
ಶೀಘ್ರದಲ್ಲೇ ರಾಜ್ಯದಲ್ಲಿ ವೈಲ್ಡ್ ಲೈಫ್ ಫೊರೆನ್ಸಿಕ್ ಘಟಕ: ಸಚಿವ ಪ್ರಿಯಾಂಕ್ ಖರ್ಗೆ
ವೈಜ್ಞಾನಿಕ ನಿಖರತೆ ಮತ್ತು ತಾಂತ್ರಿಕ ಸಾಮರ್ಥ್ಯದ ಮೂಲಕ ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ರಾಜ್ಯದ ಎಫ್‌ಎಸ್‌ಎಲ್ ಇಡೀ ರಾಷ್ಟ್ರವೇ ಹೆಮ್ಮೆಪಡುವಂತಹ ಸಾಧನೆ ಮಾಡಿದೆ.
ದೇಶದ ಅಪರಾಧ ತನಿಖಾ ವ್ಯವಸ್ಥೆಯಲ್ಲಿ ಕರ್ನಾಟಕವು ಅತ್ಯಂತ ಪರಿಣಾಮಕಾರಿ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ವೈಜ್ಞಾನಿಕ ನಿಖರತೆ ಮತ್ತು ತಾಂತ್ರಿಕ ಸಾಮರ್ಥ್ಯದ ಮೂಲಕ ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ಎಫ್‌ಎಸ್‌ಎಲ್ ರಾಷ್ಟ್ರವೇ ಹೆಮ್ಮೆಪಡುವಂತಹ ಸಾಧನೆ ಮಾಡಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಕಚೇರಿಗೆ ಭೇಟಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ಎಫ್‌ಎಸ್‌ಎಲ್‌ನ ವಿಕಸನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಕೇವಲ ಒಂದು ಪ್ರಯೋಗಾಲಯವಾಗಿ ಉಳಿಯದೆ, ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವ ಅತ್ಯುತ್ತಮ ತನಿಖಾ ಸಂಸ್ಥೆಯಾಗಿ ಇದು ಬೆಳೆದಿದೆ ಎಂದು ಶ್ಲಾಘಿಸಿದರು.
ರಾಷ್ಟ್ರೀಯ ಮಾನ್ಯತೆ ಮತ್ತು ತಾಂತ್ರಿಕ ಸಾಧನೆ
ಎಫ್‌ಎಸ್‌ಎಲ್‌ಗೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಮಾನ್ಯತೆ ದೊರೆತಿದ್ದು, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಹೊಂದಿದೆ. ಸಚಿವರು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಜ್ಯದ ಡಿಜಿಟಲ್ ಮತ್ತು ಮೊಬೈಲ್ ಫೊರೆನ್ಸಿಕ್ ವಿಭಾಗಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ 'ಎಲೆಕ್ಟ್ರಾನಿಕ್ಸ್ ಎವಿಡೆನ್ಸ್ ಎಕ್ಸಾಮಿನರ್' ಸ್ಥಾನಮಾನ ದೊರೆತಿರುವುದರ ಬಗ್ಗೆ. ಇದು ದೇಶದ ಯಾವುದೇ ರಾಜ್ಯದ ಎಫ್‌ಎಸ್‌ಎಲ್ ವಿಭಾಗಕ್ಕೆ ಸಿಕ್ಕ ಅಪರೂಪದ ಗೌರವವಾಗಿದೆ. ಇದರ ಜೊತೆಗೆ, ಅತ್ಯುತ್ತಮ ಡಿಜಿಟಲ್ ಫೊರೆನ್ಸಿಕ್ ಸಾಮರ್ಥ್ಯಕ್ಕಾಗಿ ಸಂಸ್ಥೆಯು ಪ್ರತಿಷ್ಠಿತ ಡಿ.ಎಸ್.ಸಿ.ಐ ಪ್ರಶಸ್ತಿಯನ್ನು ಬಾಚಿಕೊಂಡಿರುವುದು ರಾಜ್ಯದ ತನಿಖಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕ ಎಫ್‌ಎಸ್‌ಎಲ್‌ನ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ ಪ್ರಕರಣಗಳೆಂದರೆ ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ನರೇಂದ್ರ ದಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಅವರ ಹತ್ಯಾಕಾಂಡಗಳು. ಈ ನಾಲ್ಕು ಪ್ರತ್ಯೇಕ ಪ್ರಕರಣಗಳ ನಡುವಿನ ವೈಜ್ಞಾನಿಕ ಮತ್ತು ಬಾಲಿಸ್ಟಿಕ್ (ಬಂದೂಕಿನ ಗುಂಡುಗಳ ಪರೀಕ್ಷೆ) ಸಂಪರ್ಕವನ್ನು ಪತ್ತೆಹಚ್ಚುವಲ್ಲಿ ಕರ್ನಾಟಕದ ವಿಧಿ ವಿಜ್ಞಾನಿಗಳು ತೋರಿದ ಚಾಕಚಕ್ಯತೆ ರಾಷ್ಟ್ರಮಟ್ಟದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ವನ್ಯಜೀವಿ ಫೊರೆನ್ಸಿಕ್ ಘಟಕದ ಘೋಷಣೆ
ರಾಜ್ಯದಲ್ಲಿ ದಿನೇ ದಿನೇ ವನ್ಯಜೀವಿ ಅಪರಾಧಗಳು ಮತ್ತು ಪ್ರಾಣಿಗಳ ಅಕ್ರಮ ಸಾಗಾಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ರಾಜ್ಯದಲ್ಲೇ ಮೊದಲ ಬಾರಿಗೆ ವೈಲ್ಡ್ ಲೈಫ್ ಫೊರೆನ್ಸಿಕ್ ಘಟಕ ಸ್ಥಾಪಿಸಲು ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರವೇ ಇದು ಕಾರ್ಯಾರಂಭ ಮಾಡಲಿದೆ. ಅರಣ್ಯ ಇಲಾಖೆಗೆ ಈ ಘಟಕವು ವನ್ಯಜೀವಿ ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ಕಾನೂನುಬದ್ಧ ಸಾಕ್ಷ್ಯಗಳನ್ನು ಒದಗಿಸಲು ಬಲವಾದ ಶಕ್ತಿಯಾಗಲಿದೆ. ಹಿಂದಿನ ದಿನಗಳಲ್ಲಿ ಫೊರೆನ್ಸಿಕ್ ವರದಿ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಿತ್ತು. ಆದರೆ, ಇಂದಿನ ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಬದಲಾವಣೆಗಳಿಂದಾಗಿ 40 ತಿಂಗಳು ತಗುಲುತ್ತಿದ್ದ ವರದಿಯನ್ನು ಈಗ ಕೇವಲ 1 ರಿಂದ 4 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಈ ಸಾಧನೆಯು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡಿದ್ದು, ವೈಜ್ಞಾನಿಕ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.
ಅಪರಾಧ ತನಿಖೆಯಲ್ಲಿ ವೇಗ, ನಿಖರತೆ ಮತ್ತು ಪಾರದರ್ಶಕತೆ ಎಂಬ ಮೂರು ಸೂತ್ರಗಳೊಂದಿಗೆ ಕರ್ನಾಟಕ ಸರ್ಕಾರ ಫೊರೆನ್ಸಿಕ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ತನಿಖಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ, ರಾಜ್ಯದ ತನಿಖಾ ವ್ಯವಸ್ಥೆಯನ್ನು ದೇಶಕ್ಕೆ ಮಾದರಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

