
ಬಿಡದಿ ಬಳಿ ನಕಲಿ ಔಷಧ ಜಾಲ ಪತ್ತೆ; ಎಸ್ಐಟಿ ರಚನೆಗೆ ಸರ್ಕಾರ ನಿರ್ಧಾರ
ಸಿದ್ದಯ್ಯ ಎಂಬುವರಿಗೆ ಸೇರಿದ ಫಾರ್ಮ್ಹೌಸ್ನಲ್ಲಿ ನಕಲಿ ಔಷಧ ಜಾಲ ಪತ್ತೆಯಾಗಿದ್ದು, ಈ ಜಾಗವನ್ನು ದುಬೈನಲ್ಲಿರುವ ಪ್ರಶಾಂತ್ ಎಂಬುವರಿಗೆ ಲೀಸ್ಗೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ಕುರುಬರಕೇರನಹಳ್ಳಿ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಔಷಧ ಜಾರಿ ವಿಭಾಗದ ಅಧಿಕಾರಿಗಳು, ಕಾನೂನುಬಾಹಿರವಾಗಿ ನಡೆಯುತ್ತಿದ್ದ ಬೃಹತ್ ನಕಲಿ ಔಷಧ ಮರು ಪ್ಯಾಕಿಂಗ್ ಹಾಗೂ ಲೇಬಲಿಂಗ್ ಜಾಲವನ್ನು ಭೇದಿಸಿದ್ದಾರೆ.
ನಕಲಿ ಔಷಧ ಜಾಲದ ಕುರಿತು ದೊರೆತ ಸುಳಿವಿನ ಆಧಾರದ ಮೇಲೆ ಈ ದಿಢೀರ್ ದಾಳಿ ನಡೆಸಿದ್ದು, ಒಟ್ಟು 4,91,49,575 ರೂ. ಮೌಲ್ಯದ ನಕಲಿ ಔಷಧಗಳು ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇತರ ರಾಜ್ಯಗಳಿಂದ ಅಗ್ಗದ ದರದ ಔಷಧಗಳನ್ನು ತಂದು, ಹೊಸ ಬಾಟಲಿಗಳಿಗೆ ತುಂಬಿಸಲಾಗುತ್ತಿತ್ತು. ಫಿಜರ್ನಂತಹ ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ಹಾಗೂ ಆಮದು ಮಾಡಿಕೊಂಡ ಔಷಧಗಳ ಲೇಬಲ್ ಹಚ್ಚಿ ಮಾರಾಟ ಮಾಡಲಾಗುತ್ತಿತ್ತು. ನಕಲಿ ಲೇಬಲ್‌ಗಳ ಮೇಲಿದ್ದ ಸ್ಕ್ಯಾನಿಂಗ್ ಕೋಡ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. 30 ಬಾಕ್ಸ್ ಅವಧಿ ಮುಗಿದ ಔಷಧಗಳು ಪತ್ತೆಯಾಗಿದ್ದು, ಇವುಗಳನ್ನು ಮತ್ತೆ ಮಾರುಕಟ್ಟೆಗೆ ಪೂರೈಸುವ ಸಂಚು ರೂಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1940 ರ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ ಸೆಕ್ಷನ್ 17 ಬಿ ಹಾಗೂ 27 ರ ಅಡಿಯಲ್ಲಿ ನಕಲಿ ಔಷಧ ತಯಾರಿಕೆ ಮತ್ತು ಮಾರಾಟ ಗಂಭೀರ ಅಪರಾಧವಾಗಿದ್ದು, ಕನಿಷ್ಠ 10 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಸದ್ಯ ವಶಪಡಿಸಿಕೊಂಡ ಔಷಧಗಳ ಬ್ಯಾಚ್ ಸಂಖ್ಯೆಗಳನ್ನು ಕರ್ನಾಟಕ FDA ಪೋರ್ಟಲ್‌ನಲ್ಲಿ ತಕ್ಷಣವೇ ಬ್ಲಾಕ್ ಮಾಡಲಾಗಿದ್ದು, ವಿತರಣೆ ತಡೆಯಲಾಗಿದೆ. ಈ ಔಷಧಗಳ ರಾಸಾಯನಿಕ ಸಂಯೋಜನೆ ಹಾಗೂ ನೈಜತೆಯನ್ನು ಪರೀಕ್ಷಿಸಲು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಜಪ್ತಿ ಮಾಡಿದ ವಸ್ತುಗಳನ್ನು ಬೆಂಗಳೂರು ದಕ್ಷಿಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತನಿಖೆಗೆ ಎಸ್ಐಟಿ ರಚನೆ
ನಕಲಿ ಔಷಧ, ಕಾಸ್ಮೆಟಿಕ್ಸ್ ಜಾಲದ ತನಿಖೆಗೆ ಎಸ್ಐಟಿ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಸಿದ್ದಯ್ಯ ಎಂಬುವರಿಗೆ ಸೇರಿದ ಫಾರ್ಮ್ಹೌಸ್ನಲ್ಲಿ ನಕಲಿ ಔಷಧ ಜಾಲ ಪತ್ತೆಯಾಗಿದ್ದು, ಈ ಜಾಗವನ್ನು ದುಬೈನಲ್ಲಿರುವ ಪ್ರಶಾಂತ್ ಎಂಬುವರಿಗೆ ಲೀಸ್ಗೆ ನೀಡಲಾಗಿತ್ತು. ಪ್ರಶಾಂತ್ ಈ ನಕಲಿ ಬ್ರಾಂಡ್ ಔಷಧ ಘಟಕ ನಡೆಸುತ್ತಿದ್ದ ಎನ್ನಲಾಗಿದೆ.
ಸದ್ಯ ಪ್ರಭುದೇವ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಬೇರೆ ರಾಷ್ಟ್ರ, ರಾಜ್ಯಗಳ ನಕಲಿ ಔಷಧಿ, ಮಾತ್ರೆ ತಂದು ಇಲ್ಲಿ ಮಲ್ಟಿನ್ಯಾಷನಲ್ ಕಂಪನಿ ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದರು. ಐಸಿಯುನಲ್ಲಿ ಬಳಸುವ ಔಷಧಿ ಕೂಡ ನಕಲಿ ಮಾಡಿದ್ದಾರೆ. ಇದೇ ರೀತಿಯ ಜಾಲವು ಹಿಮಾಚಲಪ್ರದೇಶ, ತೆಲಂಗಾಣ ಸೇರಿದಂತೆ ಹಲವೆಡೆ ಪತ್ತೆಯಾಗಿದೆ. ಈ ಬಗ್ಗೆ ಆಳವಾದ ತನಿಖೆ ನಡೆಸಲು ಎಸ್ಐಟಿ ರಚಿಸಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.

