ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಬರ: ಸಾಲಮನ್ನಾಗೆ ರೈತ ಸಂಘ ಆಗ್ರಹ
ರಾಜ್ಯದಲ್ಲಿ ಇಷ್ಟೊಂದು ಭೀಕರ ಪರಿಸ್ಥಿತಿ ಇದ್ದರೂ ಸರ್ಕಾರ ಅಧಿಕೃತವಾಗಿ ಬರ ಘೋಷಣೆ ಮಾಡಲು ವಿಳಂಬ ಮಾಡುತ್ತಿದೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಕೆ.ಟಿ. ಗಂಗಾಧರ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಎದುರಾಗಿದ್ದರೂ, ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದೇ ಕುರುಡಾಗಿ ಕುಳಿತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ತುಮಕೂರಿನ ರೈತ ಮುಖಂಡ ಕೆ.ಟಿ. ಗಂಗಾಧರ್ ಅವರು ʼದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ಕೃಷಿ ವಲಯ ಎದುರಿಸುತ್ತಿರುವ ಸದ್ಯದ ಭೀಕರ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮಲೆನಾಡು, ಕರಾವಳಿಯಲ್ಲೇ ಮಳೆಯಿಲ್ಲ
ರಾಜ್ಯದ ಇತಿಹಾಸದಲ್ಲೇ ಇಂತಹ ಭೀಕರ ಬರಗಾಲ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಆದರೆ, ಬಿತ್ತನೆ ಮಾಡಲು ಕನಿಷ್ಠ ಮಳೆಯೂ ಆಗಿಲ್ಲ. ಸದಾ ಹಸಿರಿನಿಂದ ಕಂಗೊಳಿಸುವ ಭಾರಿ ಮಳೆಗೆ ಹೆಸರಾದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲೇ ಈ ಬಾರಿ ಮಳೆಯಾಗಿಲ್ಲ ಎಂದರೆ ಬಯಲುಸೀಮೆ ಭಾಗಗಳಲ್ಲಿ ಬರದ ತೀವ್ರತೆ ಎಷ್ಟಿರಬಹುದು ಎಂಬುದನ್ನು ಸರ್ಕಾರ ಊಹಿಸಬೇಕಿದೆ ಎಂದು ಗಂಗಾಧರ್ ಕಳವಳ ವ್ಯಕ್ತಪಡಿಸಿದ್ದಾರೆ.
ಬರ ಘೋಷಣೆಗೆ ವಿಳಂಬವೇಕೆ?
ರಾಜ್ಯದಲ್ಲಿ ಇಷ್ಟೊಂದು ಭೀಕರ ಪರಿಸ್ಥಿತಿ ಇದ್ದರೂ ಸರ್ಕಾರ ಅಧಿಕೃತವಾಗಿ ಬರ ಘೋಷಣೆ ಮಾಡಲು ವಿಳಂಬ ಮಾಡುತ್ತಿದೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಕೆ.ಟಿ. ಗಂಗಾಧರ್ ಆರೋಪಿಸಿದ್ದಾರೆ. ರೈತರು ಆತ್ಮಹತ್ಯೆಯ ಹಾದಿ ಹಿಡಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಆದರೆ, ಪ್ರಸ್ತುತ ಸರ್ಕಾರ ಅಧಿಕಾರ, ರಾಜಕಾರಣದಲ್ಲೇ ಮುಳುಗಿದೆ. ರೈತರ ಸಂಕಷ್ಟ ಆಡಳಿತಗಾರರಿಗೆ ಕಾಣಿಸುತ್ತಿಲ್ಲ" ಎಂದು ಚಾಟಿ ಬೀಸಿದ್ದಾರೆ.
ʼರೈತರ ಸಾಲ ಮನ್ನಾ ಮಾಡಿʼ
ಬರದ ಸಂದರ್ಭದಲ್ಲಿ ರೈತರ ರಕ್ಷಣೆಗೆ ನಿಲ್ಲುವುದು ಸರ್ಕಾರದ ಕರ್ತವ್ಯ. ನಿಯಮಗಳ ಪ್ರಕಾರ ಬರಗಾಲ ಎದುರಾದಾಗ ರೈತರ ಅಲ್ಪಾವಧಿ ಸಾಲಗಳನ್ನು ತಕ್ಷಣವೇ ಮನ್ನಾ ಮಾಡಬೇಕು. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಭರವಸೆಯನ್ನು ನೀಡಿಲ್ಲ. ತಕ್ಷಣವೇ ಸರ್ಕಾರ ರೈತರ ಅಲ್ಪಾವಧಿ ಕೃಷಿ ಸಾಲಗಳನ್ನು ಮನ್ನಾ ಮಾಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಸಿ ಆಫೀಸ್ ಬಿಟ್ಟು ಹೊರಬರಲಿ
ವರದಿ ಸಿದ್ಧಪಡಿಸುವ ನೆಪದಲ್ಲಿ ಕಾಲಹರಣ ಮಾಡುತ್ತಿರುವ ಅಧಿಕಾರಿಗಳ ನಡೆಗೂ ಗಂಗಾಧರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಯಾವ ಪ್ರಮಾಣದಲ್ಲಿ ಬರಗಾಲವಿದೆ, ಬಿತ್ತನೆ ಕಾರ್ಯ ಎಷ್ಟು ಕುಂಠಿತಗೊಂಡಿದೆ ಎಂಬ ನೈಜ ವರದಿಯನ್ನು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣವೇ ಸರ್ಕಾರಕ್ಕೆ ಸಲ್ಲಿಸಬೇಕು. ಇದಕ್ಕೆ ಹೆಚ್ಚಿನ ಸಮಯದ ಅಗತ್ಯವಿಲ್ಲ. ಅಧಿಕಾರಿಗಳು ಕೇವಲ ಎಸಿ ಕಾರ್, ಎಸಿ ಆಫೀಸ್ಗಳಲ್ಲಿ ಕುಳಿತರೆ ಸಾಲದು. ತಳಮಟ್ಟದಲ್ಲಿ ಭೂಮಿಗೆ ಇಳಿದು ರೈತರ ವಸ್ತುಸ್ಥಿತಿ ಅರಿಯಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಪಕ್ಷಗಳಿಗೂ ಜವಾಬ್ದಾರಿ ಇದೆ
ಕೇವಲ ಆಡಳಿತ ಪಕ್ಷ ಮಾತ್ರವಲ್ಲದೆ, ವಿರೋಧ ಪಕ್ಷಗಳೂ ಈ ಸ್ಥಿತಿಗೆ ಹೊಣೆಯಾಗಬೇಕಾಗುತ್ತದೆ. ಚುನಾವಣೆ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳೂ ತಾವು ರೈತರ ಪರ ಎಂದು ಭಾಷಣ ಬಿಗಿಯುತ್ತವೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಮರೆತುಬಿಡುತ್ತವೆ. ರಾಜ್ಯದಲ್ಲಿ ಬರಗಾಲ ಬಂದಾಗ ಆಡಳಿತ ಪಕ್ಷದಷ್ಟೇ ಜವಾಬ್ದಾರಿ ಪ್ರತಿಪಕ್ಷಗಳಿಗೂ ಇರುತ್ತದೆ. ವಿಪಕ್ಷಗಳು ಕೇವಲ ಮೂಕಪ್ರೇಕ್ಷಕರಾಗದೆ, ಸದನದ ಒಳಗೂ ಮತ್ತು ಹೊರಗೂ ರೈತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಬೇಕು ಹಾಗೂ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಕೆ.ಟಿ. ಗಂಗಾಧರ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಜಂಟಿ ಸಮೀಕ್ಷೆ ನಡೆಸಿ, ಇಡೀ ರಾಜ್ಯವನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಮುಂಬರುವ ದಿನಗಳಲ್ಲಿ ರೈತ ಸಂಘಟನೆಗಳು ಉಗ್ರ ಹೋರಾಟ ಕೈಗೆತ್ತಿಕೊಳ್ಳಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

