SIR| ಫಾರಂ-7 ದುರ್ಬಳಕೆ; ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ಆಗ್ರಹಿಸಿ ಧರಣಿ ಕುಳಿತ ಸರ್ಕಾರ
ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಸಭೆಯನ್ನೂ ರದ್ದು ಮಾಡಿ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರು ಚುನಾವಣಾ ಆಯೋಗದ ಮುಂದೆ ಧರಣಿ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪಗಳ ವಿರುದ್ಧ ಕಾಂಗ್ರೆಸ್ ನೇತೃತ್ವದ ಸರ್ಕಾರ ತಿರುಗಿಬಿದ್ದಿದೆ. ಮತದಾರರ ಪೂರ್ವ ಮುದ್ರಿತ ಮಾಹಿತಿ ಒಳಗೊಂಡ ಫಾರಂ-7 ದುರ್ಬಳಕೆಗೆ ಸಂಬಂಧಿಸಿ ವಿಡಿಯೋ ಹಾಗೂ ಆಡಿಯೋ ಸಾಕ್ಷ್ಯ ಬಿಡುಗಡೆ ಮಾಡಿರುವ ಸರ್ಕಾರ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೇಂದ್ರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುತ್ತಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಫಾರಂ-7 ದುರ್ಬಳಕೆಯನ್ನೇ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ರಾಜ್ಯದ ಹಲವು ತಾಲೂಕುಗಳಲ್ಲಿ ಇದು ದುರ್ಬಳಕೆ ಪತ್ತೆಗಾಗಿ ಬೂತ್ ಮಟ್ಟದ ಏಜೆಂಟ್ ಗಳಿಗೆ ಸೂಚನೆ ನೀಡಿದೆ. ಈಗಾಗಲೇ ಭಾಲ್ಕಿ, ಬಬಲೇಶ್ವರ, ಗೋಕಾಕ್, ಟಿ.ನರಸೀಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಪಕ್ಷಗಳ ನಾಯಕರು ಫಾರಂ-7 ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯ ದೊರೆತಿದ್ದು, ತಕ್ಷಣವೇ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದೆ.
ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಸಭೆಯನ್ನೂ ರದ್ದು ಮಾಡಿ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರು ಚುನಾವಣಾ ಆಯೋಗದ ಮುಂದೆ ಧರಣಿ ಆರಂಭಿಸಿದ್ದಾರೆ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗದವರನ್ನು ಬೇಕೆಂತಲೇ ಮತದಾರರ ಪಟ್ಟಿಯಿಂದ ಹೊರಗಿಡುವ ಷಡ್ಯಂತ್ರ ರೂಪಿಸಿದವರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇಡೀ ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಇಡೀ ಸರ್ಕಾರವೇ ಬೀದಿ ಹೋರಾಟಕ್ಕೆ ಇಳಿದಿರುವುದು ಇದೇ ಮೊದಲು.
ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಬಳಿಕ ನೇರವಾಗಿ ಚುನಾವಣಾ ಆಯೋಗ ಕಚೇರಿಗೆ ಧಾವಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಚುನಾವಣಾಧಿಕಾರಿ ಅನ್ಬುಕುಮಾರ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಆಯೋಗದ ಮೆಟ್ಟಿಲುಗಳ ಮುಂದೆ ದಿಢೀರ್ ಧರಣಿ ಆರಂಭಿಸಿದರು. ಚುನಾವಣಾ ಆಯೋಗದ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸುವವರೆಗೂ ಧರಣಿ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವುದು ತೀವ್ರ ಸಂಚಲನ ಮೂಡಿಸಿದೆ.
ಇದಕ್ಕೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಫಾರಂ-7 ಅನ್ನು ಬಿಜೆಪಿ ಕಾರ್ಯಕರ್ತರು ಬಿಎಲ್ಒಗಳಿಗೆ ಸಲ್ಲಿಸಿ, ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕಲು ಪ್ರಯತ್ನಿಸುತ್ತಿರುವುದು ಪತ್ತೆಯಾಗಿದೆ. ಇದು ಕ್ರಿಮಿನಲ್ ಸಂಚು. ಕೋಮು ಸಾಮರಸ್ಯ ಕದಡಲು ನಡೆಸಿದ ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ಸಿಎಂ ಕಚೇರಿ ಬಿಡುಗಡೆ ಮಾಡಿರುವ ಬಿಜೆಪಿ ಕಾರ್ಯಕರ್ತರ ತಪ್ಪೊಪ್ಪಿಗೆ ಪತ್ರ
ಸಚಿವರ ಕ್ಷೇತ್ರಗಳಲ್ಲೇ ಸಾವಿರಾರು ಮತ ಡಿಲೀಟ್
"ಬಬಲೇಶ್ವರದಲ್ಲಿ 1634 ಸಾವಿರಕ್ಕೂ ಅಧಿಕ ಇಂತಹ ಅರ್ಜಿಗಳನ್ನು ಸಲ್ಲಿಸಲಾಗಿದೆ. ಬಿಜಾಪುರದಲ್ಲಿ 14 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಭಾಲ್ಕಿಯಲ್ಲಿ 3244 ಇಂತಹ ಅರ್ಜಿಗಳನ್ನು ಬಿಜೆಪಿ ಕಾರ್ಯಕರ್ತರು ನೀಡಿದ್ದಾರೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಭಾಲ್ಕಿ, ನರಸಿಂಹರಾಜಪುರ, ಬೆಳಗಾವಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಫಾರಂ- 7 ನೀಡಿರುವುದು ಕಂಡು ಬಂದಿದೆ. ಮತ್ತೆ ಕೆಲವು ಕ್ಷೇತ್ರಗಳಲ್ಲಿ 5-10 ಸಾವಿರ ಮತಗಳನ್ನು ಡಿಲೀಟ್ ಮಾಡುವ ಷಡ್ಯಂತ್ರ ನಡೆದಿದೆ. ಪ್ರಕಾಶ್ ರಾಜ್ ಅವರ ನೇತೃತ್ವದ ಸಿವಿಲ್ ಸೊಸೈಟಿ ಸದಸ್ಯರು ಮತಗಟ್ಟೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ವಿವರಿಸಿದ್ದಾರೆ.
"ಬಿಜೆಪಿಯ ಅಧಿಕೃತ ಕಾರ್ಯಕರ್ತರು ತಮ್ಮ ಹೆಸರಿನಲ್ಲಿ ನೂರಾರು ಇಂತಹ ಫಾರಂ 7 ಅರ್ಜಿಗಳನ್ನು ಸಲ್ಲಿಸಿರುವುದನ್ನು ಪತ್ತೆ ಹಚ್ಚಿದ್ದೇವೆ. ಬಬಲೇಶ್ವರದಲ್ಲಿ ಬಿಜೆಪಿಯ ಭೀಮು ಗೋಲಸಂಗಿ, ಹುಚ್ಚಪ್ಪ ಗಾಣಿಗೇರ, ವಿನಾಯಕ ಮಮದಾಸ, ಗೋವಿಂದ ಮುದನೂರ, ಆನಂದ ಅಂಬಿಗೇರ, ಮಹೇಶ್ ಮುಕಾರ್ತಿಹಾಳ ಮತ್ತಿತರರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಈ ಬಗ್ಗೆ ಸಿಎಂ ಕಚೇರಿ ದಾಖಲೆಗಳನ್ನೂ ಬಿಡುಗಡೆ ಮಾಡಿದೆ.
50 ಲಕ್ಷ ವೋಟರ್ಸ್ ಡಿಲೀಟ್ ಷಡ್ಯಂತ್ರ
ಕರ್ನಾಟಕದಲ್ಲಿ ಈಗಾಗಲೇ ಎಸ್ಐಆರ್ ಪ್ರಕ್ರಿಯೆಯಲ್ಲಿ 1.07 ಕೋಟಿ ಮತದಾರರ ಹೆಸರು ಕೈಬಿಡಲಾಗಿದ್ದು, 45 ಲಕ್ಷ ಮತದಾರರಿಗೆ ನೋಟೀಸ್ ನೀಡಿದ್ದಾರೆ. ಇದಾದ ಬಳಿಕವು ಬಿಜೆಪಿ ಕಾರ್ಯಕರ್ತರು ಸುಮಾರು 50 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಿಸಲು ಸಂಚು ರೂಪಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
"ರಾಜ್ಯ ಚುನಾವಣಾ ಆಯೋಗ, ತಕ್ಷಣ ಈ ಎಲ್ಲಾ ಪ್ರಕರಣಗಳ ಬಗ್ಗೆ ಎಫ್ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು. ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಬಿಜೆಪಿ ಹಾಗೂ ಜನತಾದಳ ನಾಯಕರ ಕ್ರಿಮಿನಲ್ ಷಡ್ಯಂತ್ರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದ್ದಾರೆ. "ರಾಜ್ಯದ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ನಡೆಯುತ್ತಿರುವ ಈ ಕ್ರಿಮಿನಲ್ ಷಡ್ಯಂತ್ರದ ಬಗ್ಗೆ ಪೊಲೀಸರು ಪ್ರತ್ಯೇಕ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲಿದ್ದಾರೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗೆಲ್ಲಲಾಗದೇ ಎಸ್ಐಆರ್ ಮೂಲಕ ಅಕ್ರಮ
"ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಹಾಗೂ ಜನತಾದಳ ಇಂತಹ ಕ್ರಿಮಿನಲ್ ಷಡ್ಯಂತ್ರ ನಡೆಸುತ್ತಿರುವುದು ಜಗಜ್ಜಾಹೀರಾಗಿದೆ. ಇಡೀ ದೇಶದಲ್ಲಿಯೇ ಇಂತಹ ಕ್ರಿಮಿನಲ್ ಗಳು ಇರಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಇಂತಹ ಕ್ರಿಮಿನಲ್ ಕೃತ್ಯಗಳು ನಡೆಯಲು ಬಿಡುವುದಿಲ್ಲ" ಎಂದು ಸಿಎಂ ಎಚ್ಚರಿಸಿದ್ದಾರೆ.
"ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರಿಗೆ ಮಾಹಿತಿಯಿಲ್ಲದೇ ಇಂತಹ ಕೃತ್ಯ ನಡೆಯಲು ಸಾಧ್ಯವಿಲ್ಲ. ಎಸ್ಐಆರ್ ದೇಶದ ಅತಿ ದೊಡ್ಡ ವಂಚನೆಯಾಗಿದ್ದು, ಕೂಡಲೇ ಎಸ್ಐಆರ್ ರದ್ದಾಗಬೇಕು" ಎಂದು ಆಗ್ರಹಿಸಿದ್ದಾರೆ.
"ಎಸ್ಐಅರ್ ಪ್ರಾರಂಭವಾದ ಬಳಿಕ ಸರ್ಕಾರದ ವತಿಯಿಂದ ಆಯೋಗಕ್ಕೆ ಎಲ್ಲಾ ಬೆಂಬಲ, ಸಹಕಾರ ನೀಡುತ್ತಾ ಬಂದಿದ್ದೇವೆ. 54 ಸಾವಿರ ಬಿಎಲ್ಎ-2 ಗಳನ್ನು ಪಕ್ಷದ ವತಿಯಿಂದ ನೇಮಕ ಮಾಡಿದ್ದೇವೆ. ಆಯೋಗದ ಕಾರ್ಯಕ್ಕೆ ಎಲ್ಲಾ ನೆರವನ್ನು ಸರ್ಕಾರ ನೀಡುತ್ತಾ ಬಂದಿದೆ. ಆದರೆ, ಇದೀಗ ಅರ್ಹ ಮತದಾರರನ್ನು ಅಕ್ರಮವಾಗಿ ತೆಗೆದು ಹಾಕಲು ನಡೆಯುತ್ತಿರುವ ಕ್ರಿಮಿನಲ್ ಸಂಚು ಯಶಸ್ವಿಯಾಗಲು ನಾವು ಬಿಡುವುದಿಲ್ಲ" ಎಂದು ಹೇಳಿದ್ದಾರೆ.

