x

ಬರ ಪರಿಹಾರ| ಸರ್ವಪಕ್ಷ ನಿಯೋಗಕ್ಕೆ ನಕಾರ; ಪಾದಯಾತ್ರೆ ವಿಪಕ್ಷಗಳ ಜೈಕಾರ

ಸರ್ವ ಪಕ್ಷ ನಿಯೋಗ ಕೊಂಡೊಯ್ಯುವ ಕುರಿತ ಡಿ.ಕೆ.ಶಿವಕುಮಾರ್ ಆಹ್ವಾನವನ್ನು ವಿಪಕ್ಷಗಳು ತಿರಸ್ಕರಿಸುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಭಾರತ್ ಜೋಡೊ-2 ಪಾದಯಾತ್ರೆಗೆ ಸಿದ್ಧತೆ ನಡೆಸಿದೆ. ಕೆಪಿಎಸ್‌ಸಿ ಪ್ರಕರಣದ ಕಿಂಗ್‌ಪಿನ್ ಬಳಿ 'ಸೀಕ್ರೆಟ್ ಡೈರಿ' ಸಿಕ್ಕಿದ್ದು, ಅಕ್ರಮ ಹಣದ ವಹಿವಾಟಿನ ರಹಸ್ಯ ಬಯಲಾಗಿದೆ.


ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದ್ದರೂ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗದಲ್ಲಿ ತೆರಳಲು ನಿರಾಕರಿಸಿ, ಪಾದಯಾತ್ರೆ ಮೊರೆ ಹೋಗಿರುವ ವಿಪಕ್ಷಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸರ್ವಪಕ್ಷ ನಿಯೋಗದ ಆಹ್ವಾನವನ್ನು ವಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ತಿರಸ್ಕರಿಸುವ ಬರದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ರೈತ ಸಮುದಾಯ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಮಧ್ಯಂತರ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ 3,700 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಅನುದಾನ ಪಡೆಯುವ ಉದ್ದೇಶದಿಂದ ಎಲ್ಲಾ ಪಕ್ಷಗಳ ನಾಯಕರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿತ್ತು. ಆದರೆ, ವಿಪಕ್ಷಗಳು ರಾಜ್ಯ ಸರ್ಕಾರದ ಆಹ್ವಾನವನ್ನು ಧಿಕ್ಕರಿಸಿದ್ದು, ರಾಜ್ಯ ಸರ್ಕಾರವೇ ಸ್ವಂತ ಶಕ್ತಿಯಿಂದ ಬರ ಪರಿಹಾರ ನೀಡಲಿ ಎಂದು ಟಾಂಗ್‌ ಕೊಟ್ಟಿವೆ.

ರಾಜ್ಯ ಸರ್ಕಾರವು ಕೇಂದ್ರದ ಮುಂದೆ ಕೈಕಟ್ಟಿ ನಿಲ್ಲುವ ಬದಲು, ಸ್ವಂತ ಸಂಪನ್ಮೂಲ ಬಳಸಿ ರೈತರ ಸಾಲ ಮನ್ನಾ ಮಾಡಬೇಕು. ತುರ್ತು ಪರಿಹಾರ ವಿತರಿಸಬೇಕು. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ಕೇಂದ್ರದ ಮೇಲೆ ಗೂಬೆ ಕೂರಿಸಲು ಸರ್ವಪಕ್ಷ ನಿಯೋಗದ ನಾಟಕವಾಡಲಾಗುತ್ತಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ. ಕನಕಪುರದಿಂದ ಜೆಡಿಎಸ್ ಸಹಸ್ರಾರು ರೈತರು, ಕಾರ್ಯಕರ್ತರೊಂದಿಗೆ ರೈತ ಸ್ವಾಭಿಮಾನ ಯಾತ್ರೆ ಆರಂಭಿಸಿರುವುದರ ಹಿಂದೆ ಚುನಾವಣಾ ಲಾಭದ ಉದ್ದೇಶವೂ ಇದೆ ಎಂದು ಆರೋಪಿಸಲಾಗಿದೆ.

2ನೇ ಭಾರತ್‌ ಜೋಡೋ ಪಾದಯಾತ್ರೆ ʼಕೈ’ ಸಿದ್ಧತೆ

2028ರ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಕ್ಷೇತ್ರಗಳನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷ ಭಾರತ್ ಜೋಡೊ-2 ಪಾದಯಾತ್ರೆಗೆ ಸಿದ್ಧತೆ ನಡೆಸಿದೆ.

ರಾಹುಲ್ ಗಾಂಧಿಯವರ ಐತಿಹಾಸಿಕ 'ಭಾರತ್ ಜೋಡೋ' ಪಾದಯಾತ್ರೆಗೆ ನಾಲ್ಕು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಸೆ. 30ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಭಾರತ್‌ ಜೋಡಿ-2 ಪಾದಯಾತ್ರೆ ಅಧಿಕೃತವಾಗಿ ಆರಂಭವಾಗಲಿದೆ. ರಾಹುಲ್ ಗಾಂಧಿಯವರು ತಮ್ಮ ಹಿಂದಿನ ಪಾದಯಾತ್ರೆಯಲ್ಲಿ ಗೈರಾದ ರಾಜ್ಯದ 29 ಜಿಲ್ಲೆಗಳ 84 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ.

ಸೆಪ್ಟೆಂಬರ್ 30ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಭಾರತ್‌ ಜೋಡೊ-2ಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ ಸಂಜೆವರೆಗೆ ಸುಮಾರು 10 ಕಿಲೋಮೀಟರ್‌ಗಳಷ್ಟು ಪಾದಯಾತ್ರೆ ನಡೆಯಲಿದ್ದು, ಸಂಜೆ ಸಾರ್ವಜನಿಕ ಸಭೆಯೊಂದಿಗೆ ದಿನದ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಎಲ್ಲಾ 84 ಕ್ಷೇತ್ರಗಳಲ್ಲಿ ಪಾದಯಾತ್ರೆ ಪೂರ್ಣಗೊಂಡ ನಂತರ ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರದಲ್ಲಿ ಬೃಹತ್ ಸಮಾರೋಪ ಸಮಾರಂಭ ಏರ್ಪಡಿಸಲು ಉದ್ದೇಶಿಸಲಾಗಿದೆ.

ಭಾರತ್‌ ಜೋಡೋ-2 ಪಾದಯಾತ್ರೆ ಉದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ವಿರುದ್ಧ ಜನಜಾಗೃತಿ ಮೂಡಿಸುವುದು ಮತ್ತು ಸಂವಿಧಾನವನ್ನು ರಕ್ಷಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಒಂದೆಡೆ ಜೆಡಿಎಸ್‌ ಹಾಗೂ ಬಿಜೆಪಿ ಕೂಡ ಪಾದಯಾತ್ರೆ ಹೆಸರಲ್ಲಿ ಮತದಾರರನ್ನು ತಲುಪುವ ಪ್ರಯತ್ನ ನಡೆಸುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್‌ ಕೂಡ ಅಧಿಕೃತವಾಗಿ ಭಾರತ್‌ ಜೋಡೊ-2 ಹೆಸರಲ್ಲಿ ಪಕ್ಷ ಸಂಘಟನೆ ಹಾಗೂ ಮುಂದಿನ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಾದಯಾತ್ರೆಗೆ ಮುಂದಾಗಿದೆ.

ಕೆಪಿಎಸ್‌ಸಿ ಕಿಂಗ್‌ಪಿನ್‌ ಡೈರಿ ರಹಸ್ಯ

ತೀವ್ರ ಸಂಚಲನ ಸೃಷ್ಟಿಸಿರುವ ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಐಡಿ ಅಧಿಕಾರಿಗಳಿಗೆ ಅತ್ಯಂತ ಮಹತ್ವದ ಸಾಕ್ಷ್ಯಾಧಾರವೊಂದು ಲಭ್ಯವಾಗಿದೆ.

ಪ್ರಕರಣದ ಪ್ರಮುಖ ಸಂಚುಕೋರ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ ವೇಳೆ ಆತನ 'ಸೀಕ್ರೆಟ್ ಡೈರಿ' ಸಿಕ್ಕಿಬಿದ್ದಿದ್ದು, ಅದರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣದ ವಹಿವಾಟಿನ ರಹಸ್ಯ ಬಯಲಾಗಿದೆ.

ಬಸವರಾಜ್ ಕನ್ನಾಳೆ ತನ್ನ ಡೈರಿಯಲ್ಲಿ ಅಭ್ಯರ್ಥಿಗಳಿಂದ ಬರಬೇಕಾದ ಲಕ್ಷಾಂತರ ರೂಪಾಯಿ ಹಣದ ಲೆಕ್ಕವನ್ನು ಸ್ವತಃ ಕನ್ನಡದಲ್ಲಿಯೇ ವಿವರವಾಗಿ ಬರೆದಿಟ್ಟಿದ್ದಾನೆ. ದಾಳಿ ವೇಳೆ ಜಪ್ತಿಯಾದ ಈ ಡೈರಿ ಹಾಳೆಯಲ್ಲಿ ವಿವಿಧ ಅಭ್ಯರ್ಥಿಗಳಿಂದ ಮುಂಗಡ ಹಾಗೂ ಬಾಕಿ ಬರಬೇಕಿದ್ದ ಮೊತ್ತವನ್ನು ನಮೂದಿಸಲಾಗಿದೆ.

ಪ್ರಮುಖವಾಗಿ ಎಂಟು ಅಭ್ಯರ್ಥಿಗಳ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಂಜುನಾಥ್- ₹10 ಲಕ್ಷ, ಪೂಜಾ- ₹10 ಲಕ್ಷ, ಅಶ್ವಿನಿ ಕುಮಾರ್- ₹10 ಲಕ್ಷ, ಸಂಗಮೇಶ್- ₹10 ಲಕ್ಷ, ಪದ್ಮಾವತಿ- ₹10 ಲಕ್ಷ, ಹರೀಶ್- ₹10 ಲಕ್ಷ, ಮೋಹನ್ ಕುಮಾರ್- ₹5 ಲಕ್ಷ ಸೇರಿದಂತೆ ಒಟ್ಟು 65 ಲಕ್ಷಕ್ಕೂ ಹೆಚ್ಚು ಮೊತ್ತ ಬಾಕಿ ಬರಬೇಕಿದೆ ಎಂದು ಡೈರಿಯಲ್ಲಿ ದಾಖಲಿಸಲಾಗಿದೆ.

ಈ ಮಧ್ಯೆ, ಓಎಂಆರ್ ಶೀಟ್‌ ತಿದ್ದುಪಡಿ ಹಾಗೂ ಅಂಕಗಳ ಅಕ್ರಮ ಪತ್ತೆಹಚ್ಚಲು 329 ಒಎಂಆರ್‌ ಶೀಟ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜ್ಞಾನೇಂದ್ರ ಕುಮಾರ್ ಅಧಿಕಾರದ ಅವಧಿಯಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಆರ್ಡಿಪಿಆರ್ ಹಾಗೂ ಕೈಗಾರಿಕಾ ಇಲಾಖೆಯ ಇತರ ನೇಮಕಾತಿ ಪರೀಕ್ಷೆಗಳ ಮೇಲೆಯೂ ಇಡಿ ಮತ್ತು ಸಿಐಡಿ ಕಣ್ಣಿಟ್ಟಿವೆ.

Read More
Next Story