
ವೈದ್ಯಕೀಯ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)
ನೀಟ್ ಆತಂಕದ ನಡುವೆ ಗುಡ್ ನ್ಯೂಸ್: ರಾಜ್ಯಕ್ಕೆ ದಾಖಲೆಯ 1,122 ಹೆಚ್ಚುವರಿ ಮೆಡಿಕಲ್ ಸೀಟುಗಳು ಮಂಜೂರು!
ಪ್ರಮುಖವಾಗಿ ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಹೆಚ್ಚುವರಿ ಸೀಟುಗಳು ಲಭ್ಯವಾಗಲಿವೆ.
ದೇಶಾದ್ಯಂತ ನೀಟ್ (NEET) ಪರೀಕ್ಷೆ ಅಕ್ರಮದ ವಿವಾದ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕರ್ನಾಟಕದ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯಕ್ಕೆ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ ಅಂದರೆ ಒಟ್ಟು 1,122 ಹೆಚ್ಚುವರಿ ಸರ್ಕಾರಿ ಮೆಡಿಕಲ್ ಸೀಟುಗಳು ಮಂಜೂರಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಘೋಷಿಸಿದ್ದಾರೆ
ಶನಿವಾರ ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೆಡಿಕಲ್ ಸೀಟುಗಳ ಲಭ್ಯತೆಯಲ್ಲಿ ಕರ್ನಾಟಕ ದೇಶದಲ್ಲೇ ಹೊಸ ದಾಖಲೆ ಬರೆದಿದೆ. ಒಂದೇ ಬಾರಿಗೆ ಒಂದು ರಾಜ್ಯಕ್ಕೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಸೀಟುಗಳು ಸಿಕ್ಕಿರುವುದು ನಮ್ಮ ಸಾಧನೆಗೆ ಸಾಕ್ಷಿ" ಎಂದು ಹರ್ಷ ವ್ಯಕ್ತಪಡಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಮಾತನಾಡಿದರು.
ಹೊಸ ಸೀಟುಗಳ ಹಂಚಿಕೆ ಎಲ್ಲಿಗೆ?
ಹೊಸದಾಗಿ ಮಂಜೂರಾಗಿರುವ ಸೀಟುಗಳನ್ನು ರಾಜ್ಯದ ವಿವಿಧ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆ ಮಾಡಲಾಗುತ್ತದೆ. ಪ್ರಮುಖವಾಗಿ ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಹೆಚ್ಚುವರಿ ಸೀಟುಗಳು ಲಭ್ಯವಾಗಲಿವೆ.
ಕೇಂದ್ರ ಸರ್ಕಾರ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮೇ 15ರಂದು ರಾಜ್ಯ ಸಲ್ಲಿಸಿದ್ದ ಪ್ರಸ್ತಾವನೆಗೆ ಅಂತಿಮ ಅನುಮೋದನೆ ನೀಡಿದೆ. ಇದರೊಂದಿಗೆ ರಾಜ್ಯದ ವೈದ್ಯಕೀಯ ಶಿಕ್ಷಣದ ಮೂಲಸೌಕರ್ಯ ವೃದ್ಧಿಗೆ ಬರೋಬ್ಬರಿ 1,090 ಕೋಟಿ ರೂ. ಅನುದಾನ ಸಿಕ್ಕಂತಾಗಿದೆ. ಯುಜಿ ಸೀಟುಗಳಿಗೆ 495 ಕೋಟಿ ರೂ. ಸ್ನಾತಕೋತ್ತರ ಸೀಟುಗಳಿಗೆ 541 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
"ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಸದ್ಯ ದೇಶದಲ್ಲಿ ನೀಟ್ ಗೊಂದಲಗಳಿಂದ ವಿದ್ಯಾರ್ಥಿಗಳು ಬೇಸತ್ತಿದ್ದಾರೆ, ಆದರೆ ಈ ಹೆಚ್ಚುವರಿ ಸೀಟುಗಳು ಅವರಲ್ಲಿ ಹೊಸ ಭರವಸೆ ಮೂಡಿಸಲಿವೆ. ಆಕಾಂಕ್ಷಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿರುವ ಮೆಡಿಕಲ್ ಸೀಟುಗಳು
ಖಾಸಗಿ, ಡೀಮ್ಡ್ ಸೇರಿ ಒಟ್ಟು 72 ವೈದ್ಯಕೀಯ ಕಾಲೇಜುಗಳಿದ್ದು, ಯುಜಿ (UG) ಸೀಟುಗಳು13,945, ಪಿಜಿ ಸೀಟುಗಳು 7,727 ಹಾಗೂ ಹೊಸದಾಗಿ 1,122 ಲಭ್ಯವಾಗಿವೆ. ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಸೀಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ, ಈ ಬಾರಿ ಮೆಡಿಕಲ್ ಕೌನ್ಸಿಲಿಂಗ್‌ನಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

