
ಪೆಟ್ರೋಲ್‌ನಲ್ಲಿ ಮಿತಿ ಮೀರಿದ ಎಥೆನಾಲ್: ವಾಹನ ಸವಾರರಿಗೆ ಪರಿಹಾರ ಒದಗಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ
ರಾಜ್ಯದ ಬೆಂಗಳೂರು ನಗರ ಸೇರಿದಂತೆ ಏಳು ಜಿಲ್ಲೆಗಳಿಂದ ಐಒಸಿಎಲ್ (IOCL), ಎಚ್‌ಪಿಸಿಎಲ್ (HPCL), ಬಿಪಿಸಿಎಲ್ (BPCL) ಹಾಗೂ ಶೆಲ್ ಸೇರಿದಂತೆ ಪ್ರಮುಖ ತೈಲ ಕಂಪನಿಗಳಿಗೆ ಸೇರಿದ ಒಟ್ಟು 63 ಪೆಟ್ರೋಲ್ ಮಾದರಿಗಳನ್ನು ಸರ್ಕಾರ ಸಂಗ್ರಹಿಸಿತ್ತು.
ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಬೆರೆಸಲಾಗುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಕರ್ನಾಟಕ ಸರ್ಕಾರ ಬಹಿರಂಗಪಡಿಸಿದೆ. ಪೆಟ್ರೋಲ್‌ನಲ್ಲಿ ಗರಿಷ್ಠ ಶೇಕಡಾ 20ರಷ್ಟು (E20) ಎಥೆನಾಲ್ ಬೆರೆಸಬೇಕಾದ ನಿಯಮವಿದ್ದರೂ, ತೈಲ ಕಂಪನಿಗಳು ಶೇಕಡಾ 31.2ರವರೆಗೂ ಎಥೆನಾಲ್ ಮಿಶ್ರಣ ಮಾಡುತ್ತಿರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ. ಇದರಿಂದ ವಾಹನ ಸವಾರರಿಗೆ ಭಾರಿ ಆರ್ಥಿಕ ನಷ್ಟವಾಗುತ್ತಿದ್ದು, ಈ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ತಕ್ಷಣವೇ ಪರಿಹಾರ ನಿಧಿಯನ್ನು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿದೆ.
ಖಾಸಗಿ ಪ್ರಯೋಗಾಲಯದ ವರದಿಯಲ್ಲಿ ಸತ್ಯ ಬಹಿರಂಗ
ರಾಜ್ಯದ ಬೆಂಗಳೂರು ನಗರ ಸೇರಿದಂತೆ ಏಳು ಜಿಲ್ಲೆಗಳಿಂದ ಐಒಸಿಎಲ್ (IOCL), ಎಚ್‌ಪಿಸಿಎಲ್ (HPCL), ಬಿಪಿಸಿಎಲ್ (BPCL) ಹಾಗೂ ಶೆಲ್ ಸೇರಿದಂತೆ ಪ್ರಮುಖ ತೈಲ ಕಂಪನಿಗಳಿಗೆ ಸೇರಿದ ಒಟ್ಟು 63 ಪೆಟ್ರೋಲ್ ಮಾದರಿಗಳನ್ನು ಸರ್ಕಾರ ಸಂಗ್ರಹಿಸಿತ್ತು. ಆರಂಭದಲ್ಲಿ ಈ ಮಾದರಿಗಳನ್ನು ಆಯಾ ತೈಲ ಕಂಪನಿಗಳ ಪ್ರಯೋಗಾಲಯಗಳಿಗೇ ಕಳುಹಿಸಿ ಎಥೆನಾಲ್ ಪ್ರಮಾಣದ ಬಗ್ಗೆ ಸ್ಪಷ್ಟನೆ ಕೇಳಲಾಗಿತ್ತು. ಆದರೆ ಕಂಪನಿಗಳಿಂದ ನಿಖರವಾದ ಉತ್ತರ ಬಾರದ ಹಿನ್ನೆಲೆಯಲ್ಲಿ, ಎನ್‌ಎಬಿಎಲ್ (NABL) ಮಾನ್ಯತೆ ಪಡೆದ ಹಾಗೂ ಐಎಸ್‌ಒ (ISO) ಪ್ರಮಾಣೀಕೃತ ಬೆಂಗಳೂರಿನ ಶ್ರೀರಾಮ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಖಾಸಗಿ ಪ್ರಯೋಗಾಲಯದಲ್ಲಿ ಸ್ವತಂತ್ರವಾಗಿ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷಾ ವರದಿಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಐಒಸಿಎಲ್ ಪೆಟ್ರೋಲ್‌ನಲ್ಲಿ ಗರಿಷ್ಠ ಶೇಕಡಾ 31.2ರಷ್ಟು ಎಥೆನಾಲ್ ಪತ್ತೆಯಾಗಿದೆ. ಅದೇ ರೀತಿ ಎಚ್‌ಪಿಸಿಎಲ್‌ನ ಎಂಎಸ್-ಪವರ್ ಪೆಟ್ರೋಲ್‌ನಲ್ಲಿ ಶೇಕಡಾ 30.5, ಬಿಪಿಸಿಎಲ್‌ನ ಸ್ಪೀಡ್ ಪೆಟ್ರೋಲ್‌ನಲ್ಲಿ ಶೇಕಡಾ 26.5, ನಯಾರಾದಲ್ಲಿ ಶೇಕಡಾ 26.1 ಹಾಗೂ ಶೆಲ್ ಪೆಟ್ರೋಲ್‌ನಲ್ಲಿ ಶೇಕಡಾ 25.5ರಷ್ಟು ಎಥೆನಾಲ್ ಇರುವುದು ದೃಢಪಟ್ಟಿದೆ. ಈ ಮೂಲಕ ಶೇಕಡಾ 20ರಷ್ಟು ಎಥೆನಾಲ್ ಮತ್ತು ಶೇಕಡಾ 80ರಷ್ಟು ಪೆಟ್ರೋಲ್ ಇರಬೇಕಾದ ಇ20 (E20) ಮಾನದಂಡವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.
ವಾಹನ ಸವಾರರಿಗೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟ
ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಬೆರೆಸುವುದರಿಂದ ಇಂಧನದ ಗುಣಮಟ್ಟ ಕುಸಿಯಲಿದ್ದು, ಇದು ವಾಹನಗಳ ಮೈಲೇಜ್ ಅನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಹಾಗೂ ಎಂಜಿನ್ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ರಾಜ್ಯ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಅಂದಾಜು ನಷ್ಟದ ಲೆಕ್ಕಾಚಾರವನ್ನು ನೀಡಿರುವ ಸರ್ಕಾರ, ಅತಿಯಾದ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕೇವಲ ಶೇಕಡಾ 10ರಷ್ಟು ಕಡಿಮೆಯಾದರೂ ಸವಾರರಿಗೆ ವಾರ್ಷಿಕವಾಗಿ ಬರೋಬ್ಬರಿ 62,000 ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟ ಉಂಟಾಗಲಿದೆ. ಇದರ ಜೊತೆಗೆ, ವಾಹನಗಳ ಬಿಡಿಭಾಗಗಳ ಸವೆತ ಹಾಗೂ ಸರ್ವಿಸಿಂಗ್ ವೆಚ್ಚವಾಗಿ ಹೆಚ್ಚುವರಿಯಾಗಿ 39,000 ಕೋಟಿ ರೂಪಾಯಿಗಳಷ್ಟು ಹೊರೆ ಬೀಳಲಿದೆ ಎಂದು ವಿವರಿಸಿದೆ.
ಪರಿಹಾರ ನಿಧಿ ಸ್ಥಾಪನೆಗೆ ಸಚಿವ ರಿಜ್ವಾನ್ ಅರ್ಷದ್ ಆಗ್ರಹ
ಮಿತಿ ಮೀರಿದ ಎಥೆನಾಲ್ ಮಿಶ್ರಣದಿಂದ ವಾಹನ ಸವಾರರು ಎದುರಿಸುತ್ತಿರುವ ನಷ್ಟವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ. ಗ್ರಾಹಕರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸಲು ಮತ್ತು ಅವರಿಗೆ ಸೂಕ್ತ ಪರಿಹಾರ ಒದಗಿಸಲು ಕೇಂದ್ರವು ಪ್ರತ್ಯೇಕ ಪರಿಹಾರ ನಿಧಿಯನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಪೂರೈಕೆಯಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಖರವಾಗಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರ ತಕ್ಷಣವೇ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ.

