ಸರ್ಕಾರಿ ಆಸ್ಪತ್ರೆಗಳಲ್ಲಿ ಅಗ್ಗದ ದರದಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!
x

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗ್ಗದ ದರದಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಮಿತಿ ಹೇರಿ, ಸರ್ಕಾರಿ ಆಸ್ಪತ್ರೆಗಳಲ್ಲೇ ಕೈಗೆಟುಕುವ ದರದಲ್ಲಿ ಹೈಟೆಕ್ ಅಂಗಾಂಗ ಕಸಿ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ.


ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಚಿಕಿತ್ಸೆ ಹೆಸರಿನಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ. ಸುಲಿಗೆಗೆ ಇತಿಶ್ರೀ ಹಾಡಲು ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಮಿತಿ ಹೇರಿ, ಸರ್ಕಾರಿ ಆಸ್ಪತ್ರೆಗಳಲ್ಲೇ ಕೈಗೆಟುಕುವ ದರದಲ್ಲಿ ಹೈಟೆಕ್ ಅಂಗಾಂಗ ಕಸಿ ಸೌಲಭ್ಯ ಒದಗಿಸಲು ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ.

ಲಿವರ್, ಕಿಡ್ನಿ, ಬೋನ್ ಮ್ಯಾರೋ ಹಾಗೂ ಶ್ವಾಸಕೋಶದಂತಹ ಜಟಿಲ ಮತ್ತು ಅತ್ಯಂತ ದುಬಾರಿ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳು ಮನಸೋಇಚ್ಛೆ ಶುಲ್ಕ ವಸೂಲಿ ಮಾಡುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ 5 ಲಕ್ಷ ರೂ.ಗಳಿಂದ ಹಿಡಿದು 50 ಲಕ್ಷ ರೂ.ಗಳವರೆಗೂ ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಪರದಾಡುವಂತಾಗಿದೆ.

ಸರ್ಕಾರದಿಂದ ಸಿಗುವ ಆರ್ಥಿಕ ನೆರವು ಕೇವಲ 5 ಲಕ್ಷ ರೂಪಾಯಿ ಮಾತ್ರ ಇರುವುದರಿಂದ ಬಾಕಿ ಉಳಿದ ಲಕ್ಷಾಂತರ ರೂಪಾಯಿಗಳನ್ನು ಹೊಂದಿಸಲಾಗದೆ ಸಾಕಷ್ಟು ಕುಟುಂಬಗಳು ಬೀದಿಗೆ ಬೀಳುತ್ತಿವೆ. ಈಗ ಈ ಜಾಲಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆಯು, ಹೈಟೆಕ್ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕ್ಯಾಪಿಂಗ್ ಜಾರಿಗೊಳಿಸಲು ತೀರ್ಮಾನಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲೇ ಅಂಗಾಂಗ ಕಸಿ

ಖಾಸಗಿ ಆಸ್ಪತ್ರೆಗಳ ಮನಸೋಇಚ್ಛೆ ಲೂಟಿಗೆ ಕಡಿವಾಣ ಹಾಕುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ಅವರಿಗೆ ಸೂಚನೆ ನೀಡಿದ್ದರು.

“ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ವ್ಯವಸ್ಥೆ ಯಾವುದೇ ಕಾರಣಕ್ಕೂ ಖಾಸಗಿಯವರಿಗಿಂತ ಕಡಿಮೆ ಇರಬಾರದು. ಬಡವರ ಆರೋಗ್ಯ ಸೇವೆಗೆ ಸರ್ಕಾರದಿಂದ ಏನು ಬೇಕಾದರೂ ಮಾಡಲು ನಾನು ಸಿದ್ಧ," ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.

ಅವರ ಈ ಜನಪರ ಕನಸು ನನಸು ಮಾಡಲು ಮುಂದಾಗಿರುವ ಆರೋಗ್ಯ ಇಲಾಖೆ, ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲೇ ಅತ್ಯಾಧುನಿಕ ಅಂಗಾಂಗ ಕಸಿ ಚಿಕಿತ್ಸೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಒದಗಿಸಲು ಮೂಲಸೌಕರ್ಯ ಮೇಲ್ದರ್ಜೆಗೇರಿಸುತ್ತಿದೆ.

ಜನಸಾಮಾನ್ಯರಲ್ಲಿ ಮೂಡಿದ ಭರವಸೆ

ಪ್ರತಿಯೊಂದು ಸಣ್ಣ ಪುಟ್ಟ ಚಿಕಿತ್ಸೆಗೂ ಲಕ್ಷಾಂತರ ರೂ. ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಸರ್ಕಾರದ ಈ ಹೊಸ ನಡೆ ಆಘಾತ ನೀಡಲಿದೆ. ಆರೋಗ್ಯ ಇಲಾಖೆಯ ಈ ಐತಿಹಾಸಿಕ ನಿರ್ಧಾರವು ಶೀಘ್ರದಲ್ಲೇ ಜಾರಿಗೆ ಬರಲಿದ್ದು, ದುಬಾರಿ ಚಿಕಿತ್ಸೆಯ ಭಯದಲ್ಲಿದ್ದ ಲಕ್ಷಾಂತರ ಬಡ ರೋಗಿಗಳಲ್ಲಿ ಇನ್ಮುಂದೆ ಜೀವಕ್ಕೂ ಗ್ಯಾರಂಟಿ ಇದೆ ಎಂಬ ಹೊಸ ಭರವಸೆ ಮೂಡಿಸಿದೆ.

Read More
Next Story