ಬರಗಾಲದ ಸಂಕಷ್ಟಕ್ಕೆ ಮೋಡ ಬಿತ್ತನೆ: ರಾಜ್ಯ ಸರ್ಕಾರದಿಂದ ವಿಶೇಷ ಸಮಿತಿಗಳ ರಚನೆ
x

ಬರಗಾಲದ ಸಂಕಷ್ಟಕ್ಕೆ ಮೋಡ ಬಿತ್ತನೆ: ರಾಜ್ಯ ಸರ್ಕಾರದಿಂದ ವಿಶೇಷ ಸಮಿತಿಗಳ ರಚನೆ

ಮೋಡ ಬಿತ್ತನೆ ಕಾರ್ಯವು ಸರಾಗವಾಗಿ ಸಾಗಲು ಮತ್ತು ಅದರ ಪ್ರಗತಿಯನ್ನು ಪ್ರತಿ ಹಂತದಲ್ಲೂ ಪರಿಶೀಲಿಸುವ ಕಾರ್ಯವನ್ನು ಸಮಿತಿ ಮಾಡಲಿದೆ. ಸಮಗ್ರ ಉಸ್ತುವಾರಿ, ಮೇಲ್ವಿಚಾರಣೆಯ ಪರಿಶೀಲನೆ ನಡೆಸಲಿದೆ.


Click the Play button to hear this message in audio format

ಪ್ರಸಕ್ತ ಸಾಲಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಮತ್ತು ಸಾರ್ವಜನಿಕರು ತೀವ್ರ ಬರಗಾಲದ ಭೀತಿಯಲ್ಲಿದ್ದಾರೆ. ಈ ಗಂಭೀರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು, ಕೃಷಿ ಚಟುವಟಿಕೆಗಳಿಗೆ ಜೀವ ತುಂಬಲು ಮತ್ತು ಕುಡಿಯುವ ನೀರಿನ ಅಭಾವವನ್ನು ನೀಗಿಸಲು ರಾಜ್ಯ ಸರ್ಕಾರವು ಮೋಡ ಬಿತ್ತನೆ ಎಂಬ ವೈಜ್ಞಾನಿಕ ಅಸ್ತ್ರವನ್ನು ಪ್ರಯೋಗಿಸಲು ಸಜ್ಜಾಗಿದೆ. ಈ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ಸಾಮಾನ್ಯವಾಗಿ ಮುಂಗಾರು ಮಳೆಯನ್ನೇ ನಂಬಿ ಬದುಕುವ ನಮ್ಮ ರೈತರಿಗೆ ಮಳೆ ಕೈಕೊಟ್ಟರೆ ಕೃಷಿ ಉತ್ಪಾದನೆ ಕುಸಿಯುತ್ತದೆ, ಜಲಾಶಯಗಳಲ್ಲಿ ನೀರಿನ ಮಟ್ಟ ತಗ್ಗುತ್ತದೆ ಮತ್ತು ಅಂತರ್ಜಲ ಮಟ್ಟ ಕುಸಿಯುತ್ತದೆ. ಈ ಸಮಸ್ಯೆಗೆ ತಕ್ಷಣದ ಪರಿಹಾರವಾಗಿ ಮೋಡ ಬಿತ್ತನೆಯನ್ನು ಬಳಸಿಕೊಳ್ಳುವುದು ಸರ್ಕಾರದ ಉದ್ದೇಶ. ಮೋಡ ಬಿತ್ತನೆ ಎಂದರೆ ವಿಮಾನಗಳ ಮೂಲಕ ಮೋಡಗಳಿಗೆ ಬೆಳ್ಳಿ ಅಯೋಡೈಡ್ ಅಥವಾ ಲವಣಗಳಂತಹ ರಾಸಾಯನಿಕಗಳನ್ನು ಸಿಂಪಡಿಸಿ, ಮಳೆಯಾಗುವಂತೆ ಪ್ರೇರೇಪಿಸುವ ಒಂದು ತಾಂತ್ರಿಕ ಪ್ರಕ್ರಿಯೆ. ಈ ವೈಜ್ಞಾನಿಕ ವಿಧಾನವು ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ಕೃತಕ ಮಳೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ.

ಯೋಜನೆಯ ಅನುಷ್ಠಾನ ಹಾಗೂ ಹೊಣೆಗಾರಿಕೆ

ರಾಜ್ಯ ಸರ್ಕಾರವು ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಒಟ್ಟು 28.52 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. ಈ ಯೋಜನೆಯನ್ನು ಎರಡು ಪ್ರಮುಖ ಇಲಾಖೆಗಳು ಜಂಟಿಯಾಗಿ ಅನುಷ್ಠಾನಗೊಳಿಸುತ್ತಿವೆ. ಜಲಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಂದಾಯ ಇಲಾಖೆಯ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಕ ಕಾರ್ಯಾರೂಪಕ್ಕೆ ತರಲಿದೆ. ಈ ಯೋಜನೆಯ ಸೇವೆಗಳನ್ನು ಪಡೆಯಲು ಕ್ಯಾಥಿ ಹವಾಮಾನ ಮಾರ್ಪಾಡು ಸಲಹೆಗಾರ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ ಈ ಪ್ರಕ್ರಿಯೆಗೆ ಕರ್ನಾಟಕ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

ಮೇಲ್ವಿಚಾರಣಾ ಸಮಿತಿ : ಉಸ್ತುವಾರಿಯ ಕಣ್ಗಾವಲು

ಮೋಡ ಬಿತ್ತನೆ ಕಾರ್ಯವು ಸರಾಗವಾಗಿ ಸಾಗಲು ಮತ್ತು ಅದರ ಪ್ರಗತಿಯನ್ನು ಪ್ರತಿ ಹಂತದಲ್ಲೂ ಪರಿಶೀಲಿಸಲು ಸರ್ಕಾರವು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಪ್ರಮುಖ ಕಾರ್ಯಗಳೆಂದರೆ, ಯೋಜನೆಯ ಸಮಗ್ರ ಉಸ್ತುವಾರಿ ಮತ್ತು ಮೇಲ್ವಿಚಾರಣೆ, ಬಿತ್ತನೆ ಕಾರ್ಯದ ಅಂತಿಮ ಪರಿಶೀಲನೆಯಾಗಿದೆ.


ಸಮಿತಿಯ ರಚನೆ

ಈ ಸಮಿತಿಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ, ಕೃಷಿ ಇಲಾಖೆಯ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹಾಗೂ ಕೆಎಸ್‌ಎನ್‌ಡಿಎಂಸಿ ವ್ಯವಸ್ಥಾಪಕ ನಿರ್ದೇಶಕರು ಇರುತ್ತಾರೆ. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ. ಮೋಡ ಬಿತ್ತನೆಯು ಅತ್ಯಂತ ಸೂಕ್ಷ್ಮ ಮತ್ತು ವೈಜ್ಞಾನಿಕ ಪ್ರಕ್ರಿಯೆಯಾಗಿರುವುದರಿಂದ, ಈ ವಿಷಯದಲ್ಲಿ ಕೆಎಸ್‌ಎನ್‌ಡಿಎಂಸಿಗೆ ಸರಿಯಾದ ಮಾರ್ಗದರ್ಶನ ನೀಡಲು ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ಸಂಯೋಜನೆ

ಕೆಎಸ್‌ಎನ್‌ಡಿಎಂಸಿ ನಿರ್ದೇಶಕರು ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ತಜ್ಞರ ದಂಡೇ ಇದೆ. ಕೃಷಿ ಇಲಾಖೆ, ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರು ಇದರ ಸದಸ್ಯರಾಗಿದ್ದಾರೆ. ಜತೆಗೆ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ನಾಗೇಶ್ ಕುಮಾರ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಎಸ್. ಭಟ್, ನಿವೃತ್ತ ಇಂಜಿನಿಯರ್ ಹೆಚ್.ಎಸ್. ಪ್ರಕಾಶ್ ಕುಮಾರ್, ಪುಣೆಯ ಐಐಟಿಎಂನ ಪ್ರತಿನಿಧಿ ಮತ್ತು ಪರಿಸರ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಮಲಪ್ರಭಾ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಸದಸ್ಯ ಕಾರ್ಯದರ್ಶಿಯಾಗಿದ್ದು, ಬೆಳಗಾವಿಯ ಜೈನ್ ಕಾಲೇಜಿನ ಡಾ. ಸಂಜೀವ್ ಸಂಗಮಿ ಅವರನ್ನು ವಿಶೇಷ ಆಹ್ವಾನಿತರಾಗಿ ನೇಮಿಸಲಾಗಿದೆ.

ಸರ್ಕಾರದ ಈ ಕ್ರಮವು ರೈತರಲ್ಲಿ ಭರವಸೆಯನ್ನು ಮೂಡಿಸಿದೆ. ಸಮಿತಿಗಳಲ್ಲಿ ಹೆಸರಾಂತ ವಿಜ್ಞಾನಿಗಳು ಮತ್ತು ತಜ್ಞರಿರುವುದರಿಂದ ಈ ಕಾರ್ಯಕ್ರಮವು ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಮೋಡ ಬಿತ್ತನೆಯು ಹವಾಮಾನದ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿರುವುದರಿಂದ, ಸೂಕ್ತ ಮೋಡಗಳ ಲಭ್ಯತೆಯ ಸಂದರ್ಭದಲ್ಲಿ ಮಾತ್ರವೇ ಇದು ಫಲಪ್ರದವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Read More
Next Story