ವಿಬಿ ಜಿ ರಾಮ್ ಜಿ: ಕೇಂದ್ರದ ವಿರುದ್ಧ ಕಾನೂನು ಸಮರಕ್ಕೆ ಸಚಿವ ಸಂಪುಟ ತೀರ್ಮಾನ
x

ವಿಬಿ ಜಿ ರಾಮ್ ಜಿ: ಕೇಂದ್ರದ ವಿರುದ್ಧ ಕಾನೂನು ಸಮರಕ್ಕೆ ಸಚಿವ ಸಂಪುಟ ತೀರ್ಮಾನ

ರಾಜ್ಯಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಮನರೇಗಾ ರದ್ದುಗೊಳಿಸಿರುವ ಕೇಂದ್ರದ ಧೋರಣೆ ವಿರುದ್ಧ ಕೋರ್ಟ್ ಮೊರೆ ಹೋಗಲು ಕರ್ನಾಟಕ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ.


ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ರದ್ದುಪಡಿಸಿ, ಕೇಂಧರ ಸರ್ಕಾರ ಜಾರಿಗೆ ತಂದಿರುವ 'ವಿಬಿ ಜಿ ರಾಮ್‌ ಜಿ' ಯೋಜನೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನೂತನ ಯೋಜನೆಯಿಂದ ಗ್ರಾಮೀಣ ಭಾಗದ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂಬ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿದೆ.

ರಾಜ್ಯಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಮನರೇಗಾ ರದ್ದುಗೊಳಿಸಿರುವ ಕೇಂದ್ರದ ಧೋರಣೆ ವಿರುದ್ಧ ಕೋರ್ಟ್ ಮೊರೆ ಹೋಗುವುದು.

ಪ್ರಸಕ್ತ ಸಾಲಿನಲ್ಲಿ ಮನರೇಗಾ ಅಡಿಯಲ್ಲೇ ಕ್ರಿಯಾಯೋಜನೆ ರೂಪಿಸಿ, ಕಾಮಗಾರಿಗಳನ್ನು ಜಾರಿಗೊಳಿಸಲು ಅನುಮತಿ ಕೋರುವುದು.

ಕೇಂದ್ರದ ಏಕಪಕ್ಷೀಯ ನಿರ್ಧಾರವು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ದಮನವಾಗಿದೆ ಎಂದು ವಾದಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಉದ್ಯೋಗದ ಹಕ್ಕು ಕಸಿದುಕೊಂಡ ಕೇಂದ್ರ

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

"2005ರ ಮನರೇಗಾ ಕಾಯ್ದೆಯನ್ನು ರದ್ದುಗೊಳಿಸಿ ವಿಬಿ-ಜಿ-ರಾಮ್‌ ಜಿ ಜಾರಿಗೆ ತರಲಾಗಿದೆ. ಆದರೆ, ಈವರೆಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ ಅಥವಾ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಕೇವಲ ಹಳೆಯ ಬಾಕಿ ಕಾಮಗಾರಿ ಮುಗಿಸಲು ಸೂಚಿಸಿ, ಹೊಸ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ಇದರಿಂದ ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಂತಾಗಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟದ ಮುಂದಿನ ಹಂತ

ಈಗಾಗಲೇ ವಿಧಾನಮಂಡಲ ಅಧಿವೇಶನದಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆ ವಿರುದ್ಧ ನಿರ್ಣಯ ಕೈಗೊಂಡಿದ್ದ ಕಾಂಗ್ರೆಸ್ ಸರ್ಕಾರ, ಈಗ ನ್ಯಾಯಾಲಯದ ಮೂಲಕ ತನ್ನ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಜ್ಜಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮನರೇಗಾ ಮುಂದುವರಿಸುವುದು ಅನಿವಾರ್ಯವಾಗಿದ್ದು, ಶೀಘ್ರದಲ್ಲೇ ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Read More
Next Story