ನಕಲಿ ಔಷಧ ಜಾಲದ ವಿರುದ್ಧ ಆರೋಗ್ಯ ಇಲಾಖೆ ಸಮರ; ಸುಳಿವು ಕೊಟ್ಟವರಿಗೆ ನಗದು ಬಹುಮಾನ
x

ನಕಲಿ ಔಷಧ ಜಾಲದ ವಿರುದ್ಧ ಆರೋಗ್ಯ ಇಲಾಖೆ ಸಮರ; ಸುಳಿವು ಕೊಟ್ಟವರಿಗೆ ನಗದು ಬಹುಮಾನ

ನಕಲಿ ಔಷಧ ಜಾಲದ ಕುರಿತು ಮಾಹಿತಿ ನೀಡುವ ಸಾರ್ವಜನಿಕರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು ಯಾವುದೇ ಭಯವಿಲ್ಲದೆ ನಕಲಿ ಔಷಧ ಜಾಲದ ಬಗ್ಗೆ ಧೈರ್ಯವಾಗಿ ಅಧಿಕಾರಿಗಳಿಗೆ ಸುಳಿವು ನೀಡಬಹುದಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನಕಲಿ ಔಷಧ ಜಾಲದ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ರಾಜ್ಯದಲ್ಲಿ ನಕಲಿ ಔಷಧಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ಪೂರೈಕೆ ಕುರಿತು ನಿಖರ ಮಾಹಿತಿ ನೀಡುವವರಿಗೆ 10 ಸಾವಿರದಿಂದ 50 ಸಾವಿರ ರೂ.ಗಳವರೆಗೆ ನಗದು ಬಹುಮಾನ ನೀಡುವುದಾಗಿ ಆರೋಗ್ಯ ಇಲಾಖೆ ಘೋಷಿಸಿದೆ.

ಸಹಾಯವಾಣಿಗೆ ಕರೆ ಮಾಡಲು ಮನವಿ

ನಕಲಿ ಔಷಧಗಳ ಜಾಲವನ್ನು ತಳಮಟ್ಟದಿಂದಲೇ ಕಿತ್ತು ಹಾಕಲು ಸಾರ್ವಜನಿಕರ ಸಹಕಾರ ಅಗತ್ಯ. ಸಾರ್ವಜನಿಕರು ತಮ್ಮ ಸುತ್ತಮುತ್ತ ಅನುಮಾನಾಸ್ಪದ ರೀತಿಯಲ್ಲಿ ನಡೆಯುತ್ತಿರುವ ಔಷಧ ತಯಾರಿಕೆ, ನಕಲಿ ಮೆಡಿಕಲ್ ಸ್ಟೋರ್‌ಗಳು ಅಥವಾ ಔಷಧ ದಂಧೆಯ ಬಗ್ಗೆ ಮಾಹಿತಿ ಇದ್ದರೆ ತಕ್ಷಣವೇ ರಾಜ್ಯ ಔಷಧ ನಿಯಂತ್ರಣ ಮಂಡಳಿಯ ಸಹಾಯವಾಣಿ ಅಥವಾ ಇಲಾಖೆಯ ಅಧಿಕೃತ ಪೋರ್ಟಲ್‌ಗೆ ದೂರು ನೀಡಬಹುದು.

ಸಾರ್ವಜನಿಕರಿಂದ ಲಭ್ಯವಾಗುವ ಸುಳಿವು ಆಧರಿಸಿ ಔಷಧ ನಿಯಂತ್ರಣ ಅಧಿಕಾರಿಗಳು ಕ್ಷಿಪ್ರ ಪರಿಶೀಲನೆ ಹಾಗೂ ದಾಳಿ ನಡೆಸಲಿದ್ದಾರೆ. ತನಿಖೆಯಲ್ಲಿ ನಕಲಿ ಔಷಧ ತಯಾರಿಕೆ ಅಥವಾ ಮಾರಾಟ ಸಾಬೀತಾದರೆ ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ನಕಲಿ ಔಷಧ ಜಾಲದ ಕುರಿತು ಮಾಹಿತಿ ನೀಡುವ ಸಾರ್ವಜನಿಕರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು ಯಾವುದೇ ಭಯವಿಲ್ಲದೆ ನಕಲಿ ಔಷಧ ಜಾಲದ ಬಗ್ಗೆ ಧೈರ್ಯವಾಗಿ ಅಧಿಕಾರಿಗಳಿಗೆ ಸುಳಿವು ನೀಡಬಹುದಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈವರೆಗೆ ಹರಡಿದೆ ಅಂತರರಾಜ್ಯ ದಂಧೆ

ಬಿಡದಿಯಲ್ಲಿ ಪತ್ತೆಯಾದ ನಕಲಿ ಔಷಧ ತಯಾರಿಕಾ ದಂಧೆಯ ತನಿಖೆ ವೇಳೆ ಈ ಜಾಲವು ಮಹಾರಾಷ್ಟ್ರ, ಮುಂಬೈ, ಹಿಮಾಚಲ ಪ್ರದೇಶ ಸೇರಿ ದೇಶದ ಹಲವು ರಾಜ್ಯಗಳಿಗೆ ಹರಡಿರುವುದು ಬೆಳಕಿಗೆ ಬಂದಿದೆ. ವಿಶೇಷವಾಗಿ ಕ್ಯಾನ್ಸರ್, ಹೃದಯಸಂಬಂಧಿ ಕಾಯಿಲೆ ಹಾಗೂ ದುಬಾರಿ ಬೆಲೆಯ ಜೀವರಕ್ಷಕ ಔಷಧಗಳನ್ನೇ ಗುರಿಯಾಗಿಸಿಕೊಂಡು ಈ ನಕಲಿ ಜಾಲ ಸಕ್ರಿಯವಾಗಿತ್ತು ಎನ್ನಲಾಗಿದೆ.

ಕೇಂದ್ರ ಹಾಗೂ ವಿವಿಧ ರಾಜ್ಯಗಳ ಡ್ರಗ್‌ ಕಂಟ್ರೋಲರ್ ಮತ್ತು ರಾಜ್ಯ ಪರವಾನಗಿ ಸಮಿತಿಗಳು ಈಗಾಗಲೇ ಅಲರ್ಟ್‌ ಆಗಿವೆ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುವ ಈ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಲು ಜಾಗೃತರಾಗಿರಬೇಕು. ಅನುಮಾನಾಸ್ಪದ ಔಷಧಗಳು ಕಂಡುಬಂದರೆ ಸುಮ್ಮನಿರದೆ ತಕ್ಷಣ ವರದಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

Read More
Next Story