
ಬೀದರ್-ಕಲಬುರಗಿ ವಿಮಾನ ಸೇವೆ ಪುನರಾರಂಭಕ್ಕೆ ಮಹತ್ವದ ಸಭೆ : ಪ್ರಸ್ತಾವನೆ ಸಲ್ಲಿಕೆಗೆ ಸೂಚನೆ
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನೀಡಲಾಗಿದ್ದ ಮೂರು ವರ್ಷಗಳ ಸಬ್ಸಿಡಿ ಅವಧಿ ಮುಗಿದ ನಂತರ ಈ ಭಾಗದ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಚರ್ಚಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿಗೆ ವೇಗ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನಿಂದ ಬೀದರ್ ಮತ್ತು ಕಲಬುರಗಿ ನಗರಗಳಿಗೆ ಸ್ಥಗಿತಗೊಂಡಿರುವ ಅಥವಾ ಕುಂಠಿತಗೊಂಡಿರುವ ವಿಮಾನ ಸೇವೆಯನ್ನು ಪುನರಾರಂಭಿಸಲು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು. ಇದೇ ತಿಂಗಳ 23ರೊಳಗೆ ವಿಸ್ತೃತ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ರಹೀಂಖಾನ್ ಮತ್ತು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ (ಕೆ.ಕೆ.ಆರ್.ಡಿ.ಬಿ) ಅಧ್ಯಕ್ಷ ಡಾ. ಅಜೇಯ್ ಸಿಂಗ್ ಪಾಲ್ಗೊಂಡಿದ್ದರು. ಸಭೆಯ ನಂತರ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನೀಡಲಾಗಿದ್ದ ಮೂರು ವರ್ಷಗಳ ಸಬ್ಸಿಡಿ ಅವಧಿ ಮುಗಿದ ನಂತರ ಈ ಭಾಗದ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಕಲಬುರಗಿಯಲ್ಲಿ ವಿಮಾನ ಸೇವೆ ಸ್ತಬ್ಧವಾಗಿದ್ದರೆ, ಬೀದರ್ನಲ್ಲಿ ಕೆ.ಕೆ.ಆರ್.ಡಿ.ಬಿ ನೆರವಿನಿಂದ ಕೇವಲ ಒಂದು ವಿಮಾನ ಮಾತ್ರ ಸಂಚರಿಸುತ್ತಿದೆ. ಇದನ್ನು ಸರಿಪಡಿಸಿ, ನಿರಂತರ ಸೇವೆ ಒದಗಿಸುವುದು ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಕಲಬುರಗಿ ವಿಮಾನ ನಿಲ್ದಾಣವು 742 ಎಕರೆಗಳಷ್ಟು ವಿಶಾಲವಾಗಿದ್ದು, ಎಲ್ಲ ಬಗೆಯ ವಿಮಾನಗಳು ಬಂದಿಳಿಯಲು ಪೂರಕವಾದ ಸೌಲಭ್ಯಗಳನ್ನು ಹೊಂದಿದೆ. ವಿಶೇಷವಾಗಿ ಇಲ್ಲಿ ರಾತ್ರಿ ವೇಳೆ ವಿಮಾನಗಳನ್ನು ನಿಲುಗಡೆ ಮಾಡುವ ಸೌಲಭ್ಯವಿರುವುದು ವಿಮಾನಯಾನ ಸಂಸ್ಥೆಗಳಿಗೆ ಅನುಕೂಲವಾಗಿದೆ ಎಂದರು.
ಸಂಭವನೀಯ ವಿಮಾನ ಮಾರ್ಗಗಳು
ವಿಮಾನಯಾನ ಸಂಸ್ಥೆಗಳು ಸಭೆಯಲ್ಲಿ ಕೆಲವು ಪ್ರಸ್ತಾವನೆಗಳನ್ನು ಮುಂದಿಟ್ಟಿವೆ. ಬೆಳಿಗ್ಗೆ ಬೆಂಗಳೂರಿನಿಂದ ಬೀದರ್ಗೆ ಮತ್ತು ಸಂಜೆ ಕಲಬುರಗಿಯಿಂದ ಬೆಂಗಳೂರಿಗೆ ಸೇವೆ ಆರಂಭಿಸುವ ಸಾಧ್ಯತೆಯಿದೆ. ಬೆಂಗಳೂರು-ಕಲಬುರಗಿ-ಹೈದರಾಬಾದ್-ಬೆಂಗಳೂರು ಮಾರ್ಗವಾಗಿ ವಿಮಾನಗಳನ್ನು ಓಡಿಸುವ ಮೂಲಕ ವಾಣಿಜ್ಯವಾಗಿ ಲಾಭದಾಯಕವಾಗಿಸುವ ಯೋಜನೆ ಇದೆ. ಕಲ್ಯಾಣ ಕರ್ನಾಟಕ ಭಾಗವು ಶೈಕ್ಷಣಿಕ, ಧಾರ್ಮಿಕ ಮತ್ತು ಕೈಗಾರಿಕಾ ದೃಷ್ಟಿಯಿಂದ ಬಹಳ ಪ್ರಮುಖವಾಗಿದೆ. ಕಲಬುರಗಿಯ ತೊಗರಿ ಕಣಜ ಮತ್ತು ಬೀದರ್ನ ಐತಿಹಾಸಿಕ ಪ್ರವಾಸೋದ್ಯಮಕ್ಕೆ ವಿಮಾನ ಸಂಪರ್ಕ ದೊರೆತರೆ, ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ವಿಮಾನಯಾನ ಸಂಸ್ಥೆಗಳು ಕೂಡ ವಾಣಿಜ್ಯ ಲಾಭದ ದೃಷ್ಟಿಯಿಂದ ಈ ಮಾರ್ಗಗಳನ್ನು ಮೌಲ್ಯಮಾಪನ ಮಾಡುತ್ತಿವೆ ಎಂದು ಹೇಳಿದರು.
ವಿಮಾನಯಾನ ಸಂಸ್ಥೆಗಳು ಸಲ್ಲಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರವು ಈ ಭಾಗದ ಜನರಿಗೆ ಸುಲಭ ಸಂಚಾರ ವ್ಯವಸ್ಥೆ ಕಲ್ಪಿಸಲು ಬದ್ಧವಾಗಿದ್ದು, ಆರ್ಥಿಕ ನಷ್ಟವಾಗದಂತೆ ಸಮತೋಲಿತ ಮಾರ್ಗಸೂಚಿ ಸಿದ್ಧಪಡಿಸಲಿದೆ ಎಂದು ತಿಳಿಸಿದರು.

