
ಸಿಎಸ್ಆರ್ ಕೇವಲ ಕಾನೂನು ಬಾಧ್ಯತೆಯಲ್ಲ, ದೇಶ ನಿರ್ಮಾಣದ ಹೂಡಿಕೆ: ಡಾ. ಸುಧಾ ಯಾದವ್
ಭಾರತೀಯ ಸಂಸ್ಕೃತಿಯಲ್ಲಿ ಪರೋಪಕಾರದ ಪರಿಕಲ್ಪನೆ ಹೊಸತಲ್ಲ. ಸಜ್ಜನರ ಸಂಪತ್ತು ಸಮಾಜ ಕಲ್ಯಾಣಕ್ಕಾಗಿ ಬಳಕೆಯಾಗಬೇಕು ಎಂಬ ಮೌಲ್ಯ ಪರಂಪರೆಯಲ್ಲಿ ಶತಮಾನಗಳಿಂದಲೂ ಇದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಸಮಾಜದಿಂದ ಪಡೆದ ಸಂಪತ್ತನ್ನು ಸಮಾಜದ ಕಲ್ಯಾಣಕ್ಕಾಗಿ ಮರಳಿಸುವ ಮನೋಭಾವ ಪ್ರತಿಯೊಂದು ಉದ್ಯಮದಲ್ಲಿಯೂ ಇರಬೇಕು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾನೂನುಬದ್ಧ ಬಾಧ್ಯತೆಯ ಜೊತೆಗೆ ಸಮಾಜದ ಭವಿಷ್ಯ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಮಾಡುವ ಮಹತ್ವದ ಹೂಡಿಕೆಯಾಗಬೇಕು ಎಂದು ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಆಯೋಜಿಸಿದ್ದ 'ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್' (ಬಿಸಿಐಸಿ) ಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ಬಿಸಿಐಸಿ ಸಿಎಸ್ಆರ್ ಸಮಾವೇಶ 2026ರಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಸಮಾಜ ಸೇವೆ ಮತ್ತು ಪರೋಪಕಾರದ ಪರಿಕಲ್ಪನೆ ಹೊಸತಲ್ಲ. 'ಪರೋಪಕಾರಾಯ ಸತಾಂ ವಿಭೂತಯಃ' ಎಂಬ ನುಡಿಯಂತೆ, ಸಜ್ಜನರ ಸಂಪತ್ತು ಸಮಾಜದ ಕಲ್ಯಾಣಕ್ಕಾಗಿ ಬಳಕೆಯಾಗಬೇಕು ಎಂಬ ಮೌಲ್ಯ ನಮ್ಮ ಪರಂಪರೆಯಲ್ಲಿ ಶತಮಾನಗಳಿಂದಲೂ ಇದೆ. ಕೌಟಿಲ್ಯನ ಅರ್ಥಶಾಸ್ತ್ರದಿಂದ ಹಿಡಿದು ವೇದಕಾಲದ ದಾನ ಮತ್ತು ಧರ್ಮದ ತತ್ವಗಳವರೆಗೆ ವ್ಯಾಪಾರ ಮತ್ತು ಸಮಾಜದ ನಡುವಿನ ಸಂಬಂಧ ಗಾಢವಾಗಿದೆ. ಕರ್ನಾಟಕದ ಇತಿಹಾಸವೂ ಈ ಉದಾತ್ತ ಪರಂಪರೆಗೆ ಸಾಕ್ಷಿಯಾಗಿದ್ದು, ಐತಿಹಾಸಿಕ ದೇವಾಲಯಗಳು, ಕಲ್ಯಾಣಿಗಳು, ಕೆರೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ಮಾಣದಲ್ಲಿ ಪ್ರಾಚೀನ ವ್ಯಾಪಾರಿ ಸಂಘಗಳು ಮಹತ್ವದ ಕೊಡುಗೆ ನೀಡಿವೆ ಎಂದು ಸ್ಮರಿಸಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ 'ಕಾಯಕ' ಮತ್ತು 'ದಾಸೋಹ' ತತ್ವಗಳು ಇಂದಿನ ಸಿಎಸ್ಆರ್ ಪರಿಕಲ್ಪನೆಗೆ ಅತ್ಯಂತ ಸೂಕ್ತವಾದ ಮಾದರಿಗಳಾಗಿವೆ ಎಂದು ವಿವರಿಸಿದರು. ಮಹಾತ್ಮ ಗಾಂಧೀಜಿಯವರ ಟ್ರಸ್ಟೀಶಿಪ್ ಸಿದ್ಧಾಂತವೂ ಇದೇ ಆಶಯವನ್ನು ಪ್ರತಿಪಾದಿಸುತ್ತದೆ. ಸರ್ಕಾರದ ಪ್ರಯತ್ನಗಳ ಜೊತೆಗೆ ಸಮಾಜ ಮತ್ತು ಕಾರ್ಪೊರೇಟ್ ವಲಯದ ಸಕ್ರಿಯ ಸಹಭಾಗಿತ್ವ ಇದ್ದಾಗ ಮಾತ್ರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಆಶಯ ಸಾಕಾರಗೊಳ್ಳಲು ಸಾಧ್ಯ. ಸಮಾಜದ ಎಲ್ಲ ವರ್ಗಗಳ ಸಹಯೋಗದೊಂದಿಗೆ ನಡೆಯುವ ಸಮಗ್ರ ಪ್ರಯತ್ನಗಳೇ ಹೊಸ ಭಾರತದ ನಿರ್ಮಾಣಕ್ಕೆ ಶಕ್ತಿಯಾಗಲಿವೆ ಎಂದರು. ಇದೇ ವೇಳೆ ಪ್ರಸಿದ್ಧ ಉದ್ಯಮಿ ಜೆ.ಆರ್.ಡಿ. ಟಾಟಾ ಅವರ ಮಾತುಗಳನ್ನು ಉಲ್ಲೇಖಿಸಿದ ಅವರು, ಸಮಾಜದಿಂದ ನಾವು ಪಡೆಯುವುದನ್ನು ಹಲವು ಪಟ್ಟು ಹೆಚ್ಚಿಸಿ ಸಮಾಜಕ್ಕೇ ಮರಳಿಸಬೇಕು ಎಂಬುದೇ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯ ಮೂಲ ಆಶಯವಾಗಬೇಕು ಎಂದು ಹೇಳಿದರು.
ಸಿಎಸ್ಆರ್ ಕ್ಷೇತ್ರದಲ್ಲಿರುವ ಪ್ರಮುಖ ಸವಾಲುಗಳು
ಸಿಎಸ್ಆರ್ ಕ್ಷೇತ್ರದಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದ್ದರೂ, ಹಲವು ಸವಾಲುಗಳು ಇವೆ ಎಂದು ರಾಜ್ಯಪಾಲರು ಗಮನ ಸೆಳೆದರು. ಅನುದಾನಗಳ ಅಸಮಾನ ಹಂಚಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸೀಮಿತ ಭಾಗವಹಿಸುವಿಕೆ ಹಾಗೂ ಯೋಜನೆಗಳ ದೀರ್ಘಕಾಲೀನ ಪರಿಣಾಮಗಳ ಸಮರ್ಪಕ ಮೌಲ್ಯಮಾಪನದ ಕೊರತೆಯಂತಹ ಸವಾಲುಗಳಿವೆ. ಇವುಗಳನ್ನು ಪರಿಹರಿಸಲು ಉದ್ಯಮ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಘಟನೆಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು. ಮಹಿಳಾ ಸಬಲೀಕರಣ, ಮಹಿಳೆಯರ ಆರೋಗ್ಯ, ಶಿಕ್ಷಣ, ಶಾಲೆಗಳ ಅಭಿವೃದ್ಧಿ ಮತ್ತು ಸಸಿಗಳನ್ನು ನೆಡುವಂತಹ ವಿವಿಧ ಕ್ಷೇತ್ರಗಳಲ್ಲಿ ಉದ್ಯಮಗಳು ಸಿಎಸ್ಆರ್ ಅಡಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿವೆ ಎಂದು ರಾಜ್ಯಪಾಲರು ತಮ್ಮ ಅನುಭವ ಹಂಚಿಕೊಂಡರು. ಆದರೆ, ಯೋಜನೆಗಳನ್ನು ಆರಂಭಿಸುವುದಷ್ಟೇ ಮುಖ್ಯವಲ್ಲ; ಅವುಗಳನ್ನು ನಿರಂತರವಾಗಿ ನಿರ್ವಹಿಸಿ, ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಜವಾಬ್ದಾರಿಯಿಂದ ಮುಂದುವರಿಸುವುದು ಇನ್ನಷ್ಟು ಮುಖ್ಯ ಎಂದು ಅಭಿಪ್ರಾಯಪಟ್ಟರು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಮಕ್ಕಳಿಗಾಗಿ ಕೈಗೊಳ್ಳುವ ಸೌಲಭ್ಯ ಅಭಿವೃದ್ಧಿ ಹಾಗೂ ಸಸಿಗಳನ್ನು ನೆಡುವ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ನೆಟ್ಟ ಸಸಿಗಳಲ್ಲಿ ಹೆಚ್ಚಿನವು ನಿರ್ವಹಣೆಯ ಕೊರತೆಯಿಂದ ಬದುಕುಳಿಯುವುದಿಲ್ಲ ಎಂಬುದನ್ನು ಉಲ್ಲೇಖಿಸಿದರು. ಕರ್ನಾಟಕದ ಹವಾಮಾನ ಪರಿಸ್ಥಿತಿಯಲ್ಲಿ ಬೇಸಿಗೆಯಲ್ಲಿ ತಾಪಮಾನ 40ರಿಂದ 48 ಡಿಗ್ರಿ ಸೆಲ್ಸಿಯಸ್ವರೆಗೆ ಏರುವ ಸಂದರ್ಭಗಳಿರುವುದರಿಂದ, ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ನಿರಂತರ ಆರೈಕೆಯೂ ಅಗತ್ಯವಾಗಿದೆ ಎಂದರು. ಒಂದು ಯೋಜನೆಯನ್ನು ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸುವವರೆಗೆ ಜವಾಬ್ದಾರಿಯಿಂದ ನಿರ್ವಹಿಸಬೇಕು. ಕೇವಲ ಅನುದಾನ ಬಿಡುಗಡೆ ಮಾಡುವುದು ಅಥವಾ ಹಣ ವಿನಿಯೋಗಿಸುವುದರಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ಯೋಜನೆ ಆರಂಭವಾದ ಹಂತದಿಂದ ಅಂತಿಮ ಪರಿಣಾಮದವರೆಗೆ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನಡೆಯಬೇಕು. ಆಗ ಮಾತ್ರ ಸಿಎಸ್ಆರ್ ಅನುದಾನದ ಸಮರ್ಪಕ ಬಳಕೆ ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ದೂರದ ಗ್ರಾಮೀಣ, ಜನಜಾತಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕರೆ
ಕರ್ನಾಟಕದ ದೂರದ ಗ್ರಾಮೀಣ ಮತ್ತು ಜನಜಾತಿ ಪ್ರದೇಶಗಳಲ್ಲಿ ತಾವು ಕಂಡ ಅನುಭವಗಳನ್ನು ಉಲ್ಲೇಖಿಸಿದ ರಾಜ್ಯಪಾಲರು, ಇನ್ನೂ ಅನೇಕ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ಅಭಿವೃದ್ಧಿಯ ಅವಕಾಶಗಳ ಅಗತ್ಯವಿದೆ ಎಂದರು. ವಿಶೇಷವಾಗಿ ಜನಜಾತಿ ಸಮುದಾಯಗಳ ಜೀವನಮಟ್ಟ, ಶಿಕ್ಷಣ ಮತ್ತು ಸಾಮಾಜಿಕ ಪ್ರಗತಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಕೈಗಾರಿಕೆಗಳು ಮತ್ತು ಉದ್ಯಮ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ, ರಾಜ್ಯದ ಹಿಂದುಳಿದ ಹಾಗೂ ದೂರದ ಪ್ರದೇಶಗಳ ಅಭಿವೃದ್ಧಿಯ ಬಗ್ಗೆಯೂ ಚಿಂತಿಸಬೇಕು. ಎಲ್ಲರೂ ಪ್ರತ್ಯೇಕ ಯೋಜನೆಗಳನ್ನು ಕೈಗೊಳ್ಳುವ ಬದಲು, ಸಾಮೂಹಿಕ ಪ್ರಯತ್ನದ ಮೂಲಕ ಕೆಲವು ಪ್ರಮುಖ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು ಎಂದು ಸಲಹೆ ನೀಡಿದರು.
ಒಂದು ಪ್ರದೇಶವನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಅಗತ್ಯಗಳನ್ನು ಗುರುತಿಸಿ, ಅಭಿವೃದ್ಧಿಯ ಗುರಿಗಳನ್ನು ನಿಗದಿಪಡಿಸಿ ಹಂತ ಹಂತವಾಗಿ ಯೋಜನೆಗಳನ್ನು ಜಾರಿಗೊಳಿಸಬೇಕು. ಯೋಜನೆ ಎಲ್ಲಿಂದ ಆರಂಭವಾಯಿತು, ಎಷ್ಟು ಪ್ರಗತಿ ಸಾಧಿಸಿದೆ ಮತ್ತು ಅಂತಿಮವಾಗಿ ಎಷ್ಟು ಜನರಿಗೆ ಪ್ರಯೋಜನವಾಗಿದೆ ಎಂಬುದನ್ನು ನಿರಂತರವಾಗಿ ವಿಶ್ಲೇಷಿಸಬೇಕು. ಇಂತಹ ಫಲಿತಾಂಶ ಆಧಾರಿತ ಕಾರ್ಯವೈಖರಿಯಿಂದ ಮಾತ್ರ ಸಿಎಸ್ಆರ್ನ ನೈಜ ಉದ್ದೇಶ ಈಡೇರಲು ಸಾಧ್ಯ. ಮುಂದಿನ ಪೀಳಿಗೆಗೆ ಉತ್ತಮ ಅವಕಾಶಗಳು, ಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಒಳಗೊಂಡ ರಾಷ್ಟ್ರವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಉದ್ಯಮ ವಲಯವು ಸಿಎಸ್ಆರ್ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

