ಸಿಡಿದ ಸಿಎಂಗೆ ಜಯ: ಫಾರಂ-7 ಅಕ್ರಮ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಚುನಾವಣಾ ಆಯೋಗ
x

ಸಿಡಿದ ಸಿಎಂಗೆ ಜಯ: ಫಾರಂ-7 ಅಕ್ರಮ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಚುನಾವಣಾ ಆಯೋಗ

ರಾಜ್ಯಾದ್ಯಂತ ಉದ್ದೇಶಪೂರ್ವಕವಾಗಿ 50ರಿಂದ 60 ಲಕ್ಷ ಮತದಾರರ ಹೆಸರುಗಳನ್ನು ಫಾರಂ-7 ಮೂಲಕ ಅಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದರು.


Click the Play button to hear this message in audio format

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೀಗ ಬಹುದೊಡ್ಡ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು, ಫಾರಂ-7 ದುರ್ಬಳಕೆ ಖಂಡಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ಆಯೋಗದ ಕಚೇರಿ ಮುಂದೆ ಧರಣಿ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಸುಳ್ಳು ಮಾಹಿತಿ ನೀಡಿ ಫಾರಂ-7 ಸಲ್ಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಉದ್ದೇಶಪೂರ್ವಕವಾಗಿ 50ರಿಂದ 60 ಲಕ್ಷ ಮತದಾರರ ಹೆಸರುಗಳನ್ನು ಫಾರಂ-7 ಮೂಲಕ ಅಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅವರು, ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮತದಾರರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗುತ್ತಿದೆ ಎಂದಿದ್ದಾರೆ. ವಿಜಯಪುರ, ಬೆಳಗಾವಿ, ಮೈಸೂರು, ಭಾಲ್ಕಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಳಾಸ ಹಾಗೂ ಗುರುತಿನ ಚೀಟಿ ಸಂಖ್ಯೆಗಳು ಮೊದಲೇ ಮುದ್ರಿತವಾಗಿರುವ ಅರ್ಜಿಗಳನ್ನು ಸಗಟಾಗಿ ಸಲ್ಲಿಸಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ 14 ಸಾವಿರಕ್ಕೂ ಅಧಿಕ ಹಾಗೂ ಬಬಲೇಶ್ವರದಲ್ಲಿ ಕೇವಲ ಆರು ಮಂದಿ ಸೇರಿ 1,600ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸಚಿವ ಈಶ್ವರ ಖಂಡ್ರೆ ಅವರ ಭಾಲ್ಕಿ ಕ್ಷೇತ್ರದಲ್ಲಿ ಒಂದೇ ದಿನ 3,244 ಅರ್ಜಿಗಳು ಸಲ್ಲಿಕೆಯಾಗಿದ್ದು, ಒಬ್ಬನೇ ವ್ಯಕ್ತಿ 241 ಅರ್ಜಿಗಳನ್ನು ನೀಡಿದ್ದಾನೆ ಎಂದು ಸಿಎಂ ವಿವರಿಸಿದ್ದಾರೆ. ಈ ಅಕ್ರಮವನ್ನು ತಕ್ಷಣವೇ ತಡೆಯಬೇಕು ಹಾಗೂ ನಕಲಿ ಅರ್ಜಿ ಸಲ್ಲಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಸಿಎಂ ಅವರು ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ ಸೇರಿದಂತೆ ಹಲವು ಮುಖಂಡರೊಂದಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಕಚೇರಿಗೆ ಮುತ್ತಿಗೆ ಹಾಕಿ ಆವರಣದಲ್ಲಿಯೇ ಧರಣಿ ನಡೆಸಿದರು.

ಕ್ರಮದ ಎಚ್ಚರಿಕೆ ನೀಡಿದ ಆಯೋಗ

ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಚಿವರ ನೇರ ಧರಣಿ ಹಾಗೂ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ತಕ್ಷಣವೇ ಎಚ್ಚೆತ್ತು ಕಾರ್ಯಪ್ರವೃತ್ತವಾಗಿದೆ. ಫಾರಂ-7 ಅರ್ಜಿಗಳ ಪೈಕಿ ಹಲವು ನೈಜ ಆಕ್ಷೇಪಣೆಗಳಲ್ಲ, ಸುಳ್ಳು ಮಾಹಿತಿ ಮತ್ತು ತಪ್ಪು ಘೋಷಣೆಗಳಿಂದ ಕೂಡಿವೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಕಠಿಣ ಕ್ರಮದ ಆದೇಶ ಹೊರಡಿಸಿದೆ. ಫಾರಂ-6, ಫಾರಂ-6ಎ, ಫಾರಂ-7 ಹಾಗೂ ಫಾರಂ-8ರಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿದರೆ 1950ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 31ರ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಆಯೋಗದ ಹೊಣೆಗಾರಿಕೆ

ಚುನಾವಣಾ ಆಯೋಗವು ಕಠಿಣ ಕ್ರಮದ ಆದೇಶ ಹೊರಡಿಸಿದ್ದರೂ, ಅರ್ಜಿ ಸಲ್ಲಿಸಿದ ತಕ್ಷಣವೇ ಯಾರನ್ನೂ ಅಪರಾಧಿ ಎಂದು ಪರಿಗಣಿಸುವಂತಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಫಾರಂ-7 ಎನ್ನುವುದು ಮತದಾರರ ಪಟ್ಟಿಯಲ್ಲಿರುವ ಅನರ್ಹ ಅಥವಾ ಮೃತ ವ್ಯಕ್ತಿಗಳ ಹೆಸರನ್ನು ತೆಗೆದುಹಾಕಲು ಇರುವ ಕಾನೂನುಬದ್ಧ ಮಾರ್ಗವಾಗಿದೆ. ಹೀಗಾಗಿ, ಅರ್ಜಿಗಳ ಸಂಖ್ಯೆಯನ್ನು ಮಾತ್ರ ಆಧರಿಸಿ ಅವುಗಳನ್ನು ನಕಲಿ ಎಂದು ನಿರ್ಧರಿಸಲಾಗುವುದಿಲ್ಲ. ಪ್ರತಿ ಅರ್ಜಿಯ ಸತ್ಯಾಸತ್ಯತೆಯನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ, ನಿಯಮಾನುಸಾರ ವಿಚಾರಣೆ ನಡೆಸಿದ ಬಳಿಕವೇ ಎಫ್‌ಐಆರ್ ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಒಟ್ಟಾರೆಯಾಗಿ, ಸರ್ಕಾರದ ಧರಣಿಯ ಬಳಿಕ ಹೊರಬಿದ್ದಿರುವ ಈ ಕಠಿಣ ಆದೇಶವು ಮತದಾರರ ಪಟ್ಟಿ ಪರಿಷ್ಕರಣೆ ವಿವಾದದ ದಿಕ್ಕನ್ನು ಬದಲಿಸಿದ್ದು, ನೈಜ ಮತದಾರರ ಹಕ್ಕು ರಕ್ಷಣೆ ಹಾಗೂ ದುರುದ್ದೇಶಪೂರಿತ ಅರ್ಜಿಗಳ ಹಿಂದಿರುವವರ ಪತ್ತೆಹಚ್ಚುವಿಕೆ ಈಗ ಚುನಾವಣಾ ಅಧಿಕಾರಿಗಳ ಮುಂದಿರುವ ಅತಿದೊಡ್ಡ ಸವಾಲಾಗಿದೆ.

Read More
Next Story