
ಕಾಡಿನಲ್ಲಿ ಪ್ರವಾಸಿಗರ ಓಡಾಟಕ್ಕೆ ಬ್ರೇಕ್ : ಟ್ರೆಕ್ಕಿಂಗ್ ಸ್ಥಗಿತಗೊಳಿಸಿದ ಸರ್ಕಾರ
ಕಾಡಿನಲ್ಲಿ ನಡೆಯುವ ಚಟುವಟಿಕೆಗಳು ನಿಯಮಬದ್ಧವಾಗಿರಬೇಕು ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯು ಎಸ್‌ಒಪಿ ರೂಪಿಸಿದೆ. ಆದರೆ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲದಿರುವುದು ಕಂಡುಬಂದಿದೆ.
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನವ- ವನ್ಯಜೀವಿ ಸಂಘರ್ಷ ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಅರಣ್ಯ ಇಲಾಖೆಯು ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ. ರಾಜ್ಯಾದ್ಯಂತ ಕಾಡಿನಲ್ಲಿ ನಡೆಯುವ ಎಲ್ಲಾ ರೀತಿಯ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಸುತ್ತೋಲೆ ಹೊರಡಿಸಿದೆ.
ನಾಗಮಲೆ ಅರಣ್ಯ ಪ್ರದೇಶದ ಎಂ.ಎಂ. ಹಿಲ್ಸ್ (ಮಲೆ ಮಹದೇಶ್ವರ ಬೆಟ್ಟ) ವನ್ಯಜೀವಿ ವಿಭಾಗದಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆ ಇದಕ್ಕೆ ಕಾರಣವಾಗಿದೆ. ಚಿರತೆಯೊಂದರ ದಾಳಿಯಿಂದಾಗಿ 10 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆಯು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯು ಅರಣ್ಯ ಪ್ರದೇಶಗಳಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಎಷ್ಟು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ. ಚಿರತೆ, ಹುಲಿ, ಆನೆ ಮತ್ತು ಕರಡಿಗಳಂತಹ ವನ್ಯಪ್ರಾಣಿಗಳು ಮುಕ್ತವಾಗಿ ಸಂಚರಿಸುವ ಮಾರ್ಗಗಳಲ್ಲಿ ಪ್ರವಾಸಿಗರು ಮತ್ತು ಟ್ರೆಕ್ಕರ್‌ಗಳ ಓಡಾಟವು ಪ್ರಾಣಾಪಾಯಕ್ಕೆ ದಾರಿಯಾಗಬಹುದು ಎಂಬುದನ್ನು ಇಲಾಖೆ ಮನಗಂಡಿದೆ. ಸಾರ್ವಜನಿಕರ ಜೀವ ರಕ್ಷಣೆಯೇ ಸರ್ಕಾರದ ಆದ್ಯತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವನ್ಯಜೀವಿಗಳ ಸಂಚಾರವಿರುವ ಎಲ್ಲಾ ಟ್ರೆಕ್ಕಿಂಗ್ ಮಾರ್ಗಗಳನ್ನು ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡಲಾಗಿದೆ.
ಎಸ್‌ಒಪಿ ಅನುಷ್ಠಾನದ ಕಡ್ಡಾಯ ಸೂಚನೆ
ಕೇವಲ ಭದ್ರತಾ ಕಾರಣಗಳಷ್ಟೇ ಅಲ್ಲದೆ, ಪ್ರವಾಸೋದ್ಯಮದ ಹೆಸರಿನಲ್ಲಿ ಕಾಡಿನಲ್ಲಿ ನಡೆಯುವ ಚಟುವಟಿಕೆಗಳು ನಿಯಮಬದ್ಧವಾಗಿರಬೇಕು ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯು ಎಸ್‌ಒಪಿ ರೂಪಿಸಿದೆ. ಆದರೆ, ಬಹುತೇಕ ಅರಣ್ಯ ವಲಯಗಳಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕೆಲವೊಂದು ಸೂಚನೆಗಳನ್ನು ನೀಡಿದೆ. ಇಲಾಖೆ ಮತ್ತು ಕರ್ನಾಟಕ ಪರಿಸರ-ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಮಾರ್ಗದರ್ಶನದಲ್ಲಿ ರೂಪಿಸಲಾದ ಎಸ್‌ಒಪಿಯನ್ನು ಪ್ರತಿಯೊಂದು ಅರಣ್ಯ ವಿಭಾಗವು ಕಡ್ಡಾಯವಾಗಿ ಪಾಲಿಸಬೇಕು. ಟ್ರೆಕ್ಕಿಂಗ್ ನಡೆಸುವ ಸ್ಥಳಗಳಲ್ಲಿ ಎಲ್ಲಾ ಸುರಕ್ಷತಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲು ಗಡುವು ನೀಡಲಾಗಿತ್ತು. ಆ ಗಡುವಿನೊಳಗೆ ಕೆಲಸ ಪೂರ್ಣಗೊಳಿಸದ ಎಲ್ಲಾ ಕಡೆಗಳಲ್ಲಿ ಟ್ರೆಕ್ಕಿಂಗ್‌ಗೆ ತಕ್ಷಣವೇ ತಡೆ ನೀಡಲಾಗಿದೆ. ಸಂಬಂಧಪಟ್ಟ ವಿಭಾಗೀಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಂಡು, ಈ ಸಂಬಂಧ ಪ್ರಮಾಣಪತ್ರವನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಸಲ್ಲಿಸಿದ ನಂತರವೇ ಮುಂದಿನ ಆದೇಶದವರೆಗೆ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ಪುನರಾರಂಭಿಸಲು ಅವಕಾಶ ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅರಣ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ, ಬಿ.ಆರ್.ಟಿ., ಭದ್ರಾ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು ಮತ್ತು ಎಲ್ಲಾ ವನ್ಯಜೀವಿ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಈ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪ್ರವಾಸಿಗರು ಕಾಡಿನೊಳಗೆ ಪ್ರವೇಶಿಸದಂತೆ ತಡೆಯಲು ಚೆಕ್ ಪೋಸ್ಟ್‌ಗಳನ್ನು ಬಲಪಡಿಸಬೇಕು. ಸ್ಥಳೀಯ ಗೈಡ್‌ಗಳಿಗೆ ಮತ್ತು ಪ್ರವಾಸಿ ಏಜೆನ್ಸಿಗಳಿಗೆ ಈ ಆದೇಶದ ಬಗ್ಗೆ ಅರಿವು ಮೂಡಿಸಬೇಕು ಮತ್ತು ಅರಣ್ಯದ ಒಳಭಾಗದಲ್ಲಿ ವನ್ಯಜೀವಿಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಹೇಳಿದೆ. ಪ್ರಸ್ತುತ ಜಾರಿಗೆ ತಂದಿರುವ ಈ ನಿಯಮಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಕ್ರಮವಾಗಿದೆ. ಅರಣ್ಯ ಇಲಾಖೆಯ ಮುಂದಿನ ಆದೇಶ ಬರುವವರೆಗೆ ಯಾವುದೇ ಟ್ರೆಕ್ಕಿಂಗ್ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸಾರ್ವಜನಿಕರಿಗೆ ಕಠಿಣ ಸೂಚನೆ ನೀಡಲಾಗಿದೆ.

