
ಸರ್ಕಾರಿ ನೇಮಕ ಪ್ರಕ್ರಿಯೆ ಸರಳಗೊಳಿಸಲು ಡಿಪಿಎಆರ್ 400 ಬಿಂದುಗಳ ರೋಸ್ಟರ್ ಪಟ್ಟಿ ಬಿಡುಗಡೆ ಮಾಡಿದೆ.
Internal Reservation| 400 ಬಿಂದುಗಳ ಹೊಸ ರೋಸ್ಟರ್ ಬಿಡುಗಡೆ; ನೇಮಕಾತಿ ಪ್ರಕ್ರಿಯೆ ಸಲೀಸು
ಯಾವುದೇ ನೇಮಕಾತಿ ಅಧಿಸೂಚನೆಯಲ್ಲಿ ಎಸ್‌ಸಿ ಮೀಸಲಾತಿಯಡಿ 3ಕ್ಕಿಂತ ಕಡಿಮೆ ಹುದ್ದೆಗಳಿದ್ದರೆ, ಒಳಮೀಸಲಾತಿ ಅನ್ವಯಿಸದೆ ಎಲ್ಲಾ 101 ಉಪಜಾತಿಗಳಿಗೆ ಸ್ಪರ್ಧಿಸಲು ಅವಕಾಶವಿರುತ್ತದೆ.
ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆ ಸುಲಭಗೊಳಿಸಲು ರಾಜ್ಯ ಸರ್ಕಾರ 400 ಬಿಂದುಗಳ ರೋಸ್ಟರ್ ಬಿಡುಗಡೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಹಲವು ದಿನಗಳಿಂದ ತಡೆಹಿಡಿದಿದ್ದ ಸುಮಾರು 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಈಗ ಮತ್ತಷ್ಟು ವೇಗ ಸಿಗಲಿದೆ.
ಒಟ್ಟು ಶೇ. 15 ರಷ್ಟು ಪರಿಶಿಷ್ಟ ಜಾತಿ ಮೀಸಲಾತಿಯನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಿ, ಪ್ರವರ್ಗ-ಎ ಶೇ. 5.25, ಪ್ರವರ್ಗ-ಬಿ ಶೇ. 5.25 ಹಾಗೂ ಪ್ರವರ್ಗ-ಸಿ ಶೇ. 4.5 ಮೀಸಲಾತಿ ನೀಡಲಾಗಿದೆ. ವಿಶೇಷವೆಂದರೆ, ಪ್ರವರ್ಗ-ಸಿ ಅಡಿಯಲ್ಲಿ ಲಭ್ಯವಾಗುವ ಸೀಟುಗಳಲ್ಲಿ ಶೇ. 20 ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿಯಲ್ಲಿರುವ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸಲಾಗಿದೆ. ಒಂದು ವೇಳೆ ಈ ಅಭ್ಯರ್ಥಿಗಳು ಲಭ್ಯವಾಗದಿದ್ದರೆ ಮಾತ್ರ ಆ ಹುದ್ದೆಗಳನ್ನು ಪ್ರವರ್ಗ-ಸಿ ನ ಇತರೆ ಜಾತಿಗಳಿಗೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಹೊಸ 400 ಬಿಂದುಗಳ ರೋಸ್ಟರ್ ಸಿದ್ಧ
ಒಳಮೀಸಲಾತಿಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಸರ್ಕಾರ 400 ಬಿಂದುಗಳ (Roster Points) ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವುದೇ ನೇಮಕಾತಿ ಅಧಿಸೂಚನೆಯಲ್ಲಿ ಎಸ್‌ಸಿ ಮೀಸಲಾತಿಯಡಿ 3ಕ್ಕಿಂತ ಕಡಿಮೆ ಹುದ್ದೆಗಳಿದ್ದರೆ, ಒಳಮೀಸಲಾತಿ ಅನ್ವಯಿಸದೆ ಎಲ್ಲಾ 101 ಉಪಜಾತಿಗಳಿಗೆ ಸ್ಪರ್ಧಿಸಲು ಅವಕಾಶವಿರುತ್ತದೆ. 3 ಕ್ಕಿಂತ ಹೆಚ್ಚು ಹುದ್ದೆಗಳಿದ್ದಲ್ಲಿ ಕಡ್ಡಾಯವಾಗಿ ಒಳಮೀಸಲಾತಿಯ ಬಿಂದುಗಳನ್ನು ಅನುಸರಿಸಬೇಕು.
ಶೀಘ್ರವೇ ಹೊಸ ಅಧಿಸೂಚನೆ ಪ್ರಕಟ
ಸರ್ಕಾರದ ಈ ನಿರ್ಧಾರದಿಂದಾಗಿ ದೊಡ್ಡ ಬದಲಾವಣೆಯಾಗಲಿದ್ದು, ಈಗಾಗಲೇ ಪರೀಕ್ಷೆ ನಡೆದಿರುವ ಅಧಿಸೂಚನೆಗಳನ್ನು ಹೊರತುಪಡಿಸಿ, ಒಳಮೀಸಲಾತಿ ಅಳವಡಿಸದೆ ಹೊರಡಿಸಲಾಗಿದ್ದ ಎಲ್ಲಾ ಹಳೆಯ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಸೂಚಿಸಲಾಗಿದೆ. ಈ ಕೂಡಲೇ ಹೊಸ ಒಳಮೀಸಲಾತಿ ನಿಯಮದಡಿ ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಎಲ್ಲಾ ಇಲಾಖೆಗಳಿಗೆ ಆದೇಶಿಸಲಾಗಿದೆ.
ಬ್ಯಾಕ್‌ಲಾಗ್ ಹುದ್ದೆಗಳ ಭರವಸೆ
ಮುಂದಿನ ದಿನಗಳಲ್ಲಿ ನ್ಯಾಯಾಲಯವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಹೆಚ್ಚಿಸಲಾಗಿರುವ ಒಟ್ಟು ಶೇ. 24 ರಷ್ಟು ಮೀಸಲಾತಿಯನ್ನು ಎತ್ತಿ ಹಿಡಿದಲ್ಲಿ, ಉಳಿದ ಶೇ. 6 ರಷ್ಟು ಹುದ್ದೆಗಳನ್ನು 'ಬ್ಯಾಕ್‌ಲಾಗ್' ಎಂದು ಪರಿಗಣಿಸಿ ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರ ತಿಳಿಸಿದೆ.
ಯಾರಿಗೆ ಲಾಭ?
ಈ ಆದೇಶದಿಂದಾಗಿ ಪರಿಶಿಷ್ಟ ಜಾತಿಯಲ್ಲಿನ ಅಸ್ಪೃಶ್ಯ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ನ್ಯಾಯಯುತ ಪಾಲು ಸಿಗಲಿದೆ. 56,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದರಿಂದ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿದೆ.

