ವನ್ಯಜೀವಿ ಸಫಾರಿಯಲ್ಲಿ ಇನ್ನು ಮುಂದೆ ತೆರೆದ ವಾಹನಗಳಿಲ್ಲ: ಸಚಿವರ ಕಠಿಣ ನಿರ್ದೇಶನ
x

ವನ್ಯಜೀವಿ ಸಫಾರಿಯಲ್ಲಿ ಇನ್ನು ಮುಂದೆ ತೆರೆದ ವಾಹನಗಳಿಲ್ಲ: ಸಚಿವರ ಕಠಿಣ ನಿರ್ದೇಶನ

ರಾಜ್ಯದಲ್ಲಿ ತೆರೆದ ವಾಹನಗಳಲ್ಲಿ ಸಫಾರಿ ನಡೆಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ತೆರೆದ ವಾಹನ ಬದಲಿಗೆ ಸಂಪೂರ್ಣ ಸುರಕ್ಷಿತವಾದ ಬಸ್ ಸಫಾರಿಗಳನ್ನು ನಡೆಸಲು ಸರ್ಕಾರ ನಿರ್ದೇಶಿಸಿದೆ.


Click the Play button to hear this message in audio format

ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿಧಾಮಗಳಲ್ಲಿ ನಡೆಯುವ ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಲು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ಆಘಾತಕಾರಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಇನ್ನು ಮುಂದೆ ಸಫಾರಿ ವಾಹನಗಳ ವಿನ್ಯಾಸದಲ್ಲಿ ಆಮೂಲಾಗ್ರ ಬದಲಾವಣೆ ತರಲು ನಿರ್ಧರಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ದುಬಾರೆ ಆನೆ ಶಿಬಿರದಲ್ಲಿ ನಡೆದ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ವನ್ಯಜೀವಿಗಳ ನಡವಳಿಕೆಗಳು ಅನಿರೀಕ್ಷಿತವಾಗಿರುತ್ತವೆ ಎಂಬುದನ್ನು ಈ ಘಟನೆ ಮತ್ತೆ ಸಾಬೀತುಪಡಿಸಿದೆ. ಪ್ರವಾಸಿಗರ ಭದ್ರತೆಯೇ ಪ್ರಥಮ ಆದ್ಯತೆಯಾಗಬೇಕು ಎಂದು ಮನಗಂಡ ಅರಣ್ಯ ಇಲಾಖೆ, ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರುತ್ತಿದೆ.

ಸಫಾರಿ ವಾಹನಗಳ ಬದಲಾವಣೆ: ತೆರೆದ ಕ್ಯಾಂಪರ್‌ಗಳಿಗೆ ಗುಡ್‌ ಬೈ

ರಾಜ್ಯದ ಐದು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹಾಗೂ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಮುಂತಾದೆಡೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿಯವರೆಗೆ ತೆರೆದ ಕ್ಯಾಂಪರ್ ವಾಹನಗಳಲ್ಲಿ ಸಫಾರಿ ನಡೆಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ತೆರೆದ ಕ್ಯಾಂಪರ್ ಬದಲಿಗೆ ಸಂಪೂರ್ಣ ಸುರಕ್ಷಿತವಾದ ಬಸ್ ಸಫಾರಿಗಳನ್ನು ನಡೆಸಲು ಸಚಿವರು ನಿರ್ದೇಶಿಸಿದ್ದಾರೆ. ಹಾಲಿ ಬಳಕೆಯಲ್ಲಿರುವ ಕ್ಯಾಂಪರ್‌ಗಳನ್ನೇ ಬಳಸಬೇಕಾದ ಅನಿವಾರ್ಯತೆ ಇದ್ದಲ್ಲಿ, ಅವುಗಳಿಗೆ ಕಬ್ಬಿಣದ ಸರಳುಗಳಿಂದ ಕೂಡಿದ ಜಾಲರಿಗಳನ್ನು ಅಳವಡಿಸಬೇಕು. ಇಲ್ಲವೇ ಒಡೆಯಲಾಗದ ಗಾಜಿನ ಕಿಟಕಿಗಳನ್ನು ಅಳವಡಿಸಿ ಸುರಕ್ಷತೆಯನ್ನು ಹೆಚ್ಚಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ತುರ್ತು ಚಿಕಿತ್ಸೆ ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ

ಪ್ರವಾಸಿಗರಿಗೆ ಕೇವಲ ಸಫಾರಿ ಮಾತ್ರವಲ್ಲದೆ, ಅನಿರೀಕ್ಷಿತ ಅಪಾಯಗಳು ಎದುರಾದಾಗ ತಕ್ಷಣದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಫಾರಿ ವಾಹನದಲ್ಲಿ ಸುಸಜ್ಜಿತ ಪ್ರಥಮ ಚಿಕಿತ್ಸಾ ಕಿಟ್ ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ಸಫಾರಿ ಕೇಂದ್ರಗಳ ಸಮೀಪದಲ್ಲಿ ಆಂಬ್ಯುಲೆನ್ಸ್ ವಾಹನ ಸದಾ ಸಿದ್ಧವಾಗಿರಬೇಕು ಎಂದು ಸೂಚಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಉದ್ಭವಿಸಿದರೆ ಪ್ರಾಣಾಪಾಯ ತಪ್ಪಿಸಲು ಈ ವ್ಯವಸ್ಥೆ ಅತ್ಯಗತ್ಯ ಎಂದು ತಿಳಿಸಲಾಗಿದೆ.

ಅರಣ್ಯದೊಳಗೆ ಇಳಿಯಲು ನಿಷೇಧ

ಸಫಾರಿಯ ವೇಳೆ ಪ್ರವಾಸಿಗರು ಅರಣ್ಯದೊಳಗೆ ವಾಹನದಿಂದ ಇಳಿಯುವುದು ಅಥವಾ ವನ್ಯಜೀವಿಗಳ ಹತ್ತಿರಕ್ಕೆ ಹೋಗುವ ಸಾಹಸ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರವಾಸಿಗರ ಕುತೂಹಲವು ಕೆಲವೊಮ್ಮೆ ಪ್ರಾಣಾಪಾಯಕ್ಕೆ ದಾರಿ ಮಾಡಿಕೊಡಬಹುದು. ಹಾಗಾಗಿ, ವಾಹನದಿಂದ ಕೆಳಗಿಳಿಯದಂತೆ ನಿರ್ಬಂಧ ಹೇರಲು ಸಚಿವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Read More
Next Story