
ಮತದಾರರ ಹಕ್ಕು ಕಸಿದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ: ಸಚಿವ ಎಚ್.ಕೆ. ಪಾಟೀಲ್ ಎಚ್ಚರಿಕೆ
ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ,ಎಸ್‌ಐಆರ್ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಸರ್ಕಾರ ಚಿಂತನೆ ನಡೆಸಿದೆ.
ದೇಶದ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ಕಾಪಾಡುವುದು ಸರ್ಕಾರದ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೂಲಭೂತ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಲಾಗಿದೆ.
ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಎಸ್‌ಐಆರ್ ಹೆಸರಿನಲ್ಲಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಒಂದು ನಿಯಮಿತ ಪ್ರಕ್ರಿಯೆಯಾಗಿದ್ದರೂ, ಅದು ಪಾರದರ್ಶಕವಾಗಿರಬೇಕು ಮತ್ತು ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ. ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಸಂವಿಧಾನಾತ್ಮಕ ಅಧಿಕಾರವಿದೆ. ಈ ಹಕ್ಕನ್ನು ಅನಾವಶ್ಯಕವಾಗಿ ಕಸಿದುಕೊಳ್ಳುವ ಅಥವಾ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಯಾವುದೇ ಪ್ರಕ್ರಿಯೆ ನಡೆದರೆ, ಅದನ್ನು ತಡೆಯಲು ಸರ್ಕಾರ ಬದ್ಧವಾಗಿದೆ. ನಾಗರಿಕರ ಈ ಹಕ್ಕನ್ನು ರಕ್ಷಿಸಲು ಕಾನೂನುಬದ್ಧವಾಗಿ ಸರ್ವ ಪ್ರಯತ್ನಗಳನ್ನು ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ ಉದಾಹರಣೆ
ಭಾರತದ ಇತರೆ ರಾಜ್ಯಗಳಲ್ಲಿ ನಡೆದಿರುವ ಎಸ್ಐಆರ್ ಪ್ರಕ್ರಿಯೆಯ ಕಹಿ ಅನುಭವಗಳನ್ನು ನೆನಪಿಸಿಕೊಂಡ ಅವರು, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಸುಮಾರು 27 ಲಕ್ಷ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿತ್ತು. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಬೆಳವಣಿಗೆ. ಇಂತಹ ಅವಘಡಗಳು ರಾಜ್ಯದಲ್ಲಿ ಮರುಕಳಿಸಬಾರದು ಎಂಬುದು ನಮ್ಮ ಕಳಕಳಿ ಎಂದು ಆತಂಕ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದಂತಹ ಸನ್ನಿವೇಶಗಳು ಪುನರಾವರ್ತನೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಆಯೋಗಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ಸುಪ್ರೀಂಕೋರ್ಟ್ ಮೊರೆ ಹೋಗಲು ಸಿದ್ಧತೆ
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅಕ್ರಮಗಳು ಅಥವಾ ಪಾರದರ್ಶಕತೆಯ ಕೊರತೆಯ ಬಗ್ಗೆ ಸಚಿವರು ಕಠಿಣ ನಿಲುವು ತಾಳಿದ್ದಾರೆ. ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಕಂಡುಬರುವ ಗಂಭೀರ ಆಕ್ಷೇಪಗಳ ಬಗ್ಗೆ ನಾವು ವಿಸ್ತೃತವಾಗಿ ಚರ್ಚಿಸಿದ್ದೇವೆ. ಒಂದು ವೇಳೆ ಜನರ ಮತದಾನದ ಹಕ್ಕಿಗೆ ಧಕ್ಕೆಯಾಗುವಂತಹ ವ್ಯವಸ್ಥಿತ ಪ್ರಯತ್ನಗಳು ಕಂಡುಬಂದರೆ, ಈ ವಿಷಯದ ಕುರಿತು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ಕೂಡ ನಾವು ಸಿದ್ಧರಿದ್ದೇವೆ. ನ್ಯಾಯಾಲಯದ ಮೂಲಕ ಸಂವಿಧಾನದ ಆಶಯಗಳನ್ನು ರಕ್ಷಿಸುವುದು ಅನಿವಾರ್ಯವಾದರೆ ಆ ದಾರಿಯನ್ನೂ ತುಳಿಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮತದಾರರ ಪಟ್ಟಿಯ ಅಂತಿಮ ರೂಪ, ಎಸ್ಐಆರ್ ಪ್ರಕ್ರಿಯೆಯ ವಿಧಾನಗಳು ಮತ್ತು ಅದರಲ್ಲಿನ ಪಾರದರ್ಶಕತೆ ಕುರಿತಂತೆ ಇನ್ನೂ ಹೆಚ್ಚಿನ ಮಟ್ಟದ ಚರ್ಚೆಗಳು ನಡೆಯಬೇಕಿದೆ. ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಮತ್ತು ಆಡಳಿತ ಯಂತ್ರದ ನಡುವೆ ಸಮನ್ವಯವಿದ್ದಾಗ ಮಾತ್ರ ಮತದಾರರ ಪಟ್ಟಿ ದೋಷರಹಿತವಾಗಿರಲು ಸಾಧ್ಯ. ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸುವಾಗ ಯಾವುದೇ ಒಂದು ಗುಂಪು ಅಥವಾ ವರ್ಗದವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಶೀಘ್ರವೇ ತಾಂತ್ರಿಕ ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಉಳಿವಿಗೆ ಎಚ್ಚರಿಕೆ
ಮತದಾರರ ಪಟ್ಟಿಯಲ್ಲಿನ ಸಣ್ಣ ಲೋಪದೋಷವೂ ಒಬ್ಬ ನಾಗರಿಕನಿಗೆ ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು ತಪ್ಪಿಸಬಹುದು. ಆದ್ದರಿಂದ, ಈ ಪ್ರಕ್ರಿಯೆಯು ಕೇವಲ ತಾಂತ್ರಿಕ ವಿಷಯವಲ್ಲ, ಇದು ಒಂದು ರಾಜಕೀಯ ಮತ್ತು ನೈತಿಕ ಹೊಣೆಗಾರಿಕೆ. ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಚುನಾವಣೆ ಆಯೋಗದ ಜತೆಗೂಡಿ ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಒತ್ತು ನೀಡಲಿದೆ ಎಂದು ಅಶ್ವಾಸನೆ ನೀಡಿದರು.

