ಕರ್ನಾಟಕದಲ್ಲಿ ಭೀಕರ ಬರಗಾಲ: ಡ್ಯಾಂಗಳಲ್ಲಿ ನೀರಿಲ್ಲ, ಕೃಷಿ-ವಿದ್ಯುತ್‌ಗೆ ತೀವ್ರ ಸಂಕಷ್ಟ
ಕರ್ನಾಟಕದಲ್ಲಿ ಎಲ್ ನಿನೋದಿಂದ ಭೀಕರ ಬರಗಾಲ. 178 ತಾಲೂಕುಗಳಲ್ಲಿ ಮಳೆ ಅಭಾವ, ಜಲಾಶಯಗಳು ಖಾಲಿ, ವಿದ್ಯುತ್ ಕೊರತೆ ಹಾಗೂ ಕೃಷಿ ಬಿಕ್ಕಟ್ಟಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಉಂಟಾಗಿರುವ 'ಎಲ್ ನಿನೋ' ಪರಿಣಾಮದಿಂದಾಗಿ ಮಾನ್ಸೂನ್ ಮಾರುತಗಳು ಕ್ಷೀಣಿಸಿ ಕರ್ನಾಟಕದಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಜುಲೈ ಮಧ್ಯಭಾಗದ ವೇಳೆಗೆ ರಾಜ್ಯದಲ್ಲಿ ಶೇಕಡಾ 67ರಷ್ಟು ಮಳೆ ಕೊರತೆ ದಾಖಲಾಗಿದ್ದು, ಕೆ.ಆರ್.ಎಸ್, ಆಲಮಟ್ಟಿ ಮತ್ತು ತುಂಗಭದ್ರಾ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿದಿದೆ. ಬರಿ ದೊಡ್ಡ ಡ್ಯಾಮ್‌ಗಳು ಮಾತ್ರವಲ್ಲದೆ, ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಶೇಕಡಾ ೮೫ ರಷ್ಟು ಕೆರೆಗಳು ಅರ್ಧದಷ್ಟು ಕೂಡ ಭರ್ತಿಯಾಗದೆ ಬಣಬಣಗುಡುತ್ತಿವೆ. ರಾಜ್ಯದ ಒಟ್ಟು 178ತಾಲೂಕುಗಳು ಬರದ ಬಿಸಿಗೆ ತತ್ತರಿಸಿದ್ದು, ಇದರಲ್ಲಿ 158 ತಾಲೂಕುಗಳಲ್ಲಿ ತೀವ್ರ ಅಭಾವ ಪರಿಸ್ಥಿತಿ ಇದ್ದರೆ, 20 ತಾಲೂಕುಗಳಲ್ಲಿ ಒಂದು ಹನಿ ಮಳೆಯೂ ಬೀಳದೆ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಈ ಮಳೆ ಅಭಾವದಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಕಂಗೆಟ್ಟಿದ್ದು, ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ ಮತ್ತು ಜಾನುವಾರುಗಳಿಗೆ ಮೇವಿನ ತೀವ್ರ ಕೊರತೆ ಎದುರಾಗಿದೆ. ಇದರೊಂದಿಗೆ ಜಲವಿದ್ಯುತ್ ಉತ್ಪಾದನೆಯಲ್ಲಿ ಶೇಕಡಾ 25ರಿಂದ 30 ರಷ್ಟು ಕಡಿತ ಉಂಟಾಗಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ, ಕೈಗಾರಿಕೆಗಳಿಗೆ ಮತ್ತು ಮನೆಬಳಕೆಗೆ ವಿದ್ಯುತ್ ಪೂರೈಕೆ ಮಾಡುವುದು ದೊಡ್ಡ ಸವಾಲಾಗಿದೆ. ಉದ್ಯೋಗ ಮತ್ತು ನೀರಿನ ಅಭಾವದಿಂದಾಗಿ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಜನ ಉದ್ಯೋಗ ಅರಸಿ ಬೆಂಗಳೂರಿನಂತಹ ನಗರಗಳಿಗೆ ಗುಳೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಕೆ.ಆರ್.ಎಸ್ ಜಲಾಶಯದಲ್ಲಿ ನೀರಿಲ್ಲದಿರುವುದು ಮತ್ತು ನೆರೆಯ ರಾಜ್ಯಗಳಿಗೆ ನೀರು ಹಂಚಿಕೆ ಮಾಡುವ ಒತ್ತಡವಿರುವುದರಿಂದ ಬೆಂಗಳೂರು ನಗರಕ್ಕೂ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವುದು ಖಚಿತವಾಗಿದೆ.
ಈ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ತುರ್ತು ಸಭೆಗಳನ್ನು ನಡೆಸಿ, ಪ್ರತಿ ತಾಲೂಕಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪರಿಹಾರ ನಿಧಿ ಬಿಡುಗಡೆ ಮಾಡಿದೆ. ಕೃಷಿಗಿಂತ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಸೃಷ್ಟಿಸಿ ಗುಳೆ ಹೋಗುವುದನ್ನು ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು ಹೆಚ್ಚಿನ ನೀರು ಬೇಡುವ ಬೆಳೆಗಳನ್ನು ಸದ್ಯಕ್ಕೆ ಬಿತ್ತನೆ ಮಾಡದಂತೆ ಸಲಹೆ ನೀಡಲಾಗಿದೆ. ಸರ್ಕಾರವು ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಸಾರ್ವಜನಿಕರು ಕೂಡ ನೀರನ್ನು ಮಿತವಾಗಿ ಬಳಸಿ ಈ ಪ್ರಾಕೃತಿಕ ಸವಾಲನ್ನು ಎದುರಿಸುವುದು ಇಂದಿನ ಅಗತ್ಯವಾಗಿದೆ.

