
ಆನೆ ಶಿಬಿರಗಳಲ್ಲಿ ಬಿಗಿ ನಿಯಮಾವಳಿ ; ವಾರದಲ್ಲಿ 1 ದಿನ ಪ್ರವಾಸಿಗರಿಗೆ ನಿರ್ಬಂಧ
ರಾಜ್ಯದ ಎಲ್ಲಾ ಶಿಬಿರಗಳಿಗೆ ಈ ನಿಯಮ ಅಳವಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದೆ. ಅಧಿಕಾರಿಗಳ ಪರಿಶೀಲನೆ ಹಾಗೂ ಪ್ರಮಾಣೀಕರಣ ಸಿಗುವವರೆಗೂ ಶಿಬಿರಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾಳಗದ ವೇಳೆ ತಮಿಳುನಾಡಿನ ಮಹಿಳಾ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಆನೆಗಳ ನಿರ್ವಹಣೆ ಮತ್ತು ಪ್ರವಾಸಿಗರ ಸುರಕ್ಷತೆಗಾಗಿ 'ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ'ಯನ್ನು ತಂದಿದ್ದು, ಇನ್ನು ಮುಂದೆ ದುಬಾರೆ, ಸಕ್ರೆಬೈಲು ಸೇರಿದಂತೆ ರಾಜ್ಯದ ಇತರೆ ಆನೆ ಶಿಬಿರಗಳಲ್ಲಿ ಪ್ರವಾಸಿಗರು ಆನೆಗಳನ್ನು ಹತ್ತಿರದಿಂದ ಮುಟ್ಟುವುದು, ಆಹಾರ ನೀಡುವುದು ಅಥವಾ ಸ್ನಾನ ಮಾಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಕಳೆದ ಮೇ 19ರಂದು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ನಡುವೆ ನಡೆದ ಕಾಳಗದ ವೇಳೆ ತಮಿಳುನಾಡಿನ ಮಹಿಳಾ ಪ್ರವಾಸಿಗರೊಬ್ಬರು ಸಿಲುಕಿ ಮೃತಪಟ್ಟಿದ್ದರು. ಈ ಘಟನೆಯ ನಂತರ ಅಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು ಹೊಸ ಮಾರ್ಗಸೂಚಿಗೆ ಸಹಿ ಹಾಕಿದ್ದಾರೆ.
ರಾಜ್ಯದ ಎಲ್ಲಾ ಶಿಬಿರಗಳಿಗೆ ಈ ನಿಯಮ ಅಳವಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದೆ. ಅಧಿಕಾರಿಗಳ ಪರಿಶೀಲನೆ ಹಾಗೂ ಪ್ರಮಾಣೀಕರಣ ಸಿಗುವವರೆಗೂ ಶಿಬಿರಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
30 ಅಡಿ ಸುರಕ್ಷಿತ ಅಂತರ ಕಡ್ಡಾಯ
ಪ್ರವಾಸಿಗರು ಆನೆಗಳನ್ನು ವೀಕ್ಷಿಸಲು ಕನಿಷ್ಠ 10 ಮೀಟರ್ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಇಲಾಖೆ ನಿರ್ಮಿಸುವ ಡಬಲ್ ಬ್ಯಾರಿಕೇಡ್ಗಳ ಹಿಂದೆಯೇ ನಿಲ್ಲಬೇಕು. ಸಾರ್ವಜನಿಕ ವೀಕ್ಷಣೆಗಾಗಿ ಯಾವುದೇ ಒಂದು ಶಿಬಿರದ ವೀಕ್ಷಣಾ ಅವಧಿಯಲ್ಲಿ 10ಕ್ಕಿಂತ ಹೆಚ್ಚು ಆನೆಗಳನ್ನು ಪ್ರದರ್ಶಿಸುವಂತಿಲ್ಲ. ಪ್ರತಿಯೊಂದು ಚಟುವಟಿಕೆ ಹಾಗೂ ಪ್ರವಾಸಿಗರ ಓಡಾಟವನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ನಿಯಮಾವಳಿಗಳಲ್ಲಿ ಹೇಳಲಾಗಿದೆ.
ಮದಾವಸ್ಥೆಯಲ್ಲಿರುವ, ಗಾಯಗೊಂಡ, ಅಸ್ವಸ್ಥ ಅಥವಾ ಇತ್ತೀಚೆಗೆ ಆಕ್ರಮಣಕಾರಿ ಪ್ರವೃತ್ತಿ ತೋರಿದ ಆನೆಗಳನ್ನು ಸಾರ್ವಜನಿಕ ವೀಕ್ಷಣೆಯಿಂದ ದೂರ ಇಡಲಾಗುವುದು. 6 ತಿಂಗಳೊಳಗಿನ ಮರಿ ಇರುವ ತಾಯಿ ಆನೆಗಳಿಗೂ ವಿಶ್ರಾಂತಿ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ. ಪ್ರವಾಸಿಗರ ದಟ್ಟಣೆ ನಿಯಂತ್ರಿಸಲು ಮತ್ತು ಆನೆಗಳ ಮಾನಸಿಕ ಆರೋಗ್ಯಕ್ಕಾಗಿ ವಾರದಲ್ಲಿ ಒಂದು ದಿನ (ಮಂಗಳವಾರ) ಶಿಬಿರಗಳಿಗೆ ಕಡ್ಡಾಯ ರಜೆ ಇರಲಿದೆ.
ಪ್ರವಾಸಿಗರ ಸಂಖ್ಯೆಗೆ ಕಡಿವಾಣ
ಶಿಬಿರದ ಸಾಮರ್ಥ್ಯ ಮತ್ತು ಆನೆಗಳ ಸಂಖ್ಯೆಗೆ ಅನುಗುಣವಾಗಿ ಪ್ರವಾಸಿಗರನ್ನು ಬ್ಯಾಚ್ಗಳಾಗಿ ವಿಂಗಡಿಸಲಾಗುತ್ತದೆ. ಗ್ರೀನ್ ಝೋನ್ನಲ್ಲಿ ಒಂದೇ ಸಮಯದಲ್ಲಿ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದ್ದು, ಅವರ ವೀಕ್ಷಣಾ ಅವಧಿಯನ್ನು 20 ರಿಂದ 30 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ವೀಕ್ಷಣೆಗೂ ಮುನ್ನ 10 ನಿಮಿಷಗಳ ಕಾಲ ಸುರಕ್ಷತಾ ಬ್ರೀಫಿಂಗ್ ನೀಡಲಾಗುತ್ತದೆ.
ದುಬಾರೆ, ಹಾರಂಗಿ, ಮತ್ತಿಗೋಡು ಹಾಗೂ ಸಕ್ರೆಬೈಲು ಸೇರಿದಂತೆ ಎಲ್ಲಾ ಕೇಂದ್ರಗಳಲ್ಲಿ ಜೂನ್ ಕೊನೆಯ ವಾರದೊಳಗೆ ಈ ನಿಯಮಗಳು ಸಂಪೂರ್ಣವಾಗಿ ಜಾರಿಗೆ ಬರಲಿವೆ. ನಿಯಮ ಉಲ್ಲಂಘಿಸುವ ಶಿಬಿರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಎಚ್ಚರಿಸಿದೆ.

