ಕೆಜಿಎಫ್‌ನಲ್ಲಿ ಬೃಹತ್ ಟೌನ್‌ಶಿಪ್‌; ನನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಜೀವ ಕೊಟ್ಟ ಸರ್ಕಾರ
x

ಕೆಜಿಎಫ್‌ನಲ್ಲಿ ಬೃಹತ್ ಟೌನ್‌ಶಿಪ್‌; ನನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಜೀವ ಕೊಟ್ಟ ಸರ್ಕಾರ

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕೆಜಿಎಫ್ 'ಸಮಗ್ರ ಟೌನ್‌ಶಿಪ್‌ ನಿರ್ಮಾಣ ಯೋಜನೆ'ಗೆ ರೂಪುರೇಷೆ ಸಿದ್ಧಪಡಿಸಲು ಅರ್ಹ ಸಲಹೆಗಾರರ ನೇಮಕಾತಿಗಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದೆ.


ರಾಮನಗರದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಮತ್ತೊಂದು ಟೌನ್‌ಶಿಪ್‌ ಯೋಜನೆ ಜಾರಿಗೆ ತೀರ್ಮಾನಿಸಿದೆ.

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕೆಜಿಎಫ್ 'ಸಮಗ್ರ ಟೌನ್‌ಶಿಪ್‌ ನಿರ್ಮಾಣ ಯೋಜನೆ'ಗೆ ರೂಪುರೇಷೆ ಸಿದ್ಧಪಡಿಸಲು ಅರ್ಹ ಸಲಹೆಗಾರರ ನೇಮಕಾತಿಗಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದೆ.

ಪಿಪಿಪಿ ಮಾದರಿ ಯೋಜನೆ

ಈ ಬೃಹತ್ ಯೋಜನೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಟೆಂಡರ್ ಮೂಲಕ ಆಯ್ಕೆಯಾಗುವ ಸಲಹೆಗಾರರು ಕೆಜಿಎಫ್ ಟೌನ್‌ಶಿಪ್‌ ಯೋಜನೆಯ ತಾಂತ್ರಿಕ ಸಾಧಕ-ಬಾಧಕಗಳು ಹಾಗೂ ಆರ್ಥಿಕ ಕಾರ್ಯಸಾಧ್ಯತೆಯ ವರದಿ ಸಿದ್ಧಪಡಿಸಲಿದ್ದಾರೆ.

ಪ್ರಸ್ತುತ ಮಾರುಕಟ್ಟೆ ಬೇಡಿಕೆ ಪರಿಶೀಲಿಸಿ, ಭೂಮಿಯ ಮೌಲ್ಯಮಾಪನ ಮಾಡಲಿದ್ದಾರೆ. ಜತೆಗೆ ದೇಶ-ವಿದೇಶಗಳಲ್ಲಿ ಯಶಸ್ವಿಯಾಗಿರುವ ಪ್ರಮುಖ ಟೌನ್‌ಶಿಪ್‌ ಯೋಜನೆಗಳನ್ನು ಅಧ್ಯಯನ ಮಾಡಿ, ರಾಜ್ಯಕ್ಕೆ ಸೂಕ್ತವಾದ ಮಾಸ್ಟರ್ ಪ್ಲಾನ್ ರೂಪಿಸಲಿದ್ದಾರೆ. ಹಂತ-ಹಂತವಾಗಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಸರ್ಕಾರಕ್ಕೆ ನಿರಂತರ ಆದಾಯ ತರುವಂತಹ ವ್ಯವಸ್ಥೆಗೆ ಶಿಫಾರಸು ಮಾಡಲಿದ್ದಾರೆ.

ವಲಸೆ ತಪ್ಪಿಸಲು ಟೌನ್‌ಶಿಪ್‌ ಯೋಜನೆ?

ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕೆಜಿಎಫ್, ದೇಶದ ಅತಿ ದೊಡ್ಡ ಚಿನ್ನದ ಗಣಿ ಕೇಂದ್ರವಾಗಿ ಪ್ರಸಿದ್ಧಿಯಾಗಿತ್ತು. ಆದರೆ, 2001ರಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಅಧಿಕೃತವಾಗಿ ಬಂದ್ ಆಯಿತು. ಅಲ್ಲಿಯವರೆಗೆ ಸುಮಾರು 800 ಟನ್ ಚಿನ್ನ ಉತ್ಪಾದಿಸಿದ್ದ ಈ ಪ್ರದೇಶ ಸ್ಥಗಿತಗೊಂಡು ಸಂಪೂರ್ಣ ಮುಚ್ಚಿತು.

ಕಳೆದ ಎರಡು ದಶಕಗಳಿಂದ ಈ ಭಾಗದಲ್ಲಿ ಯಾವುದೇ ಪ್ರಮುಖ ಕೈಗಾರಿಕಾ ಅಥವಾ ಆರ್ಥಿಕ ಅಭಿವೃದ್ಧಿ ಕಾರ್ಯಗಳು ನಡೆಯದ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಯುವಕರು ದಿನನಿತ್ಯ ಉದ್ಯೋಗಕ್ಕಾಗಿ ರೈಲು ಹಾಗೂ ಮೂಲಕ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಈ ವಲಸೆ ತಪ್ಪಿಸಿ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಿದೆ.

960 ಎಕರೆ ಭೂಮಿ ಲಭ್ಯ

ಕಳೆದ ವರ್ಷ ಅಂದರೆ 2025ರ ಮಾರ್ಚ್ನಲ್ಲಿ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎಸ್. ಸುರೇಶ್ ಅವರು ಬಿಜಿಎಂಎಲ್ಗೆ ಸೇರಿದ ಜಾಗದಲ್ಲಿ ಹಂತ ಹಂತವಾಗಿ ಟೌನ್‌ಶಿಪ್‌ ನಿರ್ಮಿಸುವುದಾಗಿ ಪ್ರಕಟಿಸಿದ್ದರು. ಪ್ರಸ್ತುತ ಬಿಜಿಎಂಎಲ್ ಒಡೆತನದ ಸುಮಾರು 960 ಎಕರೆ ಭೂಮಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ. ಯೋಜನೆಯ ಮೊದಲ ಹಂತದ ಅಭಿವೃದ್ಧಿಗಾಗಿ ಈಗಾಗಲೇ 300 ಎಕರೆ ಜಾಗ ಗುರುತಿಸಲಾಗಿದೆ.

ಚೆನ್ನೈ ಎಕ್ಸ್‌ಪ್ರೆಸ್‌ ವೇ ಆಸರೆ

ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಮಹತ್ವಾಕಾಂಕ್ಷೆಯ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಹೆದ್ದಾರಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಹೆದ್ದಾರಿಗೆ ಕೆಜಿಎಫ್ ಹತ್ತಿರವಿರುವುದರಿಂದ ಉದ್ದೇಶಿತ ಹೊಸ ಟೌನ್‌ಶಿಪ್‌ ಮೂಲಕ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಪ್ರಮುಖ ಹೂಡಿಕೆದಾರರನ್ನು ಸೆಳೆಯುವುದು ಸರ್ಕಾರದ ಮುಖ್ಯ ಉದ್ದೇಶ. ಆ ಮೂಲಕ ಕೆಜಿಎಫ್ ಅನ್ನು ಹೊಸ ಆರ್ಥಿಕ ವಲಯವನ್ನಾಗಿ ಮಾರ್ಪಡಿಸಲು ತಂತ್ರ ರೂಪಿಸಲಾಗಿದೆ.

Read More
Next Story