
ರಾಜ್ಯ ಅಬಕಾರಿ ಸುಧಾರಣಾ ಕರಡು ನೀತಿ 2026 ಪ್ರಕಟ: ಸಾರ್ವಜನಿಕರ ಸಮಾಲೋಚನೆಗೆ ಸರ್ಕಾರದ ಆಹ್ವಾನ
ಮದ್ಯದಲ್ಲಿರುವ 'ಶುದ್ಧ ಆಲ್ಕೋಹಾಲ್' ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ. ಕಡಿಮೆ ಆಲ್ಕೋಹಾಲ್ ಇರುವ ಮದ್ಯಗಳ ಬಳಕೆಗೆ ಉತ್ತೇಜನ ನೀಡುವುದು ಇದರ ಮುಖ್ಯ ಉದ್ದೇಶ.
ಮದ್ಯಪಾನದಿಂದ ಉಂಟಾಗುವ ಸಾಮಾಜಿಕ ಮತ್ತು ಆರ್ಥಿಕ ದುಷ್ಪರಿಣಾಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷಿಯ 'ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು (2026)' ಕರಡು ನೀತಿಯನ್ನು ಪ್ರಕಟಿಸಿದೆ. ಈ ಜನಕೇಂದ್ರಿತ ನೀತಿಯ ಕುರಿತು ಸಾರ್ವಜನಿಕರು, ತಜ್ಞರು ಹಾಗೂ ವ್ಯಾಪಾರಿಗಳಿಂದ ಸರ್ಕಾರ ಮುಕ್ತವಾಗಿ ಅಭಿಪ್ರಾಯ ಆಹ್ವಾನಿಸಿದೆ.
ರಾಜ್ಯದಲ್ಲಿ ಮದ್ಯ ಮಾರಾಟದಿಂದ ವಾರ್ಷಿಕ 34,600 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಆದರೆ, ಮದ್ಯಸೇವನೆಯಿಂದ ಉಂಟಾಗುವ ರಸ್ತೆ ಅಪಘಾತ, ಕೌಟುಂಬಿಕ ಹಿಂಸಾಚಾರ, ಯಕೃತ್ ಕಾಯಿಲೆಗಳು ಮತ್ತು ಕುಟುಂಬದ ಆದಾಯದ ನಷ್ಟವನ್ನು ಲೆಕ್ಕ ಹಾಕಿದರೆ, ಒಟ್ಟಾರೆ ಸಾಮಾಜಿಕ ನಷ್ಟವು ಬರೋಬ್ಬರಿ 51,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮದ್ಯದಲ್ಲಿರುವ 'ಶುದ್ಧ ಆಲ್ಕೋಹಾಲ್' ಪ್ರಮಾಣದ ಆಧಾರದ ಮೇಲೆ ತೆರಿಗೆ (ಆಲ್ಕೋಹಾಲ್ ಅಂಶ + ವ್ಯಾಟ್) ವಿಧಿಸಲು ಪ್ರಸ್ತಾಪಿಸಲಾಗಿದೆ. ಕಡಿಮೆ ಆಲ್ಕೋಹಾಲ್ ಇರುವ ಮದ್ಯಗಳ ಬಳಕೆಗೆ ಉತ್ತೇಜನ ನೀಡುವುದು ಹಾಗೂ ತೆರಿಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸುವುದು ಇದರ ಮುಖ್ಯ ಉದ್ದೇಶ.
ಚಿಲ್ಲರೆ ಮದ್ಯ ಮಾರಾಟವನ್ನು 'ಕೋಟಾ ಆಧಾರಿತ' ವ್ಯವಸ್ಥೆಯಿಂದ 'ನೋಂದಣಿ ಆಧಾರಿತ' ವ್ಯವಸ್ಥೆಗೆ ಬದಲಾಯಿಸಲಾಗುವುದು. ಶಾಲೆಗಳು ಮತ್ತು ಆಸ್ಪತ್ರೆಗಳ ಸಮೀಪ ಮದ್ಯ ಮಾರಾಟಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುತ್ತಿದೆ.
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಸರಳೀಕೃತ ಡಿಜಿಟಲ್ ಪರವಾನಗಿ, ಕ್ಯೂಆರ್ (QR) ಆಧಾರಿತ ಪೂರೈಕೆ ವ್ಯವಸ್ಥೆ ಹಾಗೂ 'ಡಿಜಿಟಲ್ ಟ್ರ್ಯಾಕ್ ಆ್ಯಂಡ್ ಟ್ರೇಸ್' ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಮುಂಬರುವ 6 ವರ್ಷಗಳಲ್ಲಿ ರಾಜ್ಯದಲ್ಲಿ ಮದ್ಯ ಸೇವನೆಯ ಪ್ರಮಾಣವನ್ನು ಶೇ. 8 ರಿಂದ 9 ರಷ್ಟು ತಗ್ಗಿಸುವ ಸ್ಪಷ್ಟ ಗುರಿಯನ್ನು ಸರ್ಕಾರ ಹೊಂದಿದೆ.
ಅಬಕಾರಿ ಆದಾಯದ ಒಂದು ನಿರ್ದಿಷ್ಟ ಭಾಗವನ್ನು ಕಡ್ಡಾಯವಾಗಿ ಮದ್ಯವರ್ಜನ ಕೇಂದ್ರಗಳ ನಿರ್ವಹಣೆ, ರಸ್ತೆ ಸುರಕ್ಷತಾ ಕ್ರಮಗಳು, ಕೌಟುಂಬಿಕ ಹಿಂಸಾಚಾರ ತಡೆ ಮತ್ತು ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಅಭಿಯಾನಗಳಿಗೆ ಮೀಸಲಿಡಲಾಗುತ್ತದೆ. ಜೊತೆಗೆ ಮದ್ಯದ ಬಾಟಲಿಗಳ ಮೇಲೆ ಪ್ರಾಮಾಣೀಕೃತ ಆರೋಗ್ಯ ಎಚ್ಚರಿಕೆಗಳ ಮುದ್ರಣ ಕಡ್ಡಾಯವಾಗಲಿದೆ.
ಅಭಿಪ್ರಾಯ ತಿಳಿಸಲು ಅವಕಾಶ:
ಕರಡು ನೀತಿಯ ಅಂತಿಮ ಅನುಷ್ಠಾನಕ್ಕೂ ಮುನ್ನ ಸರ್ಕಾರ ಸಮಾಲೋಚನೆಗೆ ವೇದಿಕೆ ಕಲ್ಪಿಸಿದೆ. ಸಾರ್ವಜನಿಕರು ಈ ಕೆಳಗಿನ ಮಾಧ್ಯಮಗಳ ಮೂಲಕ ತಮ್ಮ ಅನಿಸಿಕೆ ಸಲ್ಲಿಸಬಹುದು:
ಅಧಿಕೃತ ಸಮಾಲೋಚನಾ ಪೋರ್ಟಲ್ (http://www.civis.vote/consultations/1524/read)ಗೆ ಭೇಟಿ ನೀಡಿ ಅಥವಾ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಸಂಪರ್ಕಿಸಿ. ಚಾಟ್‌ಬಾಟ್‌ಗಾಗಿ “karnatakaexcise” ಎಂಬ ಕೀವರ್ಡ್‌ಅನ್ನು https://wa.link/uv7q49 ಲಿಂಕ್‌ಗೆ ಕಳುಹಿಸಿ.

