
Bike Taxi| ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಗೆ ಮೇಲ್ಮನವಿ; ಏ.23 ರೊಳಗೆ ಅರ್ಜಿ ಸಲ್ಲಿಸಲು ನಿರ್ಧಾರ
ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಆಟೊ ಚಾಲಕರ ಸಂಘಟನೆಗಳಿಗೆ ಕೊಂಚ ನಿರಾಳ ತಂದಿದೆ.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಹಾವಳಿಗೆ ಬ್ರೇಕ್ ಹಾಕಲು ನಿರ್ಧರಿಸಿರುವ ರಾಜ್ಯ ಸರ್ಕಾರವು ಹೈಕೋರ್ಟ್ ಅನುಮತಿ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.
ಬೈಕ್ ಟ್ಯಾಕ್ಸಿ ಸೇವೆಗೆ ಪರವಾನಗಿ ನೀಡುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸುಪ್ರಿಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಾರಿಗೆ ಇಲಾಖೆಗೆ ಸೂಚಿಸಿದ್ದಾರೆ. ಜ.23 ರಂದು ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಅಲ್ಲದೇ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನ ಎಂದು ನೋಂದಾಯಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.
ವಿವಾದದ ಹಿನ್ನೆಲೆ ಏನು?
ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಜನಪ್ರಿಯವಾಗಿದ್ದರೂ, ಅವುಗಳಿಗೆ ಕಾನೂನುಬದ್ಧ ಅನುಮತಿ ನೀಡುವ ವಿಚಾರದಲ್ಲಿ ಗೊಂದಲ ಮುಂದುವರಿದಿತ್ತು.
2025ರಲ್ಲಿ ಹೈಕೋರ್ಟ್ನ ಏಕಸದಸ್ಯ ಪೀಠವು ಬೈಕ್ ಟ್ಯಾಕ್ಸಿ ಸೇವೆಯನ್ನು ಅನಧಿಕೃತ ಎಂದು ಘೋಷಿಸಿ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಸಂಸ್ಥೆಗಳು ದ್ವಿಸದಸ್ಯ ಪೀಠದ ಮೊರೆ ಹೋಗಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠವು ಜ.23ರಂದು ಬೈಕ್ ಟ್ಯಾಕ್ಸಿಗಳಿಗೆ ಪರವಾನಗಿ ನೀಡುವುದನ್ನು ಸರ್ಕಾರ ನಿರಾಕರಿಸುವಂತಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹಳದಿ ಬೋರ್ಡ್ ಹೊಂದಿರುವ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ನಿಯಮಾವಳಿ ರೂಪಿಸುವ ಉದ್ದೇಶವಿಲ್ಲ
ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅಧಿಕೃತ ಮಾನ್ಯತೆ ನೀಡಲು ಸರ್ಕಾರಕ್ಕೆ ಹಿಂದೇಟು ಹಾಕಿದ್ದು, ದ್ವಿಸದಸ್ಯ ಪೀಠದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಅಂಗಳದಲ್ಲಿ ಕಾನೂನು ಸಮರ ನಡೆಸಲು ನಿರ್ಧರಿಸಿದೆ.
ಬೈಕ್ ಟ್ಯಾಕ್ಸಿಗಳಿಂದ ಆಟೋ ಚಾಲಕರ ಬದುಕಿಗೆ ಪೆಟ್ಟು ಬೀಳುತ್ತಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಲೂ ಬೈಕ್ ಟ್ಯಾಕ್ಸಿ ಸವಾಲಾಗಿದೆ ಎಂಬುದು ಸರ್ಕಾರದ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಏ.23ರೊಳಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲು ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಸೂಚಿಸಿದೆ.
ಸರ್ಕಾರಕ್ಕೆ ಖಾಸಗಿ ಸಾರಿಗೆ ಒಕ್ಕೂಟದ ಬೆಂಬಲ
ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಅವರು, ಬೈಕ್ ಟ್ಯಾಕ್ಸಿ ವಿಚಾರದಲ್ಲಿ ಸರ್ಕಾರದ ನಿಲುವು ಸ್ವಾಗತಾರ್ಹ. ಇದರಿಂದ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರ ಹಿತ ಕಾಪಾಡಿದಂತಾಗಲಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಆಟೊ ಚಾಲಕರ ಸಂಘಟನೆಗಳಿಗೆ ಕೊಂಚ ನಿರಾಳ ತಂದಿದೆ. ಸರ್ಕಾರ ಸಲ್ಲಿಸುವ ಈ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಹೇಗೆ ಪರಿಗಣಿಸಲಿದೆ, ಯಾವ ಆದೇಶ ನೀಡಲಿದೆ ಎಂಬುದು ಕುತೂಹಲಕಾರಿಯಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್, ರಾಜ್ಯ ಸರ್ಕಾರದ ವಾದ ಮನ್ನಿಸಿದರೆ, ಆನ್‌ಲೈನ್ ಪ್ಲಾಟ್‌ಫಾರಂ ಆಧರಿತ ಬೈಕ್ ಟ್ಯಾಕ್ಸಿ ಕಂಪನಿಗಳಿಗೆ ಹಿನ್ನಡೆಯಾಗಲಿದೆ.

