x

ಬರ ಘೋಷಣೆಗೆ ಶಾಸಕರು ಒತ್ತಡ ಹೇರುವುದು ಯಾಕೆ? ಜನ ಹಿತವೂ, ಸ್ವಹಿತಾಸಕ್ತಿಯೊ?

ಒಂದು ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಅದರ ಹಿಂದೆ ದೊಡ್ಡ ಆರ್ಥಿಕ ಮತ್ತು ರಾಜಕೀಯ ಲೆಕ್ಕಾಚಾರಗಳಿವೆ.


Click the Play button to hear this message in audio format

ಕರ್ನಾಟಕದಲ್ಲಿ ಮಳೆ ಕೊರತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಬರ ಪರಿಸ್ಥಿತಿಯು ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ರಾಜ್ಯದ ವಿವಿಧ ಭಾಗಗಳ ಶಾಸಕರು ತಮ್ಮ ಕ್ಷೇತ್ರಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲೇಬೇಕು ಎಂದು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ವಿಶೇಷವೆಂದರೆ, ವಿರೋಧ ಪಕ್ಷಗಳಿಗಿಂತ ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಮನವಿ, ಪ್ರತಿಭಟನೆಗಳ ಜೊತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಗಳೂ ಕೇಳಿಬರುತ್ತಿದ್ದು, ಬರಪೀಡಿತ ತಾಲೂಕು ಎಂಬ ಸ್ಥಾನಮಾನಕ್ಕಾಗಿ ಇಷ್ಟೊಂದು ರಾಜಕೀಯ ಒತ್ತಡ ಏಕೆ ಸೃಷ್ಟಿಯಾಗಿದೆ ಎಂಬ ಚರ್ಚೆ ರಾಜ್ಯಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ.

ಬರ ಘೋಷಣೆಯ ವಿಚಾರದಲ್ಲಿ ರಾಜಕೀಯ ಒತ್ತಡದ ತೀವ್ರತೆ ಗದಗದಿಂದ ಆರಂಭವಾಯಿತು. ಗದಗ ಶಾಸಕ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು, ತಮ್ಮ ಕ್ಷೇತ್ರದಲ್ಲಿ ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದರೂ ಸರ್ಕಾರ ಬರಪೀಡಿತ ಎಂದು ಘೋಷಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕೂಡಲೇ ಗದಗವನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ಗದಗ, ಮುಂಡರಗಿ ಮತ್ತು ರೋಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿತು.

ಈ ಘಟನೆಯ ನಂತರ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಕ್ಷೇತ್ರದ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿಲ್ಲ ಎಂದು ಆರೋಪಿಸಿ ಸೆಪ್ಟೆಂಬರ್ 23ರಂದು ನೇರವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆದರೆ, ರಾಜೀನಾಮೆ ಸಲ್ಲಿಕೆಯಾದ ಮರುದಿನವೇ ಇಂಡಿ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯಿತು. ತಕ್ಷಣವೇ ಅವರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದರು. ಈ ಬೆಳವಣಿಗೆಗಳು ಶಾಸಕರ ರಾಜೀನಾಮೆ ಬೆದರಿಕೆ ಮತ್ತು ಸರ್ಕಾರದ ನಿರ್ಧಾರಗಳ ನಡುವಿನ ಸಂಬಂಧದ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ.

ಪ್ರತಿಪಕ್ಷದಲ್ಲೂ ಆರೋಪ

ಈ ಒತ್ತಡ ಕೇವಲ ಆಡಳಿತ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ತಮ್ಮ ಕ್ಷೇತ್ರವನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಯಾದಗಿರಿ ಜಿಲ್ಲೆಯ ಉಳಿದ ತಾಲೂಕುಗಳಲ್ಲೂ ನೆಲಮಟ್ಟದ ಪರಿಶೀಲನೆಗೆ ಒತ್ತು ನೀಡಲಾಯಿತು. ಅದೇ ರೀತಿ, ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಬಿ. ಚವ್ಹಾಣ್ ಕೂಡ ಔರಾದ್ ಮತ್ತು ಕಮಲನಗರ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪಕ್ಷಗಳು ಭಿನ್ನವಾಗಿದ್ದರೂ, ಎಲ್ಲ ಶಾಸಕರ ಉದ್ದೇಶ ಮತ್ತು ಬೇಡಿಕೆ ಮಾತ್ರ ಒಂದೇ ಆಗಿರುವುದು ಸ್ಪಷ್ಟವಾಗಿದೆ.

ಬರ ಘೋಷಣೆಗೆ ಇಷ್ಟೊಂದು ಬೇಡಿಕೆ ಏಕೆ?

ಒಂದು ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಅದರ ಹಿಂದೆ ದೊಡ್ಡ ಆರ್ಥಿಕ ಮತ್ತು ರಾಜಕೀಯ ಲೆಕ್ಕಾಚಾರಗಳಿವೆ. ಅಧಿಕೃತವಾಗಿ ಬರ ಘೋಷಣೆಯಾದ ನಂತರ ಸರ್ಕಾರದ ವಿಪತ್ತು ನಿರ್ವಹಣಾ ವ್ಯವಸ್ಥೆಯಡಿ (ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್) ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಮತ್ತು ಬೆಳೆ ಹಾನಿ ಪರಿಹಾರಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ಲಭ್ಯವಾಗುತ್ತದೆ. ಅಗತ್ಯವಿದ್ದರೆ ಕೇಂದ್ರ ಸರ್ಕಾರದಿಂದಲೂ ಹೆಚ್ಚುವರಿ ನೆರವು ಪಡೆಯಲು ಅವಕಾಶವಿರುತ್ತದೆ.

ಬರ ಘೋಷಣೆಯಾದ ತಕ್ಷಣ ಎಲ್ಲ ರೈತರ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮೆಯಾಗುವುದಿಲ್ಲ. ಬೆಳೆ ಹಾನಿಯ ಪ್ರಮಾಣ, ಸರ್ಕಾರದ ಮಾರ್ಗಸೂಚಿ ಮತ್ತು ಲಭ್ಯವಿರುವ ನಿಧಿಗಳ ಆಧಾರದ ಮೇಲೆ ಪರಿಹಾರ ನಿರ್ಧಾರವಾಗುತ್ತದೆ. ಹೀಗಿದ್ದರೂ ಶಾಸಕರು ಒತ್ತಡ ಹೇರುತ್ತಿರುವುದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಸಂಕಷ್ಟದಲ್ಲಿರುವ ತಮ್ಮ ಕ್ಷೇತ್ರದ ಜನರಿಗೆ ಅಧಿಕೃತ ಪರಿಹಾರ ವ್ಯವಸ್ಥೆ ತ್ವರಿತವಾಗಿ ದೊರೆಯಬೇಕು ಎಂಬ ಕಳಕಳಿ. ಎರಡನೆಯದಾಗಿ, ಜನರ ಸಮಸ್ಯೆ ಪರಿಹರಿಸಲು ತಾವು ಸರ್ಕಾರದ ಮಟ್ಟದಲ್ಲಿ ಎಷ್ಟೊಂದು ಹೋರಾಟ ಮಾಡಿದ್ದೇವೆ ಎಂಬ ರಾಜಕೀಯ ಸಂದೇಶವನ್ನು ತಮ್ಮ ಕ್ಷೇತ್ರದ ಮತದಾರರಿಗೆ ರವಾನಿಸುವ ಉದ್ದೇಶವೂ ಇದರ ಹಿಂದಿದೆ.

ಸರ್ಕಾರದ ನಿಲುವು ಮತ್ತು ನೆಲಮಟ್ಟದ ವಾಸ್ತವ ಪರಿಶೀಲನೆ

ಶಾಸಕರ ಈ ತೀವ್ರ ಒತ್ತಡಗಳಿಗೆ ಪ್ರತಿಕ್ರಿಯಿಸಿರುವ ಸರ್ಕಾರ, ಕೇವಲ ರಾಜಕೀಯ ಒತ್ತಡ ಅಥವಾ ಬೇಡಿಕೆಗಳ ಆಧಾರದ ಮೇಲೆ ಬರಪೀಡಿತ ತಾಲೂಕುಗಳನ್ನು ಘೋಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮಳೆ ಪ್ರಮಾಣ, ಬಿತ್ತನೆ ಪ್ರಮಾಣ, ಬೆಳೆಗಳ ಸ್ಥಿತಿ, ಮಣ್ಣಿನ ತೇವಾಂಶ ಮತ್ತು ಜಲಮೂಲಗಳ ಲಭ್ಯತೆಯಂತಹ ವೈಜ್ಞಾನಿಕ ಮಾನದಂಡಗಳನ್ನು ಆಧರಿಸಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಇದಕ್ಕಾಗಿ ಆಡಳಿತ ಯಂತ್ರವು 'ನೆಲಮಟ್ಟದ ವಾಸ್ತವ ಪರಿಶೀಲನೆ' ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಕೇವಲ ಕಾಗದದಲ್ಲಿರುವ ಅಂಕಿ-ಅಂಶಗಳು ಅಥವಾ ಉಪಗ್ರಹ ಚಿತ್ರಗಳನ್ನು ನೆಚ್ಚಿಕೊಳ್ಳದೆ, ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ತೆರಳಿ ಬೆಳೆ ಒಣಗಿದೆಯೇ, ಕೆರೆ-ಕಟ್ಟೆಗಳಲ್ಲಿ ನೀರಿದೆಯೇ ಮತ್ತು ಜಾನುವಾರುಗಳಿಗೆ ಮೇವು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಈ ವರದಿಗಳ ಆಧಾರದ ಮೇಲಷ್ಟೇ ಅಂತಿಮ ಘೋಷಣೆ ಮಾಡಲಾಗುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಈ ವೈಜ್ಞಾನಿಕ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದರಿಂದಲೇ ಶಾಸಕರು ತಕ್ಷಣದ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಮುಗಿಬೀಳುತ್ತಿದ್ದಾರೆ.

ಬರ ನಿರ್ವಹಣೆಗೆ ಲಭ್ಯವಿರುವ ಹಣಕಾಸಿನ ಲೆಕ್ಕಾಚಾರ

ಬರ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರದ ಬಳಿ ಹಣವಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ವಿಧಾನಮಂಡಲದಲ್ಲಿ ಪ್ರಸ್ತುತ ಪರಿಸ್ಥಿತಿ ಮತ್ತು ಹಣಕಾಸಿನ ಲಭ್ಯತೆಯ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದಾರೆ. ಅವರ ಮಾಹಿತಿಯ ಪ್ರಕಾರ, ರಾಜ್ಯದಾದ್ಯಂತ ಶೇ 36ರಷ್ಟು ಮಳೆ ಕೊರತೆಯಾಗಿದ್ದು, 222 ತಾಲೂಕುಗಳು ಮಳೆ ಅಭಾವವನ್ನು ಎದುರಿಸುತ್ತಿವೆ. 111 ತಾಲೂಕುಗಳ ವ್ಯಾಪ್ತಿಯ 531 ಗ್ರಾಮಗಳಲ್ಲಿ ಹಾಗೂ 15 ನಗರ ಸ್ಥಳೀಯ ಸಂಸ್ಥೆಗಳ 81 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಈಗಾಗಲೇ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಗಳಿಗಾಗಿ 117 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸಣ್ಣ ಜಿಲ್ಲೆಗಳಿಗೆ ತಲಾ 3 ಕೋಟಿ ರೂಪಾಯಿ ಹಾಗೂ ದೊಡ್ಡ ಜಿಲ್ಲೆಗಳಿಗೆ 5ರಿಂದ 6 ಕೋಟಿ ರೂಪಾಯಿ ನೀಡಲಾಗಿದೆ. ಇದರ ಜೊತೆಗೆ, ರಾಜ್ಯದ ಶಾಸಕರ ಕ್ಷೇತ್ರಗಳಲ್ಲಿನ ತುರ್ತು ನೀರಿನ ಸಮಸ್ಯೆ ಬಗೆಹರಿಸಲು ತಲಾ 1 ಕೋಟಿ ರೂಪಾಯಿಯಂತೆ ಒಟ್ಟು 189 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಈ 306 ಕೋಟಿ ರೂಪಾಯಿಗಳ ಹೊರತಾಗಿ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟಾರೆ 420 ಕೋಟಿ ರೂಪಾಯಿ ಹಣ ಲಭ್ಯವಿದೆ. ಅಗತ್ಯವಿರುವ ಕಡೆ ಕುಡಿಯುವ ನೀರು ಮತ್ತು ಮೇವು ಒದಗಿಸಲು ಈ ಹಣವನ್ನು ತಕ್ಷಣವೇ ಬಳಸಿಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಸರ್ಕಾರ ವಿವರಿಸಿದೆ.

ಆಡಳಿತಾತ್ಮಕ ಸಿದ್ಧತೆಗಳು

ಬರ ನಿರ್ವಹಣೆಗಾಗಿ ಸರ್ಕಾರ ಇದುವರೆಗೆ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಒಟ್ಟು 1,160 ಸಭೆಗಳನ್ನು ನಡೆಸಿದೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು 84, ಮುಖ್ಯಮಂತ್ರಿ 8, ಉಪಮುಖ್ಯಮಂತ್ರಿ 9 ಹಾಗೂ ವಿಭಾಗೀಯ ಆಯುಕ್ತರು 10 ಸಭೆಗಳನ್ನು ನಡೆಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಿತ್ರದುರ್ಗ, ಗದಗ, ಬಾಗಲಕೋಟೆ, ಕಲಬುರಗಿ, ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಒಟ್ಟಾರೆಯಾಗಿ, ಕರ್ನಾಟಕದಲ್ಲಿ ಇಂದು ಮಳೆ ಕೊರತೆ ಮತ್ತು ಬರದ ನೈಜ ವಾಸ್ತವದ ಜೊತೆಗೆ, ಅದನ್ನು ಘೋಷಿಸುವ ಸುತ್ತಲಿನ ರಾಜಕೀಯ ಲೆಕ್ಕಾಚಾರಗಳೂ ಸಮಾನಾಂತರವಾಗಿ ನಡೆಯುತ್ತಿವೆ. ಪ್ರಸಿದ್ಧ ಪತ್ರಕರ್ತ ಪಿ. ಸಾಯಿನಾಥ್ ಅವರ ಬಹುಚರ್ಚಿತ ಕೃತಿ 'ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್' (ಬರ ಅಂದ್ರೆ ಎಲ್ಲರಿಗೂ ಇಷ್ಟ) ಹೇಳುವಂತೆ, ಬರ ಎನ್ನುವುದು ಕೇವಲ ಮಳೆ ಬಾರದ ನೈಸರ್ಗಿಕ ವಿಕೋಪವಲ್ಲ; ಅದರ ಸುತ್ತಲಿನ ಆಡಳಿತ, ಹಣಕಾಸು ಮತ್ತು ರಾಜಕೀಯವೂ ಒಂದು ಬಹುದೊಡ್ಡ ಕಥೆ. ಇದೇ ವಾಸ್ತವ ಈಗ ಕರ್ನಾಟಕದಲ್ಲಿ ಅನಾವರಣಗೊಳ್ಳುತ್ತಿದ್ದು, ರಾಜಕೀಯ ಒತ್ತಡಗಳನ್ನು ಮೀರಿ ನೈಜ ಸಂತ್ರಸ್ತರಿಗೆ ಸರ್ಕಾರ ಎಷ್ಟು ತ್ವರಿತವಾಗಿ ಪರಿಹಾರ ತಲುಪಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.

Read More
Next Story