
ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್
ನಕಲಿ ಔಷಧ ಜಾಲದಲ್ಲಿ ಭಾಗಿಯಾದವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲು ಸೂಚನೆ
ನಕಲಿ ಔಷಧಿ ತಯಾರಿಸುತ್ತಿದ್ದ ಫ್ಯಾಕ್ಟರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೋರಿ ಕೇಂದ್ರ ಆರೋಗ್ಯ ಸಚಿವರು ಹಾಗೂ ಸಂಬಂಧಪಟ್ಟ ನೆರೆ ರಾಜ್ಯದ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಆರೋಗ್ಯ ಸಚಿವ ಖಾದರ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಪತ್ತೆಯಾಗಿರುವ ಬೃಹತ್ ನಕಲಿ ಔಷಧ ಜಾಲದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಸಮಗ್ರ ತನಿಖೆಗೆ ಶೀಘ್ರದಲ್ಲೇ ವಿಶೇಷ ತನಿಖಾ ತಂಡ ರಚಿಸಲು ತೀರ್ಮಾನಿಸಿದೆ. ಅಲ್ಲದೇ ಈ ಜಾಲದಲ್ಲಿ ಭಾಗಿಯಾದವರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಲು ಸೂಚನೆ ನೀಡಿದೆ.
ಬೆಂಗಳೂರಿನ ವಿಧಾನಸೌಧದ ಬಳಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ನಕಲಿ ಔಷಧಿ ಜಾಲವು ಅಂತರರಾಜ್ಯ ಮಟ್ಟದಲ್ಲಿ ಹರಡಿಕೊಂಡಿದೆ. ರಾಜ್ಯದ ಬೇರೆ ಎಲ್ಲೆಲ್ಲಿ ಈ ಜಾಲ ಸಕ್ರಿಯವಾಗಿದೆ ಎಂಬುದನ್ನು ಪತ್ತೆಹಚ್ಚಬೇಕಾಗಿದೆ. ಈಗಾಗಲೇ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡವು ತನಿಖೆ ನಡೆಸುತ್ತಿದೆ. ಈ ಜಾಲದ ಸಂಪೂರ್ಣ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲು ಎಸ್ಐಟಿ ರಚಿಸಲಾಗುವುದು. ಸದ್ಯ ಪ್ರಕರಣದ ಗಂಭೀರತೆ ಅರಿತು 6 ಕಂಪನಿಗಳನ್ನು ಗುರುತಿಸಿ, ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಬಿಡದಿಯಲ್ಲಿ ನಕಲಿ ಔಷಧ ಜಾಲದಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ನಕಲಿ ಔಷಧಿ ತಯಾರಿಸುತ್ತಿದ್ದ ಫ್ಯಾಕ್ಟರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೋರಿ ಕೇಂದ್ರ ಆರೋಗ್ಯ ಸಚಿವರು ಹಾಗೂ ಸಂಬಂಧಪಟ್ಟ ನೆರೆ ರಾಜ್ಯದ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಖಾದರ್ ಮಾಹಿತಿ ನೀಡಿದ್ದಾರೆ.
ಮಾಹಿತಿ ನೀಡಲು ಮನವಿ
ಇಲಾಖೆಯ ಇತಿಮಿತಿಗಳ ಬಗ್ಗೆ ಮಾತನಾಡಿದ ಸಚಿವರು, "ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಯಿದ್ದು, ಆರೋಗ್ಯ ಇಲಾಖೆಯ 150 ಅಧಿಕಾರಿಗಳಿಂದ ಮಾತ್ರ ಇಡೀ ಜಾಲ ತಡೆಯುವುದು ಕಷ್ಟ. ಇದಕ್ಕೆ ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯ. ಒಂದೇ ಔಷಧ ಎರಡು ಬೇರೆ ಬೇರೆ ವೈದ್ಯಕೀಯ ಅಂಗಡಿಗಳಲ್ಲಿ ವಿಭಿನ್ನ ದರದಲ್ಲಿ ಮಾರಾಟವಾಗುತ್ತಿದ್ದರೆ, ಸಾರ್ವಜನಿಕರು ತಕ್ಷಣ ನಮಗೆ ಮಾಹಿತಿ ನೀಡಬೇಕು" ಎಂದು ಕೋರಿದ್ದಾರೆ.
"ಹಿಂದಿನ ಎಲ್ಲಾ ಸಚಿವರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರ ಹಾದಿಯಲ್ಲೇ ನಾನು ಈ ಕೆಲಸವನ್ನು ಮುಂದುವರಿಸುತ್ತಿದ್ದೇನೆ. ಇದು ಕೇವಲ ಆರೋಗ್ಯ ಅಥವಾ ಆಹಾರ ಇಲಾಖೆಯಿಂದ ಮಾತ್ರ ಸಾಧ್ಯವಾಗುವ ಕೆಲಸವಲ್ಲ. ಈ ನಕಲಿ ಔಷಧಿಗಳು ಎಷ್ಟು ವರ್ಷಗಳಿಂದ ಮಾರುಕಟ್ಟೆಯಲ್ಲಿವೆ, ಯಾವ್ಯಾವ ಆಸ್ಪತ್ರೆಗಳಿಗೆ ಸರಬರಾಜಾಗಿವೆ. ಎಷ್ಟು ಜನ ರೋಗಿಗಳಿಗೆ ತಲುಪಿವೆ ಎಂಬ ಸಂಪೂರ್ಣ ಮಾಹಿತಿಯು ಎಸ್ಐಟಿ ತನಿಖೆ ನಂತರವೇ ಹೊರಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.

