಂದು ಸಂಜೆ 5 ಗಂಟೆಯವರೆಗೆ ಸಂಗ್ರಹವಾದ ಮಾಹಿತಿ ಪ್ರಕಾರ, ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಹಾಗೂ ಇತರ ರಾಜ್ಯಗಳ ಜನರನ್ನೂ ಒಳಗೊಂಡ ತಂಡಗಳಲ್ಲಿ ಪ್ರಯಾಣಿಸುತ್ತಿರುವ ಕರ್ನಾಟಕದ 13 ಮಂದಿಯ ವಿವರಗಳನ್ನು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಸಂಗ್ರಹಿಸಿದೆ. ಇವರಲ್ಲಿ 11 ವ್ಯಕ್ತಿಗಳು ಬೆಂಗಳೂರು ನಗರವರಾಗಿದ್ದು, ಒಬ್ಬರು ಮೈಸೂರು ಜಿಲ್ಲೆ ಮತ್ತು ಇನ್ನೊಬ್ಬರು ಧಾರವಾಡ ಜಿಲ್ಲೆಯವರಾಗಿದ್ದಾರೆ. ಹೆಚ್ಚಿನವರು ನೇಪಾಳದ ರಸುವಾ ಜಿಲ್ಲೆಯ ತಿಮುರೆ ಪ್ರದೇಶದಲ್ಲಿದ್ದರೆ, ಕೆಲವರು ಟಿಬೆಟ್ ಸ್ವಾಯತ್ತ ಪ್ರದೇಶದ ದಾರ್ಚೆನ್ ಪ್ರದೇಶದಲ್ಲಿದ್ದಾರೆ.

ಸಂತ್ರಸ್ತರ ವಿವರಗಳನ್ನು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ಹೊಸ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯು, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿದೆ. ಕಠ್ಮಂಡು ಮತ್ತು ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ನಿಯಮಿತವಾಗಿ ಮಾಹಿತಿ ಹಂಚಿಕೊಳ್ಳುತ್ತಿವೆ. ಕರ್ನಾಟಕದ ನಿವಾಸಿಗಳಿಗೆ ಸೂಕ್ತ ಸಮಯದಲ್ಲಿ ನೆರವು, ತೆರವು ಕಾರ್ಯಾಚರಣೆ ಮತ್ತು ಸುರಕ್ಷಿತವಾಗಿ ಹಿಂತಿರುಗಲು ಅನುಕೂಲವಾಗುವಂತೆ ಈ ವಿವರಗಳನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಯೊಂದಿಗೂ ಹಂಚಿಕೊಳ್ಳಲಾಗಿದೆ ಪ್ರಕಟಣೆ ಹೇಳಿದೆ.

ಪರಿಸ್ಥಿತಿಯು ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ, ಹಾನಿಗೊಳಗಾದ ಪ್ರದೇಶಗಳಲ್ಲಿರುವ ಕರ್ನಾಟಕದ ಪ್ರಜೆಗಳು ಸುರಕ್ಷಿತ ಸ್ಥಳಗಳಲ್ಲೇ ಉಳಿಯಲು ಮತ್ತು ಸ್ಥಳೀಯ ಆಡಳಿತ ಹಾಗೂ ಭಾರತೀಯ ರಾಯಭಾರ ಕಚೇರಿಗಳು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸಲಹೆ ನೀಡಲಾಗಿದೆ. ಸಕ್ಷಮ ಪ್ರಾಧಿಕಾರಗಳು ಅನುಮತಿಸದ ಹೊರತು ಅಥವಾ ವ್ಯವಸ್ಥೆ ಮಾಡದ ಹೊರತು ಹಾನಿಗೊಳಗಾದ ಮಾರ್ಗಗಳಲ್ಲಿ ಪ್ರಯಾಣಿಸದಂತೆ ಸೂಚಿಸಲಾಗಿದೆ.

Read More
Next Story