ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದ ತುರ್ತು ಕ್ರಮ
x

ನೇಪಾಳ-ಟಿಬೆಟ್‌ ಗಡಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿಗೆ ತೆರಳಿರುವ ಕನ್ನಡಿಗರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಾಗಿದೆ.

ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದ ತುರ್ತು ಕ್ರಮ

ನೇಪಾಳ-ಟಿಬೆಟ್‌ ಗಡಿ ಭಾಗದ ಪ್ರವಾಹದ ನಡುವೆ ಸಿಲುಕಿರುವ ಕನ್ನಡಿಗರನ್ನು ಪತ್ತೆಹಚ್ಚಲು ಕರ್ನಾಟಕ ಸರ್ಕಾರ ಸಹಾಯವಾಣಿ ಹಾಗೂ ಗೂಗಲ್‌ ಫಾರ್ಮ್‌ ಬಿಡುಗಡೆ ಮಾಡಿದೆ.


Click the Play button to hear this message in audio format

ನೇಪಾಳ-ಟಿಬೆಟ್‌ ಗಡಿ ಭಾಗದಲ್ಲಿ ಪ್ರವಾಹದ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿಗೆ ಯಾತ್ರೆ ಹಾಗೂ ಪ್ರವಾಸಕ್ಕಾಗಿ ತೆರಳಿರುವ ಕನ್ನಡಿಗರ ಸುರಕ್ಷತೆ ಕುರಿತು ರಾಜ್ಯದಲ್ಲಿ ಆತಂಕ ಮೂಡಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿರುವ ರಾಜ್ಯ ಸರ್ಕಾರ, ಸಂಕಷ್ಟದಲ್ಲಿರುವ ರಾಜ್ಯದವರನ್ನು ಪತ್ತೆಹಚ್ಚಿ ಅಗತ್ಯ ನೆರವು ಒದಗಿಸಲು ತುರ್ತು ಕ್ರಮಗಳನ್ನು ಆರಂಭಿಸಿದೆ.

ವಿಪತ್ತು ನಿರ್ವಹಣೆ ಇಲಾಖೆ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೈಲಾಸ ಮಾನಸ ಸರೋವರ ಯಾತ್ರೆ, ಪ್ರವಾಸ ಅಥವಾ ಇತರ ಉದ್ದೇಶಗಳಿಗಾಗಿ ನೇಪಾಳ ಹಾಗೂ ಟಿಬೆಟ್‌ ಗಡಿ ಪ್ರದೇಶಗಳಿಗೆ ತೆರಳಿರುವ ಕನ್ನಡಿಗರು ಪ್ರವಾಹದಲ್ಲಿ ಸಿಲುಕಿದ್ದರೆ ಅವರ ವಿವರಗಳನ್ನು ತಕ್ಷಣ ಸರ್ಕಾರಕ್ಕೆ ನೀಡುವಂತೆ ಮನವಿ ಮಾಡಿದೆ.

ಇದಕ್ಕಾಗಿ ಇಲಾಖೆ ಗೂಗಲ್‌ ಫಾರ್ಮ್‌ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ. ಸಂತ್ರಸ್ತರ ಹೆಸರು, ಮೊಬೈಲ್‌ ಸಂಖ್ಯೆ, ಅವರು ಕೊನೆಯದಾಗಿ ಅಥವಾ ಪ್ರಸ್ತುತ ಇರುವ ಸ್ಥಳ, ಪಾಸ್‌ಪೋರ್ಟ್‌ ಮಾಹಿತಿ ಮತ್ತು ಕುಟುಂಬದ ತುರ್ತು ಸಂಪರ್ಕ ಸಂಖ್ಯೆಯನ್ನು ದಾಖಲಿಸಬಹುದಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ಕೇಂದ್ರದೊಂದಿಗೆ ಸಮನ್ವಯ

ಸಂಗ್ರಹವಾಗುವ ಮಾಹಿತಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರ ಜೊತೆಗೆ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಸಹಕಾರ ಪಡೆಯಲಾಗುತ್ತದೆ.

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರನ್ನು ಪತ್ತೆಹಚ್ಚುವುದು, ಅಗತ್ಯವಿದ್ದಲ್ಲಿ ರಕ್ಷಿಸುವುದು ಹಾಗೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಭೋಟೆ ಕೋಶಿ ನದಿಯ ಪ್ರವಾಹದಿಂದ ಆತಂಕ

ನೇಪಾಳದ ಭೋಟೆ ಕೋಶಿ ನದಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಯಾತ್ರಿಕರು ಮತ್ತು ಪ್ರವಾಸಿಗರೂ ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಹೊರಬಿದ್ದಿದ್ದು, ಕೆಲವರ ಸಂಪರ್ಕ ಕಡಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನೇಪಾಳ ಅಥವಾ ಟಿಬೆಟ್‌ ಗಡಿ ಭಾಗದಲ್ಲಿ ತಮ್ಮ ಕುಟುಂಬದವರು ಸಿಲುಕಿರುವ ಶಂಕೆ ಇದ್ದರೆ, ವಿಳಂಬ ಮಾಡದೆ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ತುರ್ತು ಸಂದರ್ಭದಲ್ಲಿ ಈ ಸಂಖ್ಯೆಗೆ ಕರೆ ಮಾಡಿ

ಪ್ರವಾಹ ಪೀಡಿತ ಪ್ರದೇಶದಲ್ಲಿ ಕನ್ನಡಿಗರು ಸಿಲುಕಿರುವ ಕುರಿತು ಮಾಹಿತಿ ಅಥವಾ ತುರ್ತು ನೆರವು ಬೇಕಿದ್ದರೆ 1070 ಹಾಗೂ 080-22253707 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. [email protected] ಇ-ಮೇಲ್‌ ಮೂಲಕವೂ ಮಾಹಿತಿ ನೀಡಲು ಸಹಾಯವಾಣಿ ಸ್ಥಾಪಿಸಲಾಗಿದೆ.

Read More
Next Story