ಕಾಡುಗಳ್ಳರಿಗೆ ಕಡಿವಾಣ; ಬೆಲ್ಜಿಯನ್ ಸ್ನಿಫರ್ ಡಾಗ್ ಪಡೆ ನಿಯೋಜನೆಗೆ ನಿರ್ಧಾರ
x

ಕಾಡುಗಳ್ಳರಿಗೆ ಕಡಿವಾಣ; ಬೆಲ್ಜಿಯನ್ ಸ್ನಿಫರ್ ಡಾಗ್ ಪಡೆ ನಿಯೋಜನೆಗೆ ನಿರ್ಧಾರ

ಅರಣ್ಯ ಅಪರಾಧ ನಿಯಂತ್ರಿಸಲು ಸೂಕ್ತ ತರಬೇತಿ ಪಡೆದ ಸ್ನಿಫರ್ ಡಾಗ್‌ಗಳನ್ನು ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳ ಕಾವಲಿಗೆ ನಿಯೋಜಿಸಲಾಗುತ್ತಿದೆ.


ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಗಳ್ಳರ ಅಟ್ಟಹಾಸ ತಡೆಗೆ ಮುಂದಾಗಿರುವ ಅರಣ್ಯ ಇಲಾಖೆ, ಕಾಡಿನ ರಕ್ಷಣೆಗಾಗಿ ಬೆಲ್ಜಿಯಂ ಸ್ನಿಫರ್ ಡಾಗ್ ಪಡೆಯನ್ನು ನಿಯೋಜಿಸಲು ತೀರ್ಮಾನಿಸಿದೆ.

ಹನೂರು ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಬೇಟೆಗಾರರು ಮೃತಪಟ್ಟ ಬಳಿಕ ಕಾಡಿನಲ್ಲಿ ಕಳ್ಳಬೇಟೆ ಹಾಗೂ ಅಕ್ರಮ ಚಟುವಟಿಕೆ ಇನ್ನಷ್ಟು ಹೆಚ್ಚಾಗಿರುವುದು ಅರಣ್ಯ ಸಿಬ್ಬಂದಿಗೆ ತಲೆನೋವು ತಂದಿದೆ. ಚಾಮರಾಜನಗರ ಜಿಲ್ಲೆ ಒಂದರಲ್ಲೇ 40ಕ್ಕೂ ಹೆಚ್ಚು ಬೇಟೆಗಾರರು ಸಕ್ರಿಯರಾಗಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಿಶೇಷ ತರಬೇತಿ ಪಡೆದ ‘ಬೆಲ್ಜಿಯನ್ ಸ್ನಿಫರ್ ಡಾಗ್’ ಪಡೆ ನಿಯೋಜಿಸಲು ನಿರ್ಧರಿಸಿದೆ.

ಕ್ಯಾಂಪ್‌ನಲ್ಲಿ ಶ್ವಾನಗಳಿಗೆ ತರಬೇತಿ

ರಾಜ್ಯದ ಅರಣ್ಯಗಳಲ್ಲಿ ಹೆಚ್ಚುತ್ತಿರುವ ಕಳ್ಳಬೇಟೆ ಮತ್ತು ಕಾಡುಗಳ್ಳತನ ನಿಯಂತ್ರಿಸುವ ಸದುದ್ದೇಶದಿಂದ ಅರಣ್ಯ ಇಲಾಖೆ ಈ ಮಹತ್ವದ ಹೆಜ್ಜೆ ಇಟ್ಟಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಅರಣ್ಯ ಕ್ಯಾಂಪ್ನಲ್ಲಿ ಒಟ್ಟು 10 ಹೆಣ್ಣು ಬೆಲ್ಜಿಯನ್ ಸ್ನಿಫರ್ ಶ್ವಾನಗಳಿಗೆ ನುರಿತ ತಜ್ಞರಿಂದ ವಿಶೇಷ ತರಬೇತಿ ನೀಡಲಾಗುತ್ತಿದೆ. ಕಳ್ಳಬೇಟೆಗಾರರ ಹೆಜ್ಜೆ ಗುರುತು ಪತ್ತೆ, ಅರಣ್ಯ ಅಪರಾಧ ತಡೆಯಲು ಈ ಶ್ವಾನದಳವು ಪ್ರಮುಖ ಅಸ್ತ್ರವಾಗಲಿದೆ.

5 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಶ್ವಾನ ನಿಯೋಜನೆ

ಅರಣ್ಯ ಅಪರಾಧ ನಿಯಂತ್ರಿಸಲು ಸೂಕ್ತ ತರಬೇತಿ ಪಡೆದ ಸ್ನಿಫರ್ ಡಾಗ್‌ಗಳನ್ನು ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳ ಕಾವಲಿಗೆ ನಿಯೋಜಿಸಲಾಗುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಲಾ ಐದು ಶ್ವಾನಗಳನ್ನು ಕಾಡು ರಕ್ಷಣೆಗಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ.

ಅಪರಾಧ ಪತ್ತೆಯಲ್ಲಿ ಸ್ನಿಫರ್‌ ಡಾಗ್ ಮುಂಚೂಣಿ

ಬೆಲ್ಜಿಯನ್ ಸ್ನಿಫರ್ ತಳಿಯ ಶ್ವಾನಗಳು ಅತ್ಯಂತ ತೀಕ್ಷ್ಣ ವಾಸನೆ ಗ್ರಹಿಸುವ ಶಕ್ತಿ ಹಾಗೂ ಅತಿ ವೇಗವಾಗಿ ಓಡುವ ಸಾಮರ್ಥ್ಯಕ್ಕೆ ಹೆಸರಾಗಿವೆ. ಅಪರಾಧ ಪ್ರಕರಣಗಳು ಮತ್ತು ಶಂಕಿತರ ಸುಳಿವು ಪತ್ತೆ ಹಚ್ಚುವಿಕೆಯಲ್ಲಿ ಈ ಶ್ವಾನಗಳು ಸದಾ ಮುಂಚೂಣಿಯಲ್ಲಿ ಇರಲಿವೆ.

Read More
Next Story