
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿ ಭತ್ಯೆ ಶೇ. 15.75ಕ್ಕೆ ಏರಿಕೆ, ನಿವೃತ್ತಿ ನೌಕರರಿಗೂ ಲಾಭ!
ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅರೆಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರು ಈ ಆದೇಶದ ವ್ಯಾಪ್ತಿಗೆ ಒಳಪಡುತ್ತಾರೆ.
ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ. ಜನವರಿ 1, 2026 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ ಶೇಕಡಾ 14.25 ರಷ್ಟಿದ್ದ ತುಟ್ಟಿ ಭತ್ಯೆಯನ್ನು ಶೇಕಡಾ 15.75 ಕ್ಕೆ ಏರಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶವು ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೂ ಅನ್ವಯಿಸುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು ಹಾಗೂ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವವರಿಗೂ ಈ ಹೆಚ್ಚಳದ ಲಾಭ ಸಿಗಲಿದೆ. ಅವರ ಮೂಲ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಮೇಲಿನ ತುಟ್ಟಿ ಭತ್ಯೆಯನ್ನು ಸಹ ಶೇಕಡಾ 14.25 ರಿಂದ ಶೇಕಡಾ 15.75 ಕ್ಕೆ ಹೆಚ್ಚಿಸಲಾಗಿದೆ.
ಅನುದಾನಿತ ಸಂಸ್ಥೆಗಳು ಅರ್ಹ
ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅರೆಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರು ಈ ಆದೇಶದ ವ್ಯಾಪ್ತಿಗೆ ಒಳಪಡುತ್ತಾರೆ.
ಯುಜಿಸಿಗೆ ಪ್ರತ್ಯೇಕ ಆದೇಶ
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರುಗಳಿಗೂ ಈ ಆದೇಶ ಅನ್ವಯಿಸುತ್ತದೆ. ಈ ಸಂಸ್ಥೆಗಳಡಿ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಹೆಚ್ಚುವರಿ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡಲಾಗುವುದು. ಈ ಹೆಚ್ಚಳದಿಂದ ಉಂಟಾಗುವ ಬಾಕಿ ಮೊತ್ತವನ್ನು 2026ರ ಮೇ ತಿಂಗಳ ವೇತನ ಹಾಗೂ ಪಿಂಚಣಿ ಬಟವಾಡೆಗೂ ಮೊದಲು ಪಾವತಿ ಮಾಡಲಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಉಮಾ.ಕೆ. ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೌಕರರಿಗೆ ಎಷ್ಟು ಹಣ ಸಿಗಲಿದೆ ?
ರಾಜ್ಯ ಸರ್ಕಾರಿ ನೌಕರರು ಮೂಲ ವೇತನಕ್ಕೆ ಅನುಸಾರವಾಗಿ ಹಳೆಯ ತುಟ್ಟಿಭತ್ಯೆ ಶೇ. 14.25ರಿಂದ ಶೇ.15.75ಕ್ಕೆ ಹೆಚ್ಚಳವಾಗಿರುವುದರಿಂದ 25 ಸಾವಿರ ರೂ. ಪಡೆಯುತ್ತಿದ್ದರೆ ಈ ಹಿಂದೆ 3,562 ರೂ. ತುಟ್ಟಿಭತ್ಯೆ ಪಡೆಯುತ್ತಿದ್ದರು. ಇದೀಗ 375 ರೂ. ಹೆಚ್ಚಳವಾಗಿರುವುದರಿಂದ 3,937 ರೂ. ಸಿಗಲಿದೆ. 40 ಸಾವಿರ ರೂ. ಮೂಲವೇತನ ಪಡೆಯುವವರಿಗೆ 6,300 ರೂ. ಹೆಚ್ಚಳವಾಗಿದೆ. 60 ಸಾವಿರ ಮೂಲವೇತನ ಪಡೆಯುವವರಿಗೆ 900 ರೂ. ಹೆಚ್ಚಳವಾಗಿದ್ದು, 9,450 ರೂ. ಪಡೆಯಲಿದ್ದಾರೆ. 1 ಲಕ್ಷ ರೂ. ಮೂಲ ವೇತನ ಪಡೆಯುವವರಿಗೆ 1.500 ರೂ. ಹೆಚ್ಚಳವಾಗಲಿದ್ದು, 15,750 ರೂ. ತುಟ್ಟಿಭತ್ಯೆ ಸಿಗಲಿದೆ.

