
ಸಾಂದರ್ಭಿಕ ಚಿತ್ರ
ಮಾಜಿ ಸೈನಿಕರಿಗೆ ಗುಡ್ ನ್ಯೂಸ್| ವರ್ಷಾಂತ್ಯದೊಳಗೆ ನಿವೇಶನ ಮಂಜೂರು, ಸರ್ಕಾರ ಭರವಸೆ
ಪ್ರಸ್ತುತ ಯಾವ ತಾಲೂಕು, ಜಿಲ್ಲೆಯಲ್ಲಿ ಎಷ್ಟು ಜನ ಸೈನಿಕರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ದಾಖಲೆ ಬೆರಳ ತುದಿಯಲ್ಲಿದೆ. ಈ ಎಲ್ಲಾ ಅರ್ಜಿಗಳನ್ನೂ ಆನ್ಲೈನ್ ಮೂಲಕ ಡಿಜಿಟಲೀಕರಣ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಾಜಿ ಸೈನಿಕರ ಕೋಟಾದಡಿಯಲ್ಲಿ ನಿವೇಶನ ಕೋರಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಅರ್ಜಿಗಳು ಬಾಕಿ ಇವೆ ಎಂಬುದನ್ನು ಪರಿಗಣಿಸಿ, ಈ ವರ್ಷಾಂತ್ಯದೊಳಗೆ ಬಡಾವಣೆ ನಿರ್ಮಿಸಿ ನಿವೇಶನ ಮಂಜೂರು ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಸೋಮವಾರ (ಮಾ. 9) ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 338 ಮಾಜಿ ಸೈನಿಕರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ಎಲ್ಲಾ ಮಾಜಿ ಸೈನಿಕರಿಗೂ ಅರ್ಹತೆಯ ಆಧಾರದ ಮೇಲೆ ನಿವೇಶನ ನೀಡಬೇಕೆಂದು ಸರ್ಕಾರವು ಘೋಷಿಸಿದೆ. ಆದರೆ, ಈ ಯೋಜನೆಯ ಅನುಷ್ಠಾನಕ್ಕೆ ಜಮೀನಿನ ಅಗತ್ಯವಿದ್ದು, ವಾಸಯೋಗ್ಯ ಸ್ಥಳವನ್ನು ಗುರುತಿಸಿ ಬಡಾವಣೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿ 14 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಇದರಲ್ಲಿ ಕನಿಷ್ಠ 350 ನಿವೇಶನಗಳನ್ನು ನಿರ್ಮಿಸಬಹುದು” ಎಂದು ಸದನಕ್ಕೆ ಮಾಹಿತಿ ನೀಡಿದರು.
ಬೆರಳ ತುದಿಯಲ್ಲಿ ಮಾಹಿತಿ
ಪ್ರಸ್ತುತ ಯಾವ ತಾಲ್ಲೂಕು ಹಾಗೂ ಯಾವ ಜಿಲ್ಲೆಯಲ್ಲಿ ಎಷ್ಟು ಜನ ಸೈನಿಕರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ದಾಖಲೆಗಳು ಬೆರಳ ತುದಿಯಲ್ಲಿವೆ. ಈ ಎಲ್ಲ ಅರ್ಜಿಗಳನ್ನೂ ಆನ್ಲೈನ್ ಮೂಲಕ ಡಿಜಿಟಲೀಕರಣ ಮಾಡಲಾಗಿದೆ. ಈ ಹಿಂದೆ ಈ ವ್ಯವಸ್ಥೆ ಇರಲಿಲ್ಲ ಹಾಗೂ ನಿಖರ ದಾಖಲೆಗಳೂ ಲಭ್ಯವಿರಲಿಲ್ಲ. ಯಾವ ತಾಲ್ಲೂಕಿನಲ್ಲಿ ಎಷ್ಟು ಅರ್ಜಿಗಳಿವೆ ಎಂದು ತಿಳಿಯಲು ತಹಶೀಲ್ದಾರ್‌ಗೆ ಪತ್ರ ಬರೆಯಬೇಕಿತ್ತು. ಆದರೆ, ಪ್ರಸ್ತುತ ಎಲ್ಲವನ್ನೂ ಡಿಜಿಟಲೀಕರಣಗೊಳಿಸಲಾಗಿದೆ. ನಮ್ಮ ಬೆರಳ ತುದಿಯಲ್ಲಿ ಎಲ್ಲ ಮಾಹಿತಿ ಲಭ್ಯವಿದ್ದು, ವರ್ಷಾಂತ್ಯದೊಳಗೆ ಮಾಜಿ ಸೈನಿಕರಿಗೆ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.
ನಿಯಮ ಏನು ಹೇಳುತ್ತದೆ?
ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಪ್ರಕಾರ ಮಾಜಿ ಯೋಧರಿಗೆ ನಿವೇಶನ ಅಥವಾ ಕೃಷಿ ಜಮೀನು ನೀಡಬೇಕು. 2019ರ ಸರ್ಕಾರಿ ಆದೇಶದ ಪ್ರಕಾರ, ಭೂಮಿ ಲಭ್ಯವಿದ್ದಲ್ಲಿ ಎರಡು ಎಕರೆ ಕೃಷಿ ಭೂಮಿ, ಇಲ್ಲವಾದರೆ ವಾಸಕ್ಕೆ ನಿವೇಶನ ನೀಡಬೇಕು. ಅಷ್ಟೇ ಅಲ್ಲದೆ, ವಾಸಕ್ಕೆ ನಿವೇಶನ ನೀಡುವಲ್ಲಿಯೂ ಮಾಜಿ ಯೋಧರಿಗೆ ಶೇ. 10ರಷ್ಟು ಮೀಸಲಾತಿ ಇರಬೇಕು. ಆದರೆ, ಈ ಆದೇಶ ಕಾಗದದ ಮೇಲೆಯೇ ಉಳಿದಿದೆ. ಲೋಕಾಯುಕ್ತರ ಮಧ್ಯಪ್ರವೇಶದ ಬಳಿಕವಷ್ಟೇ ಅಧಿಕಾರಿಗಳಲ್ಲಿ ಒಂದು ರೀತಿಯ ಚಟುವಟಿಕೆ ಕಂಡುಬಂದಿದೆ.
ಎಷ್ಟು ಅರ್ಜಿಗಳು ಬಾಕಿ ಇವೆ?
ಅಧಿಕೃತ ಮೂಲಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 1.20 ಲಕ್ಷ ಮಾಜಿ ಯೋಧರ ಅರ್ಜಿಗಳು ಮಂಜೂರಾತಿಗಾಗಿ ಬಾಕಿ ಇವೆ ಎಂದು ಹೇಳಲಾಗಿದೆ. ಬೆಳಗಾವಿ, ಕೊಡಗು, ಧಾರವಾಡ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾಜಿ ಯೋಧರು ನಿವೇಶನ ಅಥವಾ ಜಮೀನಿಗಾಗಿ ಕಾಯುತ್ತಿದ್ದಾರೆ.
ರಾಜ್ಯದಲ್ಲೇ ಅತಿ ಹೆಚ್ಚು ಮಾಜಿ ಯೋಧರನ್ನು ಹೊಂದಿರುವ ಜಿಲ್ಲೆ ಬೆಳಗಾವಿಯಾಗಿದ್ದು, ಅಲ್ಲಿ ಸುಮಾರು 24 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇವೆ. ಕೊಡಗಿನಲ್ಲಿ ಸುಮಾರು 5 ಸಾವಿರ, ಧಾರವಾಡದಲ್ಲಿ ಸುಮಾರು 4,200, ಉತ್ತರ ಕನ್ನಡದಲ್ಲಿ 3,800, ಹಾಸನದಲ್ಲಿ 3,500 ಮತ್ತು ಮೈಸೂರಿನಲ್ಲಿ 4 ಸಾವಿರ ಅರ್ಜಿಗಳು ಕಂದಾಯ ಇಲಾಖೆಯ ಕಡತಗಳಲ್ಲಿ ಸಿಲುಕಿಕೊಂಡಿವೆ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಯೋಧರು ಭೂಮಿಗಾಗಿ ಕಾಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ, ಸರ್ಕಾರಿ ಭೂಮಿ ಲಭ್ಯವಿಲ್ಲ ಎಂಬ ಕಾರಣ ನೀಡಿ ಸಾವಿರಾರು ಅರ್ಜಿಗಳನ್ನು ದಶಕಗಳಿಂದ ಬಾಕಿ ಇಡಲಾಗಿದೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼ ವಿಶೇಷ ವರದಿ ಪ್ರಕಟಿಸಿತ್ತು.
Lokayukta| ರಾಜ್ಯದಲ್ಲಿ ಧೂಳು ಹಿಡಿಯುತ್ತಿವೆ 1.20 ಲಕ್ಷ ಮಾಜಿ ಯೋಧರ ಅರ್ಜಿಗಳು..!

