ಸರ್ಕಾರಿ ನೌಕರರಿಗೆ ಕೇಂದ್ರದ ಮಾದರಿ ಆರೋಗ್ಯ ತಪಾಸಣೆ ಸೌಲಭ್ಯ
x

ಸರ್ಕಾರಿ ನೌಕರರಿಗೆ ಕೇಂದ್ರದ ಮಾದರಿ ಆರೋಗ್ಯ ತಪಾಸಣೆ ಸೌಲಭ್ಯ

ಮಧುಮೇಹ, ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ತಡೆಗಟ್ಟುವ ಉದ್ದೇಶದಿಂದ ಈ ಹೊಸ ಯೋಜನೆ ಜಾರಿಗೆ ತರಲಾಗಿದೆ.


ರಾಜ್ಯ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರದ ಮಾದರಿಯಲ್ಲಿ 40 ವರ್ಷ ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಉಚಿತವಾಗಿ ವಾರ್ಷಿಕ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಹೆಚ್ಚುತ್ತಿರುವ ಕೆಲಸದ ಒತ್ತಡ ಹಾಗೂ ಆಧುನಿಕ ಜೀವನಶೈಲಿಯಿಂದಾಗಿ ನೌಕರರಲ್ಲಿ ಕಾಣಿಸಿಕೊಳ್ಳುತ್ತಿರುವ ಮಧುಮೇಹ, ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ತಡೆಗಟ್ಟುವ ಉದ್ದೇಶದಿಂದ ಈ ಹೊಸ ಯೋಜನೆ ಜಾರಿಗೆ ತರಲಾಗಿದೆ.

ಆರೋಗ್ಯ ಸಂಜೀವಿನಿಯಡಿ ನಗದು ರಹಿತ ಸೌಲಭ್ಯ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊರಡಿಸಿರುವ ಆದೇಶದ ಪ್ರಕಾರ, ಈ ಸೌಲಭ್ಯವು ಪ್ರತಿಭಾವಂತ ಮಹತ್ವಾಕಾಂಕ್ಷಿ ಯೋಜನೆಯಾದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಅಡಿಯಲ್ಲಿ ಲಭ್ಯವಿರಲಿದೆ.

ಯೋಜನೆಯಲ್ಲಿ ನೋಂದಾಯಿಸಿಕೊಂಡಿರುವ ಅರ್ಹ ನೌಕರರಿಗೆ ವರ್ಷಕ್ಕೆ ಒಂದು ಬಾರಿ ಸಂಪೂರ್ಣವಾಗಿ ನಗದು ರಹಿತವಾಗಿ ಈ ತಪಾಸಣೆ ಲಭ್ಯವಾಗಲಿದೆ.

ನಿಯಮ-ಷರತ್ತುಗಳು ಏನೇನು?

ನೌಕರರು ಈ ಸೌಲಭ್ಯವನ್ನು ಪಡೆಯುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನೌಕರರು ತಮಗೆ ಬೇಕಾದ ಎಲ್ಲಾ ತಪಾಸಣೆಗಳನ್ನು ಒಂದೇ ಆಸ್ಪತ್ರೆ ಅಥವಾ ಸಂಸ್ಥೆಯಲ್ಲಿ ಪಡೆದುಕೊಳ್ಳಬೇಕು. ಬೇರೆ ಬೇರೆ ಕಡೆ ಪರೀಕ್ಷೆ ಮಾಡಿಸಲು ಅವಕಾಶವಿರುವುದಿಲ್ಲ.

ಪರೀಕ್ಷೆಗಳ ವೆಚ್ಚದ ಇತ್ಯರ್ಥವನ್ನು ಒಂದೇ ಕ್ಲೈಮ್ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು. ಈ ಉಚಿತ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಗಳು, ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಅಥವಾ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಲು ಅವಕಾಶವಿದೆ. ಈ ನೂತನ ವ್ಯವಸ್ಥೆಯನ್ನು ಸುಗಮವಾಗಿ ಜಾರಿಗೊಳಿಸಲು ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳೊಂದಿಗೆ ಸೂಕ್ತ ಒಡಂಬಡಿಕೆ ಮಾಡಿಕೊಳ್ಳಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕರಿಗೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ.

Read More
Next Story