
ರಾಜ್ಯ ಸರ್ಕಾರವು 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Govt Employees Transfer|ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಆರಂಭ; ಮಾರ್ಗಸೂಚಿಯಲ್ಲಿ ಏನಿದೆ?
ಕರ್ನಾಟಕ ಸರ್ಕಾರವು 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಶೈಕ್ಷಣಿಕ ವರ್ಷದ ಹಿತದೃಷ್ಟಿಯಿಂದ ಏಪ್ರಿಲ್ 13ರಿಂದಲೇ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಸ್ಥಳೀಯ ಆಡಳಿತ ಮತ್ತು ಸಿಬ್ಬಂದಿ ವರ್ಗದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈ ಸಂಬಂಧ ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಪ್ರತ್ಯೇಕ ಅಧಿನಿಯಮಗಳ ಅಡಿಯಲ್ಲಿ ಬರುವ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲಾ ಗುಂಪು-ಎ, ಬಿ, ಸಿ ಮತ್ತು ಡಿ ವೃಂದದ ನೌಕರರಿಗೆ ಅನ್ವಯವಾಗಲಿವೆ.
ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ನೌಕರರು ತಮ್ಮ ಸೇವಾ ವಿವರಗಳನ್ನು ಯಾವುದೇ ತಪ್ಪುಗಳಿಲ್ಲದಂತೆ ಇಲಾಖೆಗೆ ಒದಗಿಸುವುದು ಕಡ್ಡಾಯವಾಗಿದೆ. ಆಡಳಿತಾತ್ಮಕ ಹಿತಾಸಕ್ತಿ ಮತ್ತು ನೌಕರರ ಬೇಡಿಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರವು ಈ ಮಾರ್ಗಸೂಚಿಗಳನ್ನು ರೂಪಿಸಿದೆ.
ವಿಶೇಷವಾಗಿ, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಹಾಗೂ ಮಕ್ಕಳ ವಿದ್ಯಾಭ್ಯಾಸದಂತಹ ಅನಿವಾರ್ಯ ಕಾರಣಗಳನ್ನು ಹೊಂದಿರುವ ನೌಕರರಿಗೆ ಮಾನವೀಯತೆಯ ಆಧಾರದ ಮೇಲೆ ವರ್ಗಾವಣೆಯಲ್ಲಿ ಹೆಚ್ಚಿನ ಆದ್ಯತೆ ಅಥವಾ ವಿನಾಯಿತಿಗಳನ್ನು ನೀಡಲು ಅವಕಾಶವಿದೆ. ವಿಶೇಷಚೇತನ ನೌಕರರಿಗೂ ಸಹ ನಿಯಮಾವಳಿಗಳಲ್ಲಿ ಪ್ರತ್ಯೇಕ ಸಡಿಲಿಕೆಗಳನ್ನು ನೀಡಲಾಗಿದೆ.
ಶೇ. 6ರಷ್ಟು ವರ್ಗಾವಣೆಗೆ ಮಾತ್ರ ಅವಕಾಶ
ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯು 2026ರ ಏಪ್ರಿಲ್ 15 ರಿಂದ ಮೇ 31ರವರೆಗೆ ನಡೆಯಲಿದ್ದು, ಆಯಾ ವೃಂದದ ಒಟ್ಟು ಕಾರ್ಯನಿರತ ಬಲದ ಗರಿಷ್ಠ ಶೇಕಡಾ 6ರಷ್ಟು ನೌಕರರನ್ನು ಮಾತ್ರ ವರ್ಗಾಯಿಸಲು ಅವಕಾಶ ನೀಡಲಾಗಿದೆ. ಎ ಮತ್ತು ಬಿ ಗುಂಪಿನ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಇಲಾಖಾ ಸಚಿವರಿಗೆ ಹಾಗೂ ಸಿ ಮತ್ತು ಡಿ ಗುಂಪಿನ ನೌಕರರಿಗೆ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ. ಆದರೆ, ಉಪ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಚುನಾವಣೆ ಮುಗಿಯುವವರೆಗೆ ಈ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕನಿಷ್ಠ ಸೇವಾವಧಿ ನಿಗದಿ
ಹೊಸ ನಿಯಮದ ಪ್ರಕಾರ, ನೌಕರರು ಒಂದು ನಿರ್ದಿಷ್ಟ ಸ್ಥಳದಲ್ಲಿ ಕನಿಷ್ಠ ಅವಧಿಯ ಸೇವೆಯನ್ನು ಪೂರೈಸುವುದು ಕಡ್ಡಾಯವಾಗಿದೆ. ಗುಂಪು 'ಎ' ಮತ್ತು 'ಬಿ' ಅಧಿಕಾರಿಗಳಿಗೆ 2 ವರ್ಷ, ಗುಂಪು 'ಸಿ' ನೌಕರರಿಗೆ 4 ವರ್ಷ ಹಾಗೂ ಗುಂಪು 'ಡಿ' ನೌಕರರಿಗೆ 7 ವರ್ಷಗಳ ಕನಿಷ್ಠ ಸೇವಾವಧಿಯನ್ನು ನಿಗದಿಪಡಿಸಲಾಗಿದೆ. ಸಚಿವಾಲಯದ ನೌಕರರು ಒಂದು ಇಲಾಖೆಯಲ್ಲಿ ಗರಿಷ್ಠ 5 ವರ್ಷಗಳ ಕಾಲ ಮಾತ್ರ ಕೆಲಸ ಮಾಡಬಹುದಾಗಿದ್ದು, ಪುನಃ ಅದೇ ಇಲಾಖೆಗೆ ಸೇರಲು 2 ವರ್ಷಗಳ 'ಕೂಲಿಂಗ್ ಆಫ್' ಅವಧಿಯನ್ನು ಪೂರೈಸಬೇಕಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ನೌಕರರನ್ನು 10 ವರ್ಷಗಳವರೆಗೆ ಆ ಭಾಗದಿಂದ ಹೊರಗೆ ವರ್ಗಾಯಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಕ್ಷಮ ಪ್ರಾಧಿಕಾರದ ಜವಾಬ್ದಾರಿಗಳು
ವರ್ಗಾವಣೆಗೊಂಡ ನೌಕರರಿಗೆ ಯಾವುದೇ ವಿಳಂಬವಿಲ್ಲದೆ ಕಡ್ಡಾಯವಾಗಿ ಸ್ಥಳ ನಿಯುಕ್ತಿ ನೀಡಬೇಕು ಎಂದು ಸರ್ಕಾರ ಸೂಚಿಸಿದೆ. ಸ್ಥಳ ನಿಯುಕ್ತಿಗಾಗಿ ಕಾಯಿಸುವುದು ಸರ್ಕಾರದ ಮೇಲೆ ಅನಗತ್ಯ ಆರ್ಥಿಕ ಹೊರೆಯಾಗಲಿದೆ ಎಂದು ಎಚ್ಚರಿಸಲಾಗಿದೆ. ಗಂಭೀರ ಆರೋಪ ಅಥವಾ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ನೌಕರರನ್ನು ಅವರು ಕೋರುವ ಜಾಗಕ್ಕೆ ಅಥವಾ ತನಿಖೆಗೆ ಹಸ್ತಕ್ಷೇಪ ಮಾಡಬಹುದಾದ ಹುದ್ದೆಗಳಿಗೆ ನೇಮಿಸದೆ, ಕಾರ್ಯನಿರ್ವಾಹಕೇತರ ಹುದ್ದೆಗಳಿಗೆ ಮಾತ್ರ ನಿಯೋಜಿಸಬೇಕು ಎಂದು ಆದೇಶಿಸಲಾಗಿದೆ.
ಸಾಮಾನ್ಯ ವರ್ಗಾವಣೆ ಅವಧಿ ಮುಗಿದ ನಂತರ ಅಥವಾ ಅವಧಿಪೂರ್ವ ವರ್ಗಾವಣೆ ಮಾಡಬೇಕಾದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ನಿವೃತ್ತಿಗೆ 2 ವರ್ಷಕ್ಕಿಂತ ಕಡಿಮೆ ಅವಧಿ ಇರುವ ನೌಕರರು, ವಿಶೇಷ ತಾಂತ್ರಿಕ ನೈಪುಣ್ಯತೆ ಹೊಂದಿರುವವರು ಅಥವಾ ಪತಿ-ಪತ್ನಿ ಪ್ರಕರಣಗಳಲ್ಲಿ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ನಿಯಮಗಳಲ್ಲಿ ಸಡಿಲಿಕೆ ನೀಡಲು ಅವಕಾಶವಿದೆ. ಇದರೊಂದಿಗೆ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಅವಲಂಬಿತರನ್ನು ಹೊಂದಿರುವವರು ಹಾಗೂ ಅವಿವಾಹಿತ ಅಥವಾ ವಿಧವೆ ಮಹಿಳಾ ನೌಕರರ ವರ್ಗಾವಣೆ ಕೋರಿಕೆಗಳನ್ನು ಪರಿಗಣಿಸಬಹುದಾಗಿದೆ.
ವಿಶೇಷ ಚೇತನ ನೌಕರರಿಗೆ ವಿನಾಯಿತಿ
ವಿಶೇಷ ಚೇತನ ನೌಕರರಿಗೆ ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಲಾಗಿದ್ದು, ಅವರಿಗೆ ಪ್ರಾರಂಭಿಕ ಸ್ಥಳ ನಿಯುಕ್ತಿ ಅಥವಾ ಬಡ್ತಿಯ ನಂತರ ಸಾಧ್ಯವಾದಷ್ಟು ಹತ್ತಿರದ ಸ್ಥಳಗಳನ್ನೇ ನೀಡಲು ಸೂಚಿಸಲಾಗಿದೆ. ನೌಕರರ ಅವಲಂಬಿತರು ತೀವ್ರತರವಾದ ಅಂಗವೈಕಲ್ಯ ಹೊಂದಿದ್ದರೂ ಅಂತಹವರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲು ಹಾಗೂ ಸೇವೆಯ ಅವಧಿಯಲ್ಲಿ ಅಂಗವಿಕಲರಾದ ನೌಕರರನ್ನು ಅವರ ಅನುಕೂಲಕ್ಕೆ ತಕ್ಕಂತೆ ಹತ್ತಿರದ ಸ್ಥಳಕ್ಕೆ ವರ್ಗಾಯಿಸಲು ಮಾರ್ಗಸೂಚಿಯಲ್ಲಿ ಆದ್ಯತೆ ನೀಡಲಾಗಿದೆ.

