
ಕಸ್ತೂರಿ ರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ; ನಾಗೇಂದ್ರ ರಾಜೀನಾಮೆ ಇಲ್ಲ- ಡಿ.ಕೆ. ಶಿವಕುಮಾರ್
ಕಸ್ತೂರಿ ರಂಗನ್ ವರದಿ ಜಾರಿಯಿಂದ ಕರ್ನಾಟಕದ 10 ಜಿಲ್ಲೆಗಳ 33 ತಾಲೂಕುಗಳು ಹಾಗೂ 1,649 ಗ್ರಾಮಗಳ ಒಟ್ಟು 22,600 ಚದರ ಕಿಲೋಮೀಟರ್ ಪ್ರದೇಶ ಅಧಿಸೂಚನೆಯ ವ್ಯಾಪ್ತಿಗೆ ಬರಲಿದೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಾದ ಡಾ.ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ತಿರಸ್ಕರಿಸುವ ಸಂಬಂಧ ಮುಂದಿನ ತಿಂಗಳು ವಿಶೇಷ ಅಧಿವೇಶನ ನಡೆಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರ ರಾಜ್ಯದ ಅಭಿಪ್ರಾಯ ಆಲಿಸದೇ ಏಕಪಕ್ಷಿಯವಾಗಿ ಕರಡು ಅಧಿಸೂಚನೆ ಜಾರಿಗೆ ಗಡುವು ನೀಡಿದೆ. ಎರಡು ತಿಂಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದು, ಅಷ್ಟರಲ್ಲಿ ಪಶ್ಚಿಮಘಟ್ಟ ಭಾಗದ ಜನರು ಹಾಗೂ ತಜ್ಞರು ಅಭಿಪ್ರಾಯ ಆಲಿಸಲಾಗುವುದು. ಯಾವುದೇ ಕಾರಣಕ್ಕೂ ಕೇಂದ್ರದ ನಿರ್ಧಾರವನ್ನು ಒಪ್ಪುವುದಿಲ್ಲ. ಮುಂದಿನ ತಿಂಗಳು ಸಂಪುಟದಲ್ಲಿ ಚರ್ಚಿಸಿ, ನಂತರ ಇಂದು ದಿನ ವಿಶೇಷ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಯಿಂದ ಕರ್ನಾಟಕದ 10 ಜಿಲ್ಲೆಗಳ 33 ತಾಲೂಕುಗಳು ಹಾಗೂ 1,649 ಗ್ರಾಮಗಳ ಒಟ್ಟು 22,600 ಚದರ ಕಿಲೋಮೀಟರ್ ಪ್ರದೇಶ ಅಧಿಸೂಚನೆಯ ವ್ಯಾಪ್ತಿಗೆ ಬರಲಿದೆ. ವರದಿ ಜಾರಿಯಾದರೆ ಕಲ್ಲು, ಮರಳು ಗಣಿಗಾರಿಕೆ, ವಿದ್ಯುತ್ ಯೋಜನೆಗಳು ಹಾಗೂ ಹೊಸ ಟೌನ್ಶಿಪ್ಗಳ ನಿರ್ಮಾಣಕ್ಕೆ ನಿರ್ಬಂಧ ಇರಲಿದೆ. ಇದರಿಂದ ಸ್ಥಳೀಯ ಜನರ ಬದುಕಿಗೂ ತೊಂದರೆ ಆಗಲಿದೆ. 2025 ಸೆಪ್ಟೆಂಬರ್ 26 ರಂದು ನಡೆದ ಸಂಪುಟದಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಮತದಾರರ ಹಕ್ಕು ಕಾಪಾಡಲು ಕ್ರಮ
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಸುಮಾರು 1 ಕೋಟಿ 7 ಲಕ್ಷ ಜನರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಕಂಡುಬಂದಿದೆ. ರಾಜ್ಯ ಸರ್ಕಾರ ಮತದಾರರ ಹಕ್ಕು ರಕ್ಷಿಸಲು ಈಗಾಗಲೇ ಪಿಆರ್ಸಿ ಹಾಗೂ ಜಾತಿ ಪ್ರಮಾಣ ಪತ್ರ ನೀಡುತ್ತಿದೆ. ಈಗಾಗಲೇ 43ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ. ಪಕ್ಷದ ಶಾಸಕರು ಬಿಎಲ್ಎಗಳ ಮೂಲಕ ಸೂಕ್ತ ದಾಖಲೆ ಒದಗಿಸಿ ಮತದಾರರ ಹಕ್ಕು ರಕ್ಷಿಸಲು ಮುಂದಾಗಬೇಕು ಎಂದು ಸೂಚಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೇಂದ್ರದ ಅನುದಾನ, ನೆರವು ಸಿಗಬೇಕಾದರೆ ಡಿಸೆಂಬರ್ ಒಳಗೆ ಪಾಲಿಕೆ ಹಾಗೂ ಪಂಚಾಯ್ತಿ ಚುನಾವಣೆ ನಡೆಸಲೇಬೇಕು. ಎಸ್‌ಐಆರ್ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಚುನಾವಣೆಗೆ ಸಿದ್ಧತೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಾಳೆ ಬರ ಪೀಡಿತ ತಾಲೂಕು ಘೋಷಣೆ
ರಾಜ್ಯದ ವಿವಿಧ ತಾಲೂಕುಗಳಲ್ಲಿ ಮಳೆ ಅಭಾವದ ವರದಿ ಆಧರಿಸಿ ನಾಳೆ ಅಥವಾ ನಾಡಿದ್ದು ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಬರಪೀಡಿತ ತಾಲೂಕುಗಳನ್ನು ಘೋಷಿಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಮೊದಲ ಹಂತದಲ್ಲಿ 102 ತಾಲೂಕುಗಳಲ್ಲಿ ಬರದ ಛಾಯೆ ಇರುವುದು ಗೊತ್ತಾಗಿದೆ. ಈಗಾಗಲೇ ಕುಡಿಯುವ ನೀರಿನ ಅಭಾವ ನೀಗಿಸಲು ಪ್ರತಿ ತಾಲೂಕಿಗೆ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲೂ ಹಣವಿದೆ. ಅಗತ್ಯ ಕೆಲಸಗಳಿಗೆ ಬಳಸಲು ಶಾಸಕರಿಗೂ ಸೂಚನೆ ನೀಡಲಾಗಿದೆ. ಜನರ ವಲಸೆ ತಪ್ಪಿಸಲು ಕ್ಷೇತ್ರವಾರು ಕೈಗಾರಿಕಾ ಉದ್ಯೋಗ ಸೃಷ್ಟಿಗೂ ಸಲಹೆ ನೀಡಿದ್ದೇನೆ ಎಂದು ಹೇಳಿದ್ದಾರೆ.
'ಭಾರತ್ ಜೋಡೋ' ಸಂಘಟನೆ ಸ್ಥಾಪನೆ
ಪ್ರತಿ ಪಂಚಾಯ್ತಿಯಲ್ಲಿ 16 ರಿಂದ 35 ವರ್ಷ ವಯಸ್ಸಿನ ಯುವಕರಿಗಾಗಿ ಭಾರತ್ ಜೋಡೋ ಸಂಘಟನೆ ಸ್ಥಾಪಿಸುತ್ತಿದ್ದು, ಪ್ರತಿ ಸಂಘಟನೆಗೆ 10 ಲಕ್ಷ ರೂಪಾಯಿ ನೆರವು ಘೋಷಿಸಲಾಗಿದೆ. ಪಂಚಾಯ್ತಿ ಅಥವಾ ವಾರ್ಡ್ ವ್ಯಾಪ್ತಿಯ ಸರ್ಕಾರಿ ಅಧಿಕಾರಿಯೇ ಸಂಘಟನೆಗೆ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. "ನೋ ಟು ಡ್ರಗ್ಸ್, ಯೆಸ್ ಟು ಸ್ಪೋರ್ಟ್ಸ್" ತತ್ವದಡಿ ಕ್ರೀಡೆ, ಸಂಸ್ಕೃತಿ, ವಿಪತ್ತು ನಿರ್ವಹಣೆ ತರಬೇತಿ ನೀಡಲಾಗುತ್ತದೆ. ಇಷ್ಟು ದಿನ ನಡೆದ ಆನ್‌ಲೈನ್ ತರಬೇತಿಯಲ್ಲಿ ಈಗಾಗಲೇ 7 ಲಕ್ಷ ಯುವಕರು ಸದಸ್ಯತ್ವ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ.
ಜಿಲ್ಲಾವಾರು ಬಡವರಿಗೆ ನಿವೇಶನ
ಕಂದಾಯ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಲು ಜಾಗ ಗುರುತಿಸಲಾಗುತ್ತಿದೆ. ಬಡವರು, ಸೂರಿಲ್ಲದವರಿಗೆ ನಿವೇಶನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸೂಕ್ತ ನಿವೇಶನ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಪಾರ್ಕ್ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಕುರಿತು ಉದ್ಭವಿಸಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪಾರ್ಕ್ಗಳನ್ನು ಯಾರೂ ಬಳಸಲು ಬಿಡುವುದಿಲ್ಲ, ಯಾವ ಅದಾನಿಗೂ ಕೊಡುವುದಿಲ್ಲ. ಸಾರ್ವಜನಿಕ ರಸ್ತೆ ಅಗಲೀಕರಣಕ್ಕೆ ಮಾತ್ರ ಗರಿಷ್ಠ ಶೇ 5ರಷ್ಟು ಜಾಗ ಬಳಸಲಾಗುವುದು. ಖಾಸಗಿಯವರಿಂದ ಪಡೆದರೆ ಅದಕ್ಕೆ 1:2 ಪರಿಹಾರ ಅಥವಾ ಟಿಡಿಆರ್ ಕೊಡಬೇಕಾಗುತ್ತದೆ. ಈ ಪ್ರಮೇಯ ತಪ್ಪಿಸಲು ಸರ್ಕಾರ ಈ ಮಸೂದೆ ತಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಸುತ್ತಮುತ್ತ ತುರಹಳ್ಳಿ, ಬಿ.ಎಂ. ಕಾವಲ್, ಬಸವತಾರ, ಮಂಡೂರು, ಜ್ಯೋತಿಪುರ ಸೇರಿದಂತೆ ಒಟ್ಟು 5 ಕಡೆ 5000 ಎಕರೆ ಜಾಗದಲ್ಲಿ ಲಾಲ್ಬಾಗ್ ಮಾದರಿ ಟ್ರೀ ಪಾರ್ಕ್ ನಿರ್ಮಿಸಲಾಗುವುದು. ಅದೇ ರೀತಿ ಅಂತರ್ಜಲ ಸಂರಕ್ಷಣೆಗಾಗಿ ಹೆಸರುಘಟ್ಟ, ಹೊಸಕೋಟೆ ಸೇರಿದಂತೆ ಐದಾರು ಕೆರೆಗಳನ್ನು ಗುರುತಿಸಿ ಒತ್ತುವರಿ ಮುಕ್ತಗೊಳಿಸಲಾಗುವುದು. ಕೆರೆಗಳಿಗೆ ತ್ಯಾಜ್ಯ ನೀರು ಸೇರದಂತೆ ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ರಾಜೀನಾಮೆ ಪ್ರಶ್ನೆ ಇಲ್ಲ
ಸಚಿವ ನಾಗೇಂದ್ರ ಅವರು ಪಕ್ಷದ ಶಿಸ್ತಿನ ಸಿಪಾಯಿ, ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಉದ್ಭವಿಸಲ್ಲ. ನಾವು ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆಗಾಗಿ ಹೋಗುತ್ತಿದ್ದೇನೆ. ಜತೆಗೆ ಕೇಂದ್ರ ಸಚಿವರು ಹಾಗೂ ಕಾನೂನು ತಜ್ಞರನ್ನು ಭೇಟಿ ಮಾಡಿ ಚರ್ಚಿಸಲು ಹೋಗುತ್ತಿದ್ದೇನೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನೈಸ್ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನನಗೇನು ಬೇಕಾಗಿಲ್ಲ. ಬೇಕಾದರೆ ಕುಮಾರಸ್ವಾಮಿ ಅವರೇ ನೈಸ್ ಟೇಕ್ ಓವರ್ ಮಾಡಿಕೊಂಡು ಎಂಜಾಯ್ ಮಾಡಲಿ, ಅವರಿಗೆ ಉತ್ತರ ಕೊಡಲ್ಲ. ಜೆಡಿಎಸ್ನಲ್ಲಿ ನನ್ನ ಹೆಸರು ಮಾತನಾಡಿದರೆ ಮಾತ್ರ ಪಕ್ಷದಲ್ಲಿ ಅವರಿಗೆ ಕಿಮ್ಮತ್ತು. ಅದೇ ರೀತಿ ಬಿಜೆಪಿಯವರಿಗೆ ಮಾರ್ಕೆಟ್ ಸಿಗಲಿದೆ. ಇಲ್ಲ ಅಂದರೆ ಯಾರಿಗೂ ನಿದ್ರೆ ಬರೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

