
ಧಾತುರಾ ಹಣ್ಣು-ಬೀಜ ಮಾರಾಟದ ವಿರುದ್ಧ ಕರ್ನಾಟಕ FDA ಕಠಿಣ ಕ್ರಮ
ವಿಷಕಾರಿ ದತ್ತೂರಿ ಮಾರಾಟ: ಅಮೆಜಾನ್, ಬಿಗ್ ಬಾಸ್ಕೆಟ್, ಸ್ವಿಗ್ಗಿ, ಇನ್ಸ್ಟಾಗ್ರಾಮ್ ಲೈಸೆನ್ಸ್ ಅಮಾನತು
ವಿಷಕಾರಿ ದತ್ತೂರಿ ಮಾರಾಟಕ್ಕೆ ಕರ್ನಾಟಕ FDA ಬ್ರೇಕ್ ಹಾಕಿದ್ದು, ಮಾನವ ಸೇವನೆಗಾಗಿ ಉತ್ಪನ್ನಗಳ ಲಿಸ್ಟಿಂಗ್ ಮತ್ತು ಜಾಹೀರಾತು ತೆರವುಗೊಳಿಸುವಂತೆ ಅಮೆಜಾನ್, ಬಿಗ್ ಬಾಸ್ಕೆಟ್, ಸ್ವಿಗ್ಗಿ -Instamartಗೆ ಸೂಚಿಸಿದೆ.
ಆನ್‌ಲೈನ್ ವೇದಿಕೆಗಳಲ್ಲಿ ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಆಹಾರ ಹಾಗೂ ಮಾನವ ಬಳಕೆಗೆ ಮಾರಾಟ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ಗೆ ನೀಡಲಾಗಿದ್ದ ಆಹಾರ ಪರವಾನಗಿ ಹಾಗೂ ನೋಂದಣಿಗಳನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ.
ದತ್ತೂರಿ ಹಣ್ಣು ಮತ್ತು ಬೀಜಗಳು ವಿಷಕಾರಿಯಾಗಿದ್ದು, ಅವುಗಳ ಸೇವನೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟಾಗಬಹುದು ಎಂದು ಎಫ್‌ಡಿಎ ತಿಳಿಸಿದೆ. ಹೀಗಾಗಿ ಮಾನವ ಸೇವನೆಗಾಗಿ ಧಾತುರಾ ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲ ಆನ್‌ಲೈನ್ ಲಿಸ್ಟಿಂಗ್‌ಗಳು ಮತ್ತು ಜಾಹೀರಾತುಗಳನ್ನು ತಕ್ಷಣ ತೆಗೆದುಹಾಕುವಂತೆ ಮೂರು ಇ-ಕಾಮರ್ಸ್ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಇದಲ್ಲದೆ ಧಾತುರಾ ಉತ್ಪನ್ನಗಳನ್ನು ಆಹಾರವಾಗಿ ಮಾರಾಟ, ವಿತರಣೆ ಮತ್ತು ಪ್ರದರ್ಶಿಸುವುದನ್ನೂ ತಕ್ಷಣ ನಿಲ್ಲಿಸುವಂತೆ ಇಲಾಖೆ ಆದೇಶಿಸಿದೆ. ಆನ್‌ಲೈನ್ ವೇದಿಕೆಗಳಿಗೆ ಧಾತುರಾ ಉತ್ಪನ್ನಗಳನ್ನು ಪೂರೈಸುತ್ತಿದ್ದ ಮಾರಾಟಗಾರರು ಹಾಗೂ ಸಂಸ್ಥೆಗಳ ಪರವಾನಗಿ ಮತ್ತು ನೋಂದಣಿಗಳನ್ನು ಅಮಾನತುಗೊಳಿಸಲಾಗಿದೆ.
ಕೆಲವು ಪ್ಯಾಕೆಟ್‌ಗಳಲ್ಲಿ ಎಫ್‌ಎಸ್‌ಎಸ್‌ಎಐ ಸಂಖ್ಯೆ ಪತ್ತೆ
ಇಲಾಖೆಯ ತನಿಖೆಯಲ್ಲಿ ಕೆಲವು ದತ್ತೂರಿ ಹಣ್ಣು ಮತ್ತು ಬೀಜಗಳ ಪ್ಯಾಕೆಟ್‌ಗಳ ಮೇಲೆ ಎಫ್‌ಎಸ್‌ಎಸ್‌ಎಐ ಪರವಾನಗಿ ಅಥವಾ ನೋಂದಣಿ ಸಂಖ್ಯೆಗಳನ್ನೂ ನಮೂದಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ಎಫ್‌ಡಿಎ ಗಂಭೀರವಾಗಿ ಪರಿಗಣಿಸಿದೆ.
ಸೋಮವಾರ ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಮೂರು ಇ-ಕಾಮರ್ಸ್ ಸಂಸ್ಥೆಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದವು. ಅಮೆಜಾನ್ ಯಾವುದೇ ಪ್ರತಿಕ್ರಿಯೆ ಸಲ್ಲಿಸಿರಲಿಲ್ಲ.ಸ್ವಿಗ್ಗಿ ಇನ್‌ಸ್ಟಾಮಾರ್ಟ್ ದತ್ತೂರಿ ಉತ್ಪನ್ನಗಳ ಲಿಸ್ಟಿಂಗ್ ಮತ್ತು ಮಾರಾಟದ ವಿರುದ್ಧ ಕೈಗೊಂಡ ಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸದೆ, ಹೆಚ್ಚಿನ ಸಮಯ ಕೋರಿತ್ತು.
ಬಿಗ್‌ಬಾಸ್ಕೆಟ್ ಮಾತ್ರ ದತ್ತೂರಿ ಹಣ್ಣು ಮತ್ತು ಬೀಜಗಳ ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ಎಫ್‌ಡಿಎಗೆ ತಿಳಿಸಿದೆ. ಮುಂದೆ ಇಂತಹ ಉತ್ಪನ್ನಗಳನ್ನು ಲಿಸ್ಟ್ ಮಾಡುವಾಗ ‘ಮಾನವ ಸೇವನೆಗೆ ಅಲ್ಲ’ ಎಂಬ ಲೇಬಲ್ ಅಳವಡಿಸುವುದಾಗಿ ಕಂಪನಿ ಹೇಳಿದೆ. ಆದರೆ ಮೂರು ಸಂಸ್ಥೆಗಳು ನೀಡಿದ ಪ್ರತಿಕ್ರಿಯೆಗಳು ತೃಪ್ತಿಕರವಾಗಿಲ್ಲ ಎಂದು ಎಫ್‌ಡಿಎ ಅಭಿಪ್ರಾಯಪಟ್ಟಿದೆ. ಹೀಗಾಗಿ ಸಂಬಂಧಪಟ್ಟ ಸಂಸ್ಥೆಗಳು ತಕ್ಷಣ ಅನುಸರಣೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿಗಳನ್ನು ಪರಿಶೀಲಿಸಿದ ಬಳಿಕ ಪರವಾನಗಿ ಅಮಾನತು ತೆರವುಗೊಳಿಸುವ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

