ಐಎಎಸ್‌ ಅಧಿಕಾರಿ ಹರ್ಷಾ ಗುಪ್ತಾ ಹೆಗಲಿಗೆ ʼಪ್ರಜಾಸೇವೆʼ ಇಲಾಖೆ ಹೊಣೆ
x

ಐಎಎಸ್‌ ಅಧಿಕಾರಿ ಹರ್ಷಾ ಗುಪ್ತಾ ಹೆಗಲಿಗೆ ʼಪ್ರಜಾಸೇವೆʼ ಇಲಾಖೆ ಹೊಣೆ

ನೂತನವಾಗಿ ಸ್ಥಾಪಿಸಿರುವ ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.


ರಾಜ್ಯ ಸರ್ಕಾರದಲ್ಲಿ ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಸ್ಥಾಪಿಸಿರುವ ಹೊಸ ಸಚಿವಾಲಯಕ್ಕೆ ಇಂದು (ಜು.2) ಐವರು ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ನೂತನವಾಗಿ ಸ್ಥಾಪಿಸಿರುವ ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

ಜೊತೆಗೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಅವರಿಗೇ ವಹಿಸಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಜಾ ಸೇವಾ ಇಲಾಖೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಈಗ ಆ ಇಲಾಖೆಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಮತ್ತು ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು ಆಡಳಿತ ಸುಧಾರಣೆ, ಸಾರ್ವಜನಿಕ ಕುಂದುಕೊರತೆ ವಿಭಾಗ ಮತ್ತು ಸಕಾಲ ಮಿಷನ್ ವಿಲೀನಗೊಳಿಸಿ ಈ ಒಂದೇ ಇಲಾಖೆಯನ್ನು ರೂಪಿಸಲಾಗಿದೆ. ಜನಸ್ಪಂದನ ಹಾಗೂ ಸಕಾಲದಂತಹ ಪ್ರಮುಖ ಯೋಜನೆಗಳು ಇನ್ಮುಂದೆ ಈ ಇಲಾಖೆಯಡಿ ಕಾರ್ಯನಿರ್ವಹಿಸಲಿವೆ.

ಹೊಸ ಇಲಾಖೆಯ ಆಡಳಿತ ವಿನ್ಯಾಸದ ಕುರಿತು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದೆ. ಇಲಾಖೆಯಲ್ಲಿ ಒಟ್ಟು 73 ಮಂಜೂರಾದ ಖಾಯಂ ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಸೃಷ್ಟಿಸಲಾಗಿದೆ. ಸರ್ಕಾರದ ಕಾರ್ಯದರ್ಶಿ, ಮಿಷನ್ ನಿರ್ದೇಶಕರು, ಅಪರ ಮಿಷನ್ ನಿರ್ದೇಶಕರು, ಉಪ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಹುದ್ದೆಗಳು ಸೇರಿವೆ.

ತಾಂತ್ರಿಕ ಹಾಗೂ ಆಡಳಿತಾತ್ಮಕ ಕೆಲಸಗಳ ಸುಗಮ ನಿರ್ವಹಣೆಗಾಗಿ ಒಟ್ಟು 48 ಹುದ್ದೆಗಳನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ರೂಪಿಸಲಾದ ಈ ಹೊಸ ಇಲಾಖೆಗೆ ಹರ್ಷ ಗುಪ್ತಾ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಸರ್ಕಾರದ ಆಡಳಿತಕ್ಕೆ ಇನ್ನಷ್ಟು ವೇಗ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Read More
Next Story