x

ಪೆಟ್ರೋಲ್ ಗೆ ಎಥೆನಾಲ್ ಹೆಚ್ಚು ಮಿಶ್ರಣ: ಕೇಂದ್ರಕ್ಕೆ ಹಲವು ಪ್ರಶ್ನೆ ಕೇಳಿದ ಸಚಿವ ರಿಜ್ವಾನ್‌ ಅರ್ಷದ್

E 20 ಪೆಟ್ರೊಲ್ ವಿಚಾರ ಈಗ ವಿವಾದ ಸ್ವರೂಪ ಪಡೆದಿದ್ದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಎಥೆನಾಲ್ ಹೆಚ್ಚು ಮಿಶ್ರಣ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ.


ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣ ಪ್ರಮಾಣ ಇದೀಗ ವಿವಾದ ಸ್ವರೂಪ ಪಡೆದಿದೆ. ಶೇಕಡಾ 20 ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಆಗಿರುವುದನ್ನು ಪತ್ತೆ ಹಚ್ಚಿದ ರಾಜ್ಯಸರ್ಕಾರ ಕೇಂದ್ರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಅವರು ಎಥೆನಾಲ್ ಮಿಶ್ರಣದ ವರದಿ ಬಗ್ಗೆ ತೈಲ ಕಂಪೆನಿಗಳು ಹಾಗು ಬಿಜೆಪಿಯವರು ನೀಡಿದ ಉತ್ತರಕ್ಕೆ ಇಂದು ತಿರುಗೇಟು ನೀಡಿದರು.

ರಾಜ್ಯದ E20 ಇಂಧನ ಪರೀಕ್ಷಾ ಫಲಿತಾಂಶಗಳ ಕುರಿತು IOCL, BPCL ಮತ್ತು HPCL ಕಂಪನಿಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸಿದೆ. ಕರ್ನಾಟಕ ಸರ್ಕಾರವು ತನ್ನ ಪರೀಕ್ಷಾ ಫಲಿತಾಂಶಗಳು ಮತ್ತು ಅವುಗಳ ಆಧಾರದ ಮೇಲೆ ವ್ಯಕ್ತಪಡಿಸಿರುವ ನಿಲುವಿಗೆ ಬದ್ಧವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ (OMCs) ಪ್ರಕಟಣೆಯಲ್ಲಿ ತಾಂತ್ರಿಕ ಅಂಶಗಳ ಕುರಿತು ಸುದೀರ್ಘ ವಿವರಣೆಗಳಿವೆಯೇ ಹೊರತು, ಅತ್ಯಂತ ಮುಖ್ಯವಾದ ಪ್ರಶ್ನೆಗೆ ಯಾವುದೇ ಉತ್ತರ ನೀಡಿಲ್ಲ. ನಮ್ಮ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಪ್ರಮಾಣದ ಎಥನಾಲ್ ಇದೆ ಎಂದು ಪ್ರಶ್ವಿಸಿದ್ದಾರೆ.

ಕೇಂದ್ರ ಸರ್ಕಾರದ ಒತ್ತಡ

E20 ಇಂಧನದ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರತಿಯೊಂದು ಧ್ವನಿಯನ್ನೂ ಹಿಂದೆ ಸರಿಯುವಂತೆ ಕೇಂದ್ರ ಸರ್ಕಾರ ಮಾಡಿದೆ ಎಂದು ದೂರಿದರು.. 2026ರ ಜುಲೈ 28ರಂದು Society of Indian Automobile Manufacturers (SIAM) ಸಂಸ್ಥೆಯು E20 ಇಂಧನದಲ್ಲಿರುವ ಕ್ಲೋರೈಡ್ ಮತ್ತು ಸಲ್ಫರ್ ಅಂಶಗಳು ಹಾಗೂ ಅವು ವಾಹನಗಳ ಬಿಡಿಭಾಗಗಳಿಗೆ ಉಂಟುಮಾಡುತ್ತಿರುವ ಹಾನಿಯ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಆದರೆ, ಕೇಂದ್ರ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಕೇವಲ ಒಂದು ವಾರದೊಳಗೆ ಆ ಪತ್ರವನ್ನು ಹಿಂಪಡೆಯಲಾಯಿತು ಎಂದರು.

ACKO ವಿಮಾ ಸಂಸ್ಥೆಯು ಗ್ರಾಹಕರೊಬ್ಬರಿಗೆ, 'ತಪ್ಪಾದ ಇಂಧನ ಬಳಕೆಯಿಂದ ಎಂಜಿನ್‌ಗೆ ಉಂಟಾಗುವ ಹಾನಿಗೆ ವಿಮಾ ರಕ್ಷಣೆ ಲಭ್ಯವಿರುವುದಿಲ್ಲ' ಎಂದು ತಿಳಿಸಿತ್ತು. Hyundai, Toyota ಸೇರಿದಂತೆ ಇತರೆ ವಾಹನ ತಯಾರಿಕಾ ಕಂಪನಿಗಳು ತಮ್ಮ ವಾಹನಗಳ ಬಳಕೆದಾರರ ಕೈಪಿಡಿಗಳಲ್ಲಿ E10 ಹೊರತುಪಡಿಸಿ ಬೇರೆ ಇಂಧನವನ್ನು ಬಳಸಿದಲ್ಲಿ ವಾಹನದ ವಾರಂಟಿ ರದ್ದಾಗುತ್ತದೆ ಎಂದು ಉಲ್ಲೇಖಿಸಿದ್ದವು ಎಂದು ರಿಜ್ವಾನ್ ಅರ್ಷದ್ ಹೇಳಿದರು. Automotive Research Association of India (ARAI) ಸಿದ್ಧಪಡಿಸಿರುವ ವರದಿಯನ್ನು ಇಂದಿಗೂ ಸಾರ್ವಜನಿಕರಿಗೆ ಬಹಿರಂಗಪಡಿಸಲಾಗಿಲ್ಲಎಂದು ತಿಳಿಸಿದರು.

E20 ಇಂಧನವು ಇನ್ನೂ ಪ್ರಯೋಗಾತ್ಮಕ ಹಂತದಲ್ಲಿದೆ ಎಂದು ಭಾರತದ ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಆದರೆ, ನಂತರ ಅವರ ಕಚೇರಿಯಿಂದ ಈ ಕುರಿತು ಸ್ಪಷ್ಟೀಕರಣ ಹೊರಡಿಸಲಾಯಿತು. ಉದ್ಯಮ ಸಂಘಟನೆಗಳು ಮತ್ತು ಕಂಪನಿಗಳು ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿದು ಹಿಂದೆ ಸರಿಯಬಹುದು ಆದರೆ, ಕರ್ನಾಟಕ ಸರ್ಕಾರ ಮಾತ್ರ ಈ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ತೈಲ ಕಂಪನಿಗಳು ತಮ್ಮದೇ ಇಂಧನವನ್ನು ತಮ್ಮದೇ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ತಾವೇ ಗುಣಮಟ್ಟದ ಮಾನದಂಡಗಳನ್ನು ಪಾಲಿಸಿರುವುದಾಗಿ ಘೋಷಿಸಿಕೊಳ್ಳುವುದು ಎಂದರೆ, ಆರೋಪಿಯೇ ನ್ಯಾಯಾಧೀಶನಾಗಿ ವರ್ತಿಸಿದಂತಾಗಿದೆ ಎಂದು ಹೇಳಿದರು. ಆದ್ದರಿಂದ, ಇಂಧನ ಪರೀಕ್ಷಾ ವ್ಯವಸ್ಥೆಯನ್ನು ತೈಲ ಮಾರುಕಟ್ಟೆ ಕಂಪನಿಗಳ ನಿಯಂತ್ರಣದಿಂದ ಹೊರತಂದು, ಸಾರ್ವಜನಿಕರಿಗೆ ಉತ್ತರದಾಯಿತ್ವ ಹೊಂದಿರುವ ಸ್ವತಂತ್ರ ಮತ್ತು ಪಾರದರ್ಶಕ ವ್ಯವಸ್ಥೆಯಡಿ ತರಬೇಕೆಂದು ಕರ್ನಾಟಕ ಸರ್ಕಾರ ಆಗ್ರಹಿಸುತ್ತದೆ ಎಂದು ಹೇಳಿದರು.

Read More
Next Story