ತಮಿಳು ನಟ, ಟಿವಿಕೆ ಮುಖ್ಯಸ್ಥ ವಿಜಯ್‌ಗೆ ಕನ್ನಡಿಗನಿಂದ ಬೆಳ್ಳಿ ಪಾದುಕೆ ಮತ್ತು ಕಿರೀಟ ಗಿಫ್ಟ್
x
ಬೆಳ್ಳಿ ಪದಕದೊಂದಿಗೆ ವಿಜಯ್ ಅಭಿಮಾನಿ ಗೌತಮ್​​.

ತಮಿಳು ನಟ, ಟಿವಿಕೆ ಮುಖ್ಯಸ್ಥ ವಿಜಯ್‌ಗೆ ಕನ್ನಡಿಗನಿಂದ ಬೆಳ್ಳಿ ಪಾದುಕೆ ಮತ್ತು ಕಿರೀಟ ಗಿಫ್ಟ್

ದ ಫೆಡರಲ್ ಕರ್ನಾಟಕಕ್ಕೆ ವಿಶೇಷ ಸಂದರ್ಶನ ನೀಡಿದ ಅಭಿಮಾನಿ ಗೌತಮ್ ಅವರು ತಾವು ಸಿದ್ಧಪಡಿಸಿರುವ ಬೆಳ್ಳಿ ಪಾದುಕೆಯ ಸೇರಿದಂತೆ ಇನ್ನಿತರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.


ತಮಿಳುನಾಡಿನ ಖ್ಯಾತ ನಟ ಹಾಗೂ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರಿಗೆ ಕರ್ನಾಟಕದ ಕಟ್ಟಾ ಅಭಿಮಾನಿಯೊಬ್ಬರು ವಿಶೇಷ ಕಾಣಿಕೆ ನೀಡಲು ಮುಂದಾಗಿದ್ದಾರೆ. ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವಾಸಿಯಾಗಿರುವ ಗೌತಮ್ ವರ್ಮ ಎಂಬುವವರೇ ಈ ವಿಶೇಷ ಅಭಿಮಾನಿ.


ಗೌತಮ್ ವರ್ಮ ಅವರು ಚಿರಪರಿಚಿತ ಸಾಹಸ ಕ್ರೀಡಾಪಟುವಾಗಿದ್ದಾರೆ. ಹಲ್ಲಿನಲ್ಲಿ ತೆಂಗಿನಕಾಯಿ ಸುಲಿಯುವುದು, ಬಾಯಲ್ಲಿ ಬೈಕ್ ಎಳೆಯುವುದು ಸೇರಿದಂತೆ ಹಲವು ಮೈ ಜುಮ್ ಎನಿಸುವ ಸಾಹಸಮಯ ಪ್ರದರ್ಶನಗಳನ್ನು ನೀಡಿ ಲಿಮ್ಕಾ (Limca) ಮತ್ತು ಗಿನ್ನಿಸ್ (Guinness) ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಒಟ್ಟು 102 ಪ್ರತಿಷ್ಠಿತ ಪ್ರಶಸ್ತಿಗಳು ಒಲಿದುಬಂದಿವೆ.

ವಿಜಯ್‌ಗೆ ಬೆಳ್ಳಿ ಗಿಫ್ಟ್!

ನಟ ವಿಜಯ್ ಅವರ ಅಪ್ಪಟ ಅಭಿಮಾನಿಯಾಗಿರುವ ಗೌತಮ್ ವರ್ಮ, ತಮ್ಮ ನೆಚ್ಚಿನ ನಟನಿಗಾಗಿ ಒಂದೂವರೆ ಕೆ.ಜಿ. ತೂಕದ ಬೆಳ್ಳಿಯ ಪಾದುಕೆ ಹಾಗೂ ಬೆಳ್ಳಿಯ ಕಿರೀಟವನ್ನು ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, "ವಿಜಯ್ ನನಗೆ ದೇವರ ಸಮಾನ. ದೇವರಿಗೆ ಪಾದುಕೆ ನೀಡಿದರೆ ಒಳ್ಳೆಯದು ಎಂಬ ನಂಬಿಕೆಯಿಂದ ಈ ಗಿಫ್ಟ್ ನೀಡಲು ಮನಸ್ಸು ಮಾಡಿದೆ. ವಿಜಯ್ ಅವರು ಮುಂದಿನ ದಿನಗಳಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕು, ಅವರು ಸಿಎಂ ಆದರೆ ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ನಲ್ಲಿ ಮೊದಲ ಭೇಟಿ

ಕೆಲ ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ವೇಳೆ ಗೌತಮ್ ವರ್ಮ ಅವರು ನಟ ವಿಜಯ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಗೌತಮ್ ಅವರ ಸಾಹಸಮಯ ಪ್ರದರ್ಶನಗಳ ಬಗ್ಗೆ ತಿಳಿದುಕೊಂಡಿದ್ದ ವಿಜಯ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮ್ಮ ನೆಚ್ಚಿನ ನಾಯಕನಿಗೆ ಈ ವಿಶೇಷ ಕಾಣಿಕೆ ನೀಡಲು ಗೌತಮ್ ವರ್ಮ ಈಗಾಗಲೇ ತಮಿಳುನಾಡಿಗೆ ತೆರಳಿದ್ದು, ಕಳೆದ ಎರಡು ದಿನಗಳಿಂದ ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಸದ್ಯ ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ವಿಜಯ್ ಅತ್ಯಂತ ಬ್ಯುಸಿಯಾಗಿದ್ದರೂ, ವಿಜಯ್ ಕಾರ್ಯಾಲಯದ ಜೊತೆ ಮಾತನಾಡಿದ ನಂತರ ಮಂಗಳವಾರ (ಏಪ್ರಿಲ್ 21) ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ವಿಜಯ್ ಅವರನ್ನು ಖುದ್ದಾಗಿ ಭೇಟಿಯಾಗಿ ಈ ಬೆಳ್ಳಿ ಪಾದುಕೆ ಮತ್ತು ಕಿರೀಟವನ್ನು ಹಸ್ತಾಂತರಿಸಲಿದ್ದಾರೆ.

Read More
Next Story