ಗಿಗ್‌ ಕಾರ್ಮಿಕರ ಕುಂದುಕೊರತೆ ಇತ್ಯರ್ಥಕ್ಕೆ ಡಿಜಿಟಲ್‌ ವೇದಿಕೆ; ಸಮಸ್ಯೆಗೆ 45 ದಿನಗಳಲ್ಲಿ ಸಿಗಲಿದೆ  ಪರಿಹಾರ
x

ಗಿಗ್‌ ಕಾರ್ಮಿಕರ ಕುಂದುಕೊರತೆ ಇತ್ಯರ್ಥಕ್ಕೆ ಡಿಜಿಟಲ್‌ ವೇದಿಕೆ; ಸಮಸ್ಯೆಗೆ 45 ದಿನಗಳಲ್ಲಿ ಸಿಗಲಿದೆ ಪರಿಹಾರ

ಗಿಗ್ ಕಾರ್ಮಿಕರ ಕುಂದುಕೊರತೆ ಆಲಿಸಿ,ಇತ್ಯರ್ಥಪಡಿಸುವ ಜತೆಗೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಈ ವೇದಿಕೆ ಆರಂಭಿಸಲಾಗಿದೆ. ಈ ವೇದಿಕೆಯು ಗಿಗ್ ಕಾರ್ಮಿಕರು ಮತ್ತು ಅಗ್ರಿಗೇಟರ್ ಸಂಸ್ಥೆಗಳ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡಲಿದೆ.


Click the Play button to hear this message in audio format

ದೇಶದಲ್ಲೇ ಮೊದಲ ಬಾರಿಗೆ ಗಿಗ್ ಕಾರ್ಮಿಕರ ಕಲ್ಯಾಣ ಕಾಯ್ದೆ ಜಾರಿಗೊಳಿಸಿ ಮಾದರಿಯಾಗಿರುವ ರಾಜ್ಯ ಸರ್ಕಾರ, ಇದೀಗ ಗಿಗ್ ಕಾರ್ಮಿಕರ ಕುಂದುಕೊರತೆ ಆಲಿಸಲು ವಿಶೇಷ ಡಿಜಿಟಲ್ ವೇದಿಕೆ ಆರಂಭಿಸಿದೆ. ಇ-ಆಡಳಿತ ಇಲಾಖೆಯ ಸಹಯೋಗದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಈ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ.

ಗಿಗ್ ಕಾರ್ಮಿಕರ ಕುಂದುಕೊರತೆ ಆಲಿಸಿ,ಇತ್ಯರ್ಥಪಡಿಸುವ ಜತೆಗೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಈ ವೇದಿಕೆ ಆರಂಭಿಸಲಾಗಿದೆ. ಈ ವೇದಿಕೆಯು ಗಿಗ್ ಕಾರ್ಮಿಕರು ಮತ್ತು ಅಗ್ರಿಗೇಟರ್ ಸಂಸ್ಥೆಗಳ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡಲಿದೆ. ಗಿಗ್ ಕಾರ್ಮಿಕರ ವೇತನ, ಕೆಲಸದ ಪರಿಸ್ಥಿತಿ ಮತ್ತು ಕೆಲಸದ ಸ್ಥಳದಲ್ಲಿ ಉದ್ಭವಿಸುವ ವಿವಾದಗಳನ್ನು ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಯಡಿ ಪರಿಹರಿಸಿಕೊಳ್ಳಬಹುದು. ಇದರಿಂದ ಕರ್ನಾಟಕದ ಲಕ್ಷಾಂತರ ಗಿಗ್ ಕಾರ್ಮಿಕರಿಗೆ ಅನುಕೂಲವಾಗಲಿದೆ.

ಆಂತರಿಕ ದೂರು ಪರಿಹಾರ ಸಮಿತಿ ರಚನೆ ಕಡ್ಡಾಯ

ಕರ್ನಾಟಕ ಪ್ಲಾಟ್‌ಫಾರಂ ಆಧಾರಿತ ಗಿಗ್ ಕಾರ್ಮಿಕರ ಕಾಯ್ದೆ ಮತ್ತು ನಿಯಮಗಳಡಿ ಪ್ರತಿಯೊಂದು ಅಗ್ರಿಗೇಟರ್‌ಗಳು Internal Dispute Resolution Committees ಅಂದರೆ ಆಂತರಿಕ ವಿವಾದ ಪರಿಹಾರ ಸಮಿತಿಗಳನ್ನು ರಚಿಸಬೇಕು. ನಮ್ಮ ಯಾತ್ರಿ, ಯುಲು ನಂತಹ ವೇದಿಕೆಗಳು ಈಗಾಗಲೇ ಆಂತರಿಕ ವಿವಾದ ಪರಿಹಾರ ಸಮಿತಿಗಳನ್ನು ರಚಿಸಿಕೊಂಡು ರಾಜ್ಯ ಸರ್ಕಾರದ ಡಿಜಿಟಲ್ ವೇದಿಕೆಯೊಂದಿಗೆ ಸಂಯೋಜಿಸಿಕೊಂಡಿವೆ. ಈ ವೇದಿಕೆಯಡಿ ಸಲ್ಲಿಸುವ ಕುಂದುಕೊರತೆಗಳು ಸ್ವಯಂಚಾಲಿತವಾಗಿ ಆಯಾ ಅಗ್ರಿಗೇಟರ್ಗಳ Internal Dispute Resolution Committees ಗೆ ರವಾನೆಯಾಗಲಿವೆ. ಅಂತಹ ದೂರುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕಾಗುತ್ತದೆ. ಈ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಅನಗತ್ಯ ವಿಳಂಬವಾಗದಂತೆ ರಾಜ್ಯ ಸರ್ಕಾರವು ಗಿಗ್ ಕಾರ್ಮಿಕರು ಮತ್ತು ಆಲ್ನೈನ್ ಅಗ್ರಿಗೇಟರ್ ಸಂಸ್ಥೆಗಳೊಂದಿಗೆ ಮೇಲ್ವಿಚಾರಣೆ ನಡೆಸಲಿದೆ.

12 ಲಕ್ಷ ಗಿಗ್‌ ಕಾರ್ಮಿಕರಿಗೆ ಮಾಹಿತಿ ಹಂಚಿಕೆ

ಇನ್ನು ರಾಜ್ಯದಲ್ಲಿ ಇಲ್ಲಿಯವರೆಗೆ 12 ಲಕ್ಷ ಗಿಗ್ ಕಾರ್ಮಿಕರ ವಿವರಗಳನ್ನು ಅಗ್ರಿಗೇಟರ್ ಸಂಸ್ಥೆಗಳು ಸರ್ಕಾರದ ಡಿಜಿಟಲ್ ವೇದಿಕೆಯೊಂದಿಗೆ ಹಂಚಿಕೊಂಡಿವೆ. ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಯಡಿ ಕೆಲಸದಿಂದ ವಜಾಗೊಳಿಸುವಿಕೆ, ಅಮಾನತು, ವೇತನ ತಡೆಹಿಡಿಯುವಂತಹ ಪ್ರಕರಣಗಳು ಮತ್ತು ಅಸುರಕ್ಷಿತ ಕೆಲಸದ ವಾತಾವರಣಕ್ಕೆ ಸಂಬಂಧಿಸಿದ ದೂರುಗಳನ್ನು ನೋಂದಾಯಿಸಬಹುದು.

ಅರ್ಹ ಗಿಗ್ ಕೆಲಸಗಾರರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದ ಹೊರಗೆ ಅಪಘಾತ ಸೇರಿದಂತೆ ಇನ್ನಿತರೆ ವಿಮಾ ಪ್ರಯೋಜನಗಳಿಗಾಗಿ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನೋಂದಾಯಿತ ಕಾರ್ಮಿಕರು ತಮ್ಮ ಕಲ್ಯಾಣ ಕೊಡುಗೆಗಳನ್ನು ಟ್ರ್ಯಾಕ್ ಮಾಡಲು ಮತ್ತು ಗೊತ್ತುಪಡಿಸಿದ ಡ್ಯಾಶ್‌ಬೋರ್ಡ್‌ ಮೂಲಕ ಅರ್ಹ ಯೋಜನೆಗಳನ್ನು ಪ್ರವೇಶಿಸಲು ವಿಶಿಷ್ಟ ಗುರುತಿನ ಸಂಖ್ಯೆ ಪಡೆಯಲಿದ್ದಾರೆ. ಆ ಮೂಲಕ ವಿವಿಧ ಅಗ್ರಿಗೇಟರ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಾಹಿತಿ ಎರಡೆರಡು ಬಾರಿ ದಾಖಲಾಗುವುದನ್ನು ತಪ್ಪಿಸಬಹುದು.

‘ಗಿಗ್ ಕಾರ್ಮಿಕರು ಎಷ್ಟು ಗಂಟೆ ಕೆಲಸ ಮಾಡುತ್ತಾರೆ, ಅವರು ಮಾಡುವ ಕೆಲಸದ ಸ್ವರೂಪ ಹೇಗಿರಲಿದೆ, ಮತ್ತಿತರ ಅಂಶಗಳನ್ನು ಆಧರಿಸಿ ಅವರಿಗಾಗಿ ಸರ್ಕಾರ ಕಲ್ಯಾಣ ಯೋಜನೆಗಳನ್ನು ರೂಪಿಸಲಿದೆ. ಇದಕ್ಕೆ ತಜ್ಞರು ಹಾಗೂ ಪರಿಣಿತ ಸಂಸ್ಥೆಗಳ ನೆರವು ಪಡೆಯುತ್ತಿದ್ದು, ಕಲ್ಯಾಣ ಯೋಜನೆಗಳ ಕರಡು ಅಂತಿಮಗೊಂಡ ನಂತರ ಅವುಗಳನ್ನು ಮುಂದಿನ ಗಿಗ್ ಕಾರ್ಮಿಕರ ಮಂಡಳಿಯ ಮುಂದಿಟ್ಟು ಚರ್ಚೆ ನಡೆಸಲಾಗುವುದು ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಕರ್ನಾಟಕ ಪ್ಲಾಟ್‌ಫಾರಂ ಆಧಾರಿತ ಗಿಗ್ ಕಾರ್ಮಿಕರ ನಿಧಿಗೆ ಜಮಾ ಮಾಡಲಾದ ಪಾವತಿಗಳ ಮೇಲೆ ಅಗ್ರಿಗೇಟರ್ ಗಳು ಶೇ 1 ರಷ್ಟು ಕ್ಷೇಮಾಭಿವೃದ್ಧಿ ಶುಲ್ಕ ಪಾವತಿಸಬೇಕು. ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಯಡಿ ದೂರುಗಳನ್ನು 15 ರಿಂದ 45 ದಿನಗಳಲ್ಲಿ ಇತ್ಯರ್ಥಪಡಿಸಲು ಅಗ್ರಿಗೇಟರ್ ಸಂಸ್ಥೆಗಳ ಆಂತರಿಕ ವಿವಾದ ಪರಿಹಾರ ಸಮಿತಿಗೆ ರವಾನಿಸಲಾಗುತ್ತದೆ. ಅಲ್ಲಿ ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಬೇಕು. ಆಗೊಮ್ಮೆ ಸರ್ಕಾರದ ಡಿಜಿಟಲ್ ವೇದಿಕೆಯಲ್ಲಿ ತ್ವರಿತವಾಗಿ ಪರಿಹಾರ ಸಿಗದಿದ್ದರೆ ಗಿಗ್ ಕಾರ್ಮಿಕರು ಕಾರ್ಮಿಕ ಸಹಾಯವಾಣಿ 155214 ಸಂಖ್ಯೆಯನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು.

Read More
Next Story