
ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶ
ರಾಜ್ಯದಲ್ಲಿ ಎಸ್‌ಸಿ ಒಳಮೀಸಲಾತಿ ಅಧಿಕೃತ ಜಾರಿ; ಶೇ. 15ರಷ್ಟು ಕೋಟಾ ಹಂಚಿಕೆ
ಪ್ರವರ್ಗ-ಸಿ ಅಡಿಯಲ್ಲಿ ಲಭ್ಯವಾಗುವ ಒಟ್ಟು ಹುದ್ದೆ ಅಥವಾ ಸೀಟುಗಳಲ್ಲಿ ಶೇಕಡಾ 20ರಷ್ಟನ್ನು ಎಸ್‌ಸಿ ಪಟ್ಟಿಯಲ್ಲಿರುವ 59 'ಅತ್ಯಂತ ಹಿಂದುಳಿದ ಜಾತಿ'ಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕು.
ರಾಜ್ಯದ ಸರ್ಕಾರಿ ಉದ್ಯೋಗ ಹಾಗೂ ಶೈಕ್ಷಣಿಕ ಪ್ರವೇಶಾತಿಗಳಲ್ಲಿ ಬಹುನಿರೀಕ್ಷಿತ ಪರಿಶಿಷ್ಟ ಜಾತಿ ಒಳಮೀಸಲಾತಿಯನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ. ಹೈಕೋರ್ಟ್‌ನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ಪ್ರಸ್ತುತ ಎಸ್‌ಸಿ ಮೀಸಲಾತಿಯನ್ನು ತಾತ್ಕಾಲಿಕವಾಗಿ ಶೇ. 17ರಿಂದ ಶೇ. 15ಕ್ಕೆ ಸೀಮಿತಗೊಳಿಸಿ, ಈ ಹೊಸ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೆ ತರಲಾಗಿದೆ.
ಒಟ್ಟು ಮೀಸಲಾತಿ ಪ್ರಮಾಣವನ್ನು ತಾತ್ಕಾಲಿಕವಾಗಿ ಶೇ. 50ಕ್ಕೆ ಸೀಮಿತಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದನ್ವಯ, ಫೆಬ್ರವರಿ 26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಏಪ್ರಿಲ್ 27ರಂದು ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಒಳಮೀಸಲಾತಿ ಹಂಚಿಕೆ ಪ್ರಮಾಣ ಹೀಗಿದೆ
ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು, ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಒಟ್ಟು ಶೇ. 15ರಷ್ಟು ಮೀಸಲಾತಿಯನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ. ಪ್ರವರ್ಗ-ಎಗೆ ಶೇಕಡಾ 5.25ರಷ್ಟು ಮೀಸಲಾತಿ. ಪ್ರವರ್ಗ-ಬಿಗೆ ಶೇಕಡಾ 5.25ರಷ್ಟು ಮೀಸಲಾತಿ, ಪ್ರವರ್ಗ ಸಿಗೆ ಶೇಕಡಾ 4.5ರಷ್ಟು ಮೀಸಲಾತಿ ದೊರೆಯಲಿದೆ.
ಪ್ರವರ್ಗ-ಸಿ ಅಡಿಯಲ್ಲಿ ಲಭ್ಯವಾಗುವ ಒಟ್ಟು ಹುದ್ದೆ ಅಥವಾ ಸೀಟುಗಳಲ್ಲಿ ಶೇಕಡಾ 20ರಷ್ಟನ್ನು ಎಸ್‌ಸಿ ಪಟ್ಟಿಯಲ್ಲಿರುವ 59 'ಅತ್ಯಂತ ಹಿಂದುಳಿದ ಜಾತಿ'ಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕು. ಒಂದು ವೇಳೆ ಈ 59 ಜಾತಿಗಳ ಅಭ್ಯರ್ಥಿಗಳು ಲಭ್ಯವಾಗದಿದ್ದರೆ ಮಾತ್ರ, ಆ ಸ್ಥಾನಗಳನ್ನು ಪ್ರವರ್ಗ-ಸಿಯಲ್ಲಿನ ಇತರೆ ಜಾತಿಗಳಿಗೆ ನೀಡಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನೇಮಕಾತಿ ಪ್ರಕ್ರಿಯೆಗೆ ಕಟ್ಟುನಿಟ್ಟಿನ ನಿಯಮಗಳು
ಈ ಹಿಂದೆ ಒಳಮೀಸಲಾತಿ ಅಳವಡಿಸದೇ ಹೊರಡಿಸಲಾಗಿದ್ದ ಎಲ್ಲಾ ಚಾಲ್ತಿಯಲ್ಲಿರುವ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣದಿಂದಲೇ ಹಿಂಪಡೆಯಬೇಕು. ಹೊಸ ಒಳಮೀಸಲಾತಿ ನಿಯಮವನ್ನು ಅಳವಡಿಸಿಕೊಂಡು 'ಪರಿಷ್ಕೃತ ಅಧಿಸೂಚನೆ'ಹೊರಡಿಸಿ ಪ್ರಕ್ರಿಯೆ ಮುಂದುವರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಆರ್ಥಿಕ ಇಲಾಖೆಯು ಈಗಾಗಲೇ ಅನುಮೋದನೆ ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ, ಎಲ್ಲಾ ನೇಮಕಾತಿ ಪ್ರಾಧಿಕಾರಗಳು ತಕ್ಷಣವೇ ತುರ್ತು ಕ್ರಮ ಕೈಗೊಳ್ಳಬೇಕು. ಹೊಸ ಮೀಸಲಾತಿ ಅನುಷ್ಠಾನಕ್ಕೆ 400 ಬಿಂದುಗಳ ವರ್ತುಲಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ನೇಮಕಾತಿ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಹುದ್ದೆಗಳು ಲಭ್ಯವಿದ್ದರೆ, ಅವುಗಳನ್ನು ಯಾವುದೇ ನಿರ್ದಿಷ್ಟ ಪ್ರವರ್ಗಕ್ಕೆ ಸೇರಿಸದೆ 'ಪರಿಶಿಷ್ಟ ಜಾತಿ ಸಾಮಾನ್ಯ' ಎಂದು ಪರಿಗಣಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.
ಬ್ಯಾಕ್‌ಲಾಗ್ ಭರವಸೆ
ಭವಿಷ್ಯದಲ್ಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿಸಿರುವ ಮೀಸಲಾತಿಯನ್ನು (ಶೇ. 24) ಅಂತಿಮವಾಗಿ ಎತ್ತಿಹಿಡಿದರೆ, ಉಳಿಕೆಯಾಗುವ ಶೇಕಡಾ 6ರಷ್ಟು ಹುದ್ದೆಗಳನ್ನು 'ಬ್ಯಾಕ್‌ಲಾಗ್ ಹುದ್ದೆಗಳು' ಎಂದು ಪರಿಗಣಿಸಿ ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ಭರವಸೆ ನೀಡಿದೆ.

